ಆಕಾಶವಾಣಿಯ “ವಂದನ’ ಕಾರ್ಯಕ್ರಮವನ್ನು ಕೇಳುತ್ತ ಬೆಳಗಿನ ಅಡುಗೆ ಕೆಲಸದಲ್ಲಿ ಮುಳುಗಿರುವಾಗಲೇ ಮೇಲೆ ಹಳೆಯ ಸಾಮಾನುಗಳನ್ನು ತುಂಬಿಡುವ ರಟ್ಟಿನ ಪೆಟ್ಟಿಗೆಯಲ್ಲಿ ಏನೋ ಗರಬರ ಶಬ್ದ ಕೇಳಿದಂತಾಯಿತು. ತಕ್ಷಣ ಗತಕಾಲದ ಅಪಾಯದ ವಾಸನೆ ಮೂಗಿಗೆ ಬಡಿದು, “”ರೀ, ಬನ್ನಿ ಇಲ್ಲಿ, ಅಡುಗೆ ಮನೆಯಲ್ಲಿ ಇಲಿ ಇದ್ದಂಗಿದೆ” ಎಂದು ಕೂಗುಹಾಕಿದೆ. ಆಗ ತಾನೇ ಬಂದ ಪೇಪರ್ ಹಿಡಿದು ಸೋಫಾದಲ್ಲಿ ಸುಖಾಸೀನರಾಗಿ ಕುಳಿತ ಪತಿರಾಯರು ಓದಿನ ಸುಖದ ಅಮಲಿನಲ್ಲಿಯೇ ಪೇಪರನ್ನು ಹಿಡಿದು ಒಳಬಂದು, “”ಎಲ್ಲಿ ಇಲಿ?” ಎಂದರು. ಮೇಲೆ ಪೆಟ್ಟಿಗೆಯಲ್ಲಿ ಎಂದೊಡನೆ ರಟ್ಟಿನ ಡಬ್ಬವನ್ನು ಕೆಳಗಿನಿಂದಲೇ ಅಲುಗಿಸಿ, ಇಲಿ ಇಲ್ಲವೆಂದು ಘೋಷಿಸಿ ಅಲ್ಲಿಂದ ಪಾರಾಗುವ ಆಲೋಚನೆ ಮಾಡಿದರು. “”ಇಲಿ ಇದ್ದರೆ ಓಡುತ್ತಿತ್ತು ನಿಜ. ಮರಿ ಹಾಕಿ ಹೋಗಿದೆಯೇನೋ? ಶಬ್ದವಾದದ್ದಂತೂ ಖಂಡಿತ” ಎಂದು ನಾನು ನನ್ನ ಪಾಟೀ ಸವಾಲನ್ನು ಮುಂದುವರೆಸಿದೆ. ಅದಕ್ಕೂ ಪತಿರಾಯರು ಬಗ್ಗದೇ ಇರುವ ಲಕ್ಷಣಗಳು ಗೋಚರಿಸಲಾಗಿ, “”ನೋಡಿ, ಆ ಸಲದಂತೆ ಮತ್ತೆ ಎಣ್ಣೆ ಕ್ಯಾನನ್ನು ಕಡೆದು ಹಾಕಿದರೆ ನನ್ನನ್ನು ದೂರಬೇಡಿ” ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆ. ಲೀಟರುಗಟ್ಟಲೆ ಎಣ್ಣೆ ರಾತ್ರಿ ಬೆಳಗಾಗುವುದರೊಳಗೆ ನೀರಾಗಿ ಹರಿದುಹೋಗಿ ಆದ ನಷ್ಟವಲ್ಲದೇ ಅದನ್ನು ಸ್ವತ್ಛಗೊಳಿಸುವಾಗಿನ ಪೇಚಾಟದ ಹಳೆಯ ಕರಾಳ ನೆನಪುಗಳು ನುಗ್ಗಿ ಬಂದ ಕೂಡಲೇ ಪತಿರಾಯರು ಕೈಯಲ್ಲಿರುವ ಪೇಪರನ್ನು ಅÇÉೇ ಎಸೆದು ಇಲಿಯ ಅನ್ವೇಷಣೆಗೆ ಮುಂದಾದರು.
ಅದೇನೋ ಈ ಇಲಿಗಳಿಗೂ ನನಗೂ ಜನ್ಮಾಂತರದ ನಂಟು. ಬಾಲ್ಯದ ಕಾಲದಲ್ಲಿ ಸೋಗೆಯ ಮಾಡಿನ ನಮ್ಮ ಮನೆಯನ್ನು ಹೊದೆಸುವ ದಿನ ಬಚ್ಚಿಟ್ಟುಕೊಂಡಿದ್ದ ಇಲಿಗಳೆಲ್ಲ ಒಮ್ಮೆಲೇ ಹೊರಬಂದು ಅವುಗಳಲ್ಲಿ ಕೆಲವು ಕೆಲಸಗಾರರ ಕೈಗೆ ಸಿಕ್ಕು ಸ್ವರ್ಗ ಸೇರುತ್ತಿದ್ದವು. ಅದೃಷ್ಟವಿದ್ದವುಗಳೆಲ್ಲ ಹತ್ತಿರದ ಅಡಿಕೆ ಮರಗಳಿಗೆ ಜಿಗಿದು ತಪ್ಪಿಸಿಕೊಳ್ಳುತ್ತಿದ್ದವು. ಆದರೆ, ಅಸಹಾಯಕರಾಗಿ ಚೀಂವ್‌ಗುಡುವ ಇನ್ನೂ ಕೆಂಪು ಆರಿರದ ಹತ್ತಾರು ಮರಿಗಳು ಮಾತ್ರ ರಟ್ಟಿನ ಡಬ್ಬಗಳಲ್ಲಿ ಮಲಗಿ ಮನೆಯಿಂದ ನಿಷ್ಕರುಣೆಯಿಂದ ಹೊರಹಾಕಲ್ಪಡುತ್ತಿದ್ದವು. ಅಮ್ಮನ ಆಸರೆಯಿಂದ ಹೊರದೂಡಲ್ಪಟ್ಟ ಕ್ಷಣಮಾತ್ರದಲ್ಲಿಯೇ ಕಾಗೆಗಳ ದಂಡು ಅವುಗಳನ್ನು ಕಚ್ಚಿಕೊಂಡು ಹೋಗಿ ಜೀವಂತ ಭೋಜನ ಮಾಡುತ್ತಿದ್ದವು. ಆಗೆಲ್ಲ ಇಲಿಗಳ ಪರವಾಗಿ ನಮ್ಮ ಮನೆಯಲ್ಲಿ ವಕಾಲತು ವಹಿಸುತ್ತಿದ್ದವಳೆಂದರೆ ನಾನು ಮಾತ್ರ. ಆದರೆ, ನನ್ನ ವಕಾಲತ್ತಿಗೆ ಯಾರೂ ಕಿಂಚಿತ್ತೂ ಕಿಮ್ಮತ್ತು ಕೊಡುತ್ತಿರಲಿಲ್ಲ. ಮನೆಯಲ್ಲಿ ಇಲಿಗಳ ಉಪಟಳ ಜಾಸ್ತಿಯಾದಾಗ ಬೆಕ್ಕೆಂದರೆ ಮೂಗು ಮುರಿಯುತ್ತಿದ್ದ ಅಪ್ಪ ಯಾರದೋ ಮನೆಯಿಂದ ಬೆಕ್ಕಿನ ಮರಿಯೊಂದನ್ನು ಚೀಲದಲ್ಲಿ ಕಟ್ಟಿ ತಂದಿದ್ದರು. ಅಮ್ಮನನ್ನು ಅಗಲಿದ ಮರಿ ಹಗಲಿರುಳು “ಮಿಯಾಂವ್… ಮಿಯಾಂವ್…’ ಎಂದು ಅರಚುತ್ತಿದ್ದರೆ, ಮನೆಯೊಳಗಿರುವ ಇಲಿಗಳೆಲ್ಲ ಅಡಿಕೆ ಮರಕ್ಕೆ ಹಾರಿ ತೋಟ ಸೇರಿಕೊಂಡಿದ್ದವು. ನಮ್ಮ ಮನೆಯಲ್ಲಿ ಗಡ¨ªಾಗಿ ಹಾಲು ಮೊಸರು ಹೊಡೆಯುತ್ತಿದ್ದ ಬೆಕ್ಕು ಇಡೀದಿನ ಒಲೆಯ ಪಕ್ಕದಲ್ಲಿ ಕುಳಿತು ನಿದ್ರಿಸುತ್ತಿದ್ದರೂ ಅದರ ಇರವೇ ಇಲಿಗಳಿಗೆ ಇರಿಸುಮುರಿಸು ಉಂಟುಮಾಡಿರಬೇಕು. ಅಂತೂ ಮನೆಯಲ್ಲಿ ಇಲಿಗಳ ಕಾಟ ಕಡಿಮೆಯಾಗಿ, ಅಪ್ಪ ನಮಗೆಲ್ಲ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು? ಎಂಬ ರಂಜನೀಯ ಕಥೆ ಹೇಳಿದ್ದರು.
ಇದ್ದಕ್ಕಿದ್ದಂತೆ ತೋಟದ ತುಂಬೆಲ್ಲ ಚಿಗುರಡಿಕೆಗಳು ಸಾಲುಸಾಲಾಗಿ ರಾಶಿ ಬೀಳತೊಡಗಿದಾಗಲೇ ಇಲಿಗಳ ಇನ್ನೊಂದು ಮಸಲತ್ತು ಬಯಲಾಗಿತ್ತು. ಮನೆಯಿಂದ ಹೊರದೂಡಲ್ಪಟ್ಟ ಇಲಿಗಳು ಅಡಿಕೆ ಮರದ ಮೇಲೆ ತಮ್ಮ ಕಾರುಬಾರು ಶುರುಮಾಡಿದ್ದವು. ಅಪ್ಪ ಅವರಿವರಲ್ಲಿ ಈ ತೊಂದರೆಯ ನಿವಾರಣೆಯ ಬಗ್ಗೆ ಚರ್ಚಿಸಿ ಮನೆದೇವರಾದ ಮಹಾಗಣಪತಿಗೆ ಹರಕೆ ಹೊತ್ತು ತಲೆ ಕೆರೆದುಕೊಳ್ಳುತ್ತ ಕುಳಿತಿರುವಾಗಲೇ ಅಪ್ಪನ ಸ್ನೇಹಿತನಾದ ಗಣಪಯ್ಯ ಇಲಿ ನಿವಾರಣೆಗೆ ಆಧುನಿಕವಾದ ಉಪಾಯವೊಂದನ್ನು ಸೂಚಿಸಿದ್ದರು. ಅದರಂತೆ ಪೇಟೆಯಲ್ಲಿ ಅವನು ಸೂಚಿಸಿರುವ ಅಂಗಡಿಯಿಂದ ಇಲಿ ಸಾಯಿಸುವ ಔಷಧವೊಂದನ್ನು ತರಲು ಕಾಲೇಜಿಗೆ ಹೋಗುವ ನನ್ನನ್ನು ನಿಯೋಜಿಸಲಾಯಿತು. ಮೊದಮೊದಲು ಈ ಪಾಪದ ಜೀವಿಗಳಿಗೆ ವಿಷವಿಕ್ಕುವ ಯೋಜನೆಯಲ್ಲಿ ಪಾಲುದಾರಳಾಗಲು ಮನಸೊÕಪ್ಪದಿದ್ದರೂ ಇರುವ ಅಡಿಕೆಯೆಲ್ಲ ಉದುರಿಹೋದರೆ ನನ್ನ ಕಾಲೇಜು ಮೊಟಕುಗೊಳ್ಳುವ ಭಯದಿಂದ ಇಲಿಪಾಷಾಣ ತರುವ ಕೆಲಸವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಯಿತು. ಹಾಗೆ ಗೆಳತಿಯೊಂದಿಗೆ ಕಾಲೇಜಿನಿಂದ ಮರಳುವಾಗ ವಿಷ ಖರೀದಿಯೂ ನಡೆಯಿತು. ಈಗಾದರೆ ಪಾಷಾಣವನ್ನು ವಿದ್ಯಾರ್ಥಿಗಳ ಕೈಯಲ್ಲಿ ಕೊಡಲು ಹಿಂಜರಿಯುತ್ತಿದ್ದರೇನೊ? ಆಗೆಲ್ಲ ಹೆಚ್ಚೆಂದರೆ ಮನೆಯಿಂದ ಓಡಿಹೋಗುವ ತಂತ್ರ ಮಾತ್ರ ವಿದ್ಯಾರ್ಥಿಗಳಿಗೆ ತಿಳಿದಿರುತ್ತಿದ್ದುದರಿಂದ ಇಲಿ ಪಾಷಾಣ ಸುಲಭವಾಗಿ ನನ್ನ ಕೈಸೇರಿತ್ತು. ಪ್ರಾಣಿಶಾಸ್ತ್ರ ಓದುತ್ತಿದ್ದ ನನ್ನ ಗೆಳತಿ ವಿಷವನ್ನು ಇಡುವಾಗ ಆ ವಿಷಯವನ್ನು ಗುಟ್ಟಾಗಿಡಬೇಕೆಂದು, ಇಲ್ಲವಾದಲ್ಲಿ ಇಲಿಗಳಿಗೆ ಗೊತ್ತಾಗಿ ತಿನ್ನುವುದೇ ಇಲ್ಲವೆಂದು ನನಗೆ ತಿಳುವಳಿಕೆ ನೀಡಿದಾಗ ಅಚ್ಚರಿಗೊಳ್ಳುವ ಸರದಿ ನನ್ನದಾಗಿತ್ತು. ಅವಳಲ್ಲಿ ನನ್ನ ಅಚ್ಚರಿಯನ್ನು ಮುಂದಿಟ್ಟಾಗ ಅವಳು ಇಲಿ ಗಣಪತಿಯ ವಾಹನವಾದ್ದರಿಂದ ಅದಕ್ಕೆ ನಾವು ಹೇಳಿ¨ªೆಲ್ಲ ಅರ್ಥವಾಗುವುದೆಂಬ ವಾದವನ್ನು ಮಂಡಿಸಿದಳು.
ನಾನು ಅವಳ ಪ್ರಾಣಿಶಾಸ್ತ್ರದ ಅನ್ವಯಗಳ ಬುಡವನ್ನೇ ಅÇÉಾಡಿಸಿ ಇನ್ನೇನು ಮಹಾಯುದ್ಧವಾಗುವುದೆನ್ನುವಾಗ ನನ್ನ ಹಳ್ಳಿಯ ಏಕಮೇವ ಬಸ್ಸು ತಪ್ಪುವುದೆಂಬ ಭರದಲ್ಲಿ ವಾದವನ್ನು ಅÇÉೇ ಕೈಬಿಟ್ಟು ಬಸ್ಸನ್ನೇರಿ¨ªೆ. ಇಲಿಪಾಷಾಣವನ್ನು ಬಾಳೆಹಣ್ಣಿನಲ್ಲಿ ಅಡಗಿಸಿಟ್ಟು ಅಡಿಕೆ ಮರಗಳಲ್ಲಿಡಿಸಿದ ಮಾರನೇ ದಿನವೇ ಅಡಿಕೆ ಉದುರಿದಂತೆ ಇಲಿಗಳು ಮರದಿಂದ ಉದುರಿದಾಗ ಅಪ್ಪ ಖುಷಿಯಿಂದ ಮುಖವರಳಿಸಿದರೆ, ನಾನು ಪಾಪಪ್ರಜ್ಞೆಯಿಂದ ಕುಸಿದಿ¨ªೆ. ಬಾಲ್ಯದಲ್ಲಿ ಗಣಪತಿ ಮುಳುಗಿಸುವಾಗ “ಇಲಿ ಬೇಕೆಂದು’ ನಾವೆಲ್ಲರೂ ಜಗಳವಾಡಿ ಸಂಗ್ರಹಿಸಿಟ್ಟಿದ್ದ ಇಲಿಗಳ ಪ್ರತಿಮೆಗಳ ಮೇಲೆ ಕೈಯ್ನಾಡಿಸಿ ಕಣ್ಣೀರಿಟ್ಟಿ¨ªೆ. “ಕಲ್ಲನಾಗರ ಕಂಡರೆ ಹಾಲನೆರೆಯೆಂಬರು, ನಿಜದ ನಾಗರವ ಕಂಡರೆ ಕೊಲ್ಲು ಕೊÇÉೆಂಬರಯ್ಯ’ ಎಂದು ಕನ್ನಡದ ಮಾಸ್ತರರು ಪಾಠ ಮಾಡುತ್ತಿದ್ದರೆ ನನ್ನನ್ನೇ ಯಾರೋ ಬೊಟ್ಟುಮಾಡಿದಂತಾಗುತ್ತಿತ್ತು.
“”ಇಲೀನೂ ಇಲ್ಲ, ಎಂಥದ್ದೂ ಇಲ್ಲ. ಬೆಳಬೆಳಿಗ್ಗೆ ನಿಂದೊಂದು ರಗಳೆ” ಎನ್ನುತ್ತಾ ರಟ್ಟಿನ ಡಬ್ಬದೊಂದಿಗೆ ಇವರು ಹಾಜರಾದರು. ಹರಡಿಟ್ಟಿದ್ದ ಎಲ್ಲ ಸಾಮಾನುಗಳು ಅÇÉೇ ಕುಳಿತು ನನ್ನನ್ನು ನೋಡಿ ನಗುತ್ತಿದ್ದವು. ವಿದ್ಯಾರ್ಥಿದೆಸೆಯಲ್ಲಿ ನಾವು ಮೂವರು ಗೆಳತಿಯರು ರೂಮು ಮಾಡಿಕೊಂಡು ಓದುವಾಗ ಅದು ಹೇಗೋ ಒಂದು ಮೂಷಕ ನಮ್ಮ ರೂಮಿನೊಳಗೆ ಸೇರಿಕೊಂಡುಬಿಟ್ಟಿತ್ತು. ಹಗಲೆಲ್ಲ ಮೌನವಾಗಿರುವ ಅದು ರಾತ್ರಿಯಾದೊಡನೆ ತನ್ನ ಕಾರುಬಾರು ಆರಂಭಿಸುತ್ತಿತ್ತು. ಅದೆಲ್ಲಿಯಾದರೂ ನಮ್ಮ ಪುಸ್ತಕಗಳಿಗೆ ಒಂದು ಗತಿಕಾಣಿಸಿದರೆ ಎಂಬ ಭಯ ಒಬ್ಬಳಿಗಾದರೆ, ಅದರ ಮೂತ್ರದ ಸೋಂಕಿನಿಂದ ಭಯಂಕರ ಕಾಯಿಲೆ ಹರಡುವುದೆಂಬ ಭಯ ಇನ್ನೊಬ್ಬಳದು.
ಇಲಿಯೊಂದಿಗಿನ ಎರಡು ದಶಕಗಳ ಒಡನಾಟವಿರುವ ನಾನು ಈ ಒಂದು ಇಲಿಗೆಲ್ಲ ಕ್ಯಾರೇ ಎನ್ನದೇ ಗಡ¨ªಾಗಿ ನಿ¨ªೆ ಹೊಡೆಯುತ್ತಿದ್ದರೆ, ಅವರು ರಾತ್ರಿಯಿಡೀ ಇಲಿಯ ಬೇಟೆಗಾಗಿ ಹುನ್ನಾರ ಮಾಡುತ್ತಾ ಎಲ್ಲ ಸಾಮಾನುಗಳನ್ನು ಹರಡುತ್ತಿದ್ದರು. ಆ ಚಾಲಾಕಿ ಇಲಿ ಅವರ ಬೆವರಿಗೆ ಬೆಲೆ ಕೊಡದೇ ಸತಾಯಿಸುತ್ತಿತ್ತು. ಅಂತೂ ಒಂದು ದಿನ ಇಲಿ ಅವರ ಹೊಡೆತಕ್ಕೆ ಸಿಕ್ಕು ಸತ್ತು ಹೆಣವಾದಾಗ ನನ್ನನ್ನು ಎಬ್ಬಿಸಿ, ವೀರಾವೇಶದಿಂದ ಅದರ ಬಾಲವನ್ನು ಹಿಡಿದು ನನ್ನೆದುರು ಪ್ರದರ್ಶಿಸಿ, ಥೇಟ್ ಹುಲಿ ಹೊಡೆದವರಂತೆ ಫೋಸ್ ಕೊಟ್ಟಿದ್ದರು. ಮಾರನೆಯ ದಿನ, “”ನಾವು ಕಷ್ಟಪಟ್ಟು ಇಲಿ ಹೊಡೆದಿದ್ದೇವೆ. ಇನ್ನು ಈ ಸಾಮಾನುಗಳನ್ನೆಲ್ಲ ಜೋಡಿಸುವ ಕೆಲಸ ನಿನ್ನದು” ಎಂದಾಗ ನಾನು, “”ಹರಡಿದವರೇ ಜೋಡಿಸಿ” ಎಂದು ಉಡಾಫೆ ಮಾಡಿ¨ªೆ. ಈಗ ಪತಿರಾಯರಿಗೆ ಹಾಗೆನ್ನಲಾರದೇ ಹರಡಿರುವುದನ್ನೆಲ್ಲ ಜೋಡಿಸುತ್ತಿರಬೇಕಾದರೆ, ರೇಡಿಯೋದಲ್ಲಿ “ಮೂಷಕ ವಾಹನ ಮೋದಕ ಹಸ್ತ, ಚಾಮರ ಕರ್ಣ ವಿಳಂಬಿತ ಸೂತ್ರ’ ಎಂಬ ಹಾಡು ಅಲೆಅಲೆಯಾಗಿ ತೇಲಿ ಬಂದು ನನ್ನನ್ನು ಅಣಕಿಸುತ್ತಿತ್ತು.
– ಸುಧಾ ಆಡುಕಳ