Advertisement

Story: ಇರುವುದೆಲ್ಲವ ಬಿಟ್ಟು…

01:20 PM Oct 08, 2023 | Team Udayavani |

“ಇಳಾ, ಹಣಕ್ಕೆ ಬಡತನ ಇದ್ದರೂ ಪರವಾಗಿಲ್ಲ ಕಣೆ, ಆದರೆ ಪ್ರೀತಿಗೆ ಬಡತನ ಇರುವಲ್ಲಿ ಬದುಕೋದು ಕಷ್ಟ…’ ಶರ್ಮಿಳಾ ಕಣ್ತುಂಬಾ ನೀರು ತುಂಬಿಕೊಂಡು ತನ್ನ ಸಂಸಾರದ ಸುಖ-ದುಃಖಗಳನ್ನು ಹೇಳುತ್ತಲೇ ಇದ್ದಳು. ಪ್ರೈಮರಿಯಿಂದ ಕಾಲೇಜ್‌ವರೆಗೆ ನಾವಿಬ್ಬರೂ ಒಟ್ಟಿಗೆ ಓದಿದ್ದು. ಎರಡು ವರ್ಷಕ್ಕೊಮ್ಮೆ ನಮ್ಮಿಬ್ಬರ ಭೇಟಿಯಾಗುವುದು.

Advertisement

ದುಬೈನಲ್ಲಿರುವ ನಾನು ಭಾರತಕ್ಕೆ ಬಂದಾಗಲೆಲ್ಲ ಶರ್ಮಿಯನ್ನು ಭೇಟಿಯಾ­ಗದೆ ಹೋಗುವುದಿಲ್ಲ. ನಮ್ಮಿಬ್ಬರ ಮಾತುಕತೆ­ ಯಲ್ಲಿ ನನ್ನ ದುಬೈ ಬದುಕಿನ ಇಣುಕು ನೋಟಕ್ಕಿಂತ ಅವಳ ಗೋಳಿನ ಕಥೆಯೇ ಹೆಚ್ಚಿಗೆ ಇರುತ್ತದೆ. ಅವಳಿಗೆ ತನ್ನ ನೋವನ್ನು ಕೇಳುವವರೊಬ್ಬರು ಬೇಕು. ನಾನು ಸುಮ್ಮನೆ ತಲೆ ಅಲ್ಲಾಡಿಸಿದರೆ ಸಾಕು ಅವಳಿಗೆ.

ಅಸಲಿಗೆ ನನ್ನ ದೃಷ್ಟಿಯಲ್ಲಿ ಶರ್ಮಿಳಾಳದ್ದು ಅಂತಹ ದೊಡ್ಡ ಸಮಸ್ಯೆಯೇ ಅಲ್ಲ. ಗಂಡ ತನ್ನನ್ನು ಪ್ರೀತಿಸುವುದಿಲ್ಲ, ತನ್ನ ರೂಪ ಲಾವಣ್ಯಗಳನ್ನು ಮೆಚ್ಚಿ ಹೊಗಳುವುದಿಲ್ಲ, ರೋಮ್ಯಾಂಟಿಕ್‌ ಆಗಿರುವುದಿಲ್ಲ, ತಾನು ಕನಸು ಕಂಡಂತಹ ಬದುಕು ತನ್ನದಾಗಲಿಲ್ಲ ಎಂಬಂಥ ವಿಷಯಗಳನ್ನು ಮನಸಿಗೆ ಹಾಕಿಕೊಂಡು ಕೊರಗುತ್ತಿರುತ್ತಾಳೆ.

ಕಾಲೇಜಿನಲ್ಲಿದ್ದಾಗ ಅದೆಷ್ಟೋ ಹುಡುಗರು ಅವಳ ಹಿಂದೆ ಬಿದ್ದಿದ್ದರು. ಇವಳೂ ಉಮೇಶ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಜಾಲಿಯಾಗಿ ಸುತ್ತಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ, ಅಪ್ಪ ತೋರಿಸಿದ, ಸಿವಿಲ್‌ ಇಂಜಿನಿಯರ್‌ ವರುಣನನ್ನು ಮದುವೆ­ಯಾದಳು. “ಉಮೇಶನನ್ನು ಯಾಕೆ ಬಿಟ್ಟೆ?’ ಎಂದು ಕೇಳಿದಾಗ-  “ಅವನಿಗೆ ಒಂದೊಳ್ಳೆಯ ಕೆಲಸ ಇಲ್ಲ. ಅವನನ್ನೇನು ಮದುವೆಯಾಗು­ತ್ತಾರೆ. ಸಬ್‌ ಸೆ ಬಡಾ ರುಪಯ್ಯಾ’ ಎಂದು ಸೊಟ್ಟಗೆ ನಕ್ಕಿದ್ದಳು. ಈಗ ನೋಡಿದರೆ, ಹಣಕ್ಕಿಂತ ಪ್ರೀತಿ ಹೆಚ್ಚು ಅಂತ ದೊಡ್ಡ ಡೈಲಾಗ್‌ ಬಿಡ್ತಾ ಇದಾಳೆ. ಒಟ್ಟಿನಲ್ಲಿ ಇದ್ದಿದ್ದರಲ್ಲಿ ಖುಷಿಪಡುವ ಬದಲು ಇಲ್ಲದುದನ್ನು ನೆನೆದು ಅಳುವುದೇ ಇವಳ ಹಣೇ ಬರಹವಾಯಿತಲ್ಲ ಎನಿಸಿತು.

ಪ್ರತಿ ಸಲ ಸುಮ್ಮನೆ ಅವಳ ಮಾತಿಗೆ ಹೂಂಗುಟ್ಟುತ್ತಿದ್ದವಳು ಈ ಸಲ ಅವಳಿಗೆ ತಿಳಿ ಹೇಳಲು ಪ್ರಯತ್ನಿಸಿದೆ. “ಶರ್ಮಿ, ಕನಸಿನಂತಹ ಬದುಕು ಯಾರಿಗೂ ಸಿಗುವುದಿಲ್ಲ. ಸಿಕ್ಕಿದ್ದರಲ್ಲೇ ತೃಪ್ತಿ ಪಟ್ಟುಕೊಂಡು ಬದುಕಲು ಕಲಿ. ಎರಡು ಮುದ್ದಾದ ಮಕ್ಕಳಿದ್ದಾರೆ. ಗಂಡನ ಬಗ್ಗೆ ನಿನಗಿರುವ ಕಂಪ್ಲೇಂಟ್‌ಗಳನ್ನೆಲ್ಲ ದೂರವಿಟ್ಟು ಅವನಲ್ಲಿರುವ ಒಳ್ಳೆಯ ಗುಣಗಳನ್ನು ಲೆಕ್ಕ ಹಾಕು. ಅವನಿಗೆ ಯಾವ ಕೆಟ್ಟ ಚಟವೂ ಇಲ್ಲ. ಬೇರೆ ಹೆಂಗಸರನ್ನ ಕಣ್ಣೆತ್ತಿ ಕೂಡ ನೋಡೋದಿಲ್ಲ. ನಿನ್ನ ಮಕ್ಕಳಿಗೆ ಒಬ್ಬ ಒಳ್ಳೆ ತಂದೆ, ನಿನಗೂ ಒಬ್ಬ ಒಳ್ಳೆಯ ಗಂಡನೇ. ಇದೆಲ್ಲ ನೀನೇ ತಾನೆ ನನಗೆ ಹೇಳಿದ್ದು. ನೀನು ಮನೇಲಿ ಖಾಲಿ ಕೂತಿರ್ತೀಯಾ? ಮನೆಗೆಲಸಕ್ಕೆಲ್ಲ ಜನ ಇದ್ದಾರೆ. ಅದಕ್ಕೆ ಗಂಡನ್ನ ಅಲ್ಲಿ ಇಲ್ಲಿ ಸುತ್ತೋದಕ್ಕೆ ಕರೀತೀಯಾ? ಆದರೆ ಅವನ ಪರಿಸ್ಥಿತಿಯನ್ನು ಸ್ವಲ್ಪ ಅರ್ಥ ಮಾಡಿಕೊ. ಅವನೊಬ್ಬ ಸಿವಿಲ್‌ ಇಂಜಿನಿಯರ್‌. ಮೈತುಂಬಾ ಕೆಲಸ, ತಲೆ ತುಂಬಾ ಕಟ್ಟಬೇಕಾದ ಮನೆಗಳ ಪ್ಲಾನ್‌ಗಳು. ನಿನ್ನನ್ನು ನೀನೇ ಯಾವುದರಲ್ಲಾದರೂ ಬಿಜಿಯಾಗಿಡು. ಎಲ್ಲ ಸರಿಹೋಗುತ್ತೆ. ಒಂದಷ್ಟು ಫ್ರೆಂಡ್ಸ್‌ ಮಾಡ್ಕೊ. ಅವರ ಜೊತೆ ಸುತ್ತಾಡು. ಯಾವುದಾದರೂ ಕ್ಲಬ್‌ ಸೇರು. ಸಮಾಜ ಸೇವೆ ಮಾಡು’ ಎಂದು ಸಲಹೆ ಕೊಟ್ಟೆ.

Advertisement

“ಈ ಜಗತ್ತಿನಲ್ಲಿ ದೊಡ್ಡ ದೊಡ್ಡ ಕಷ್ಟಗಳನ್ನು ಅನುಭವಿಸುತ್ತಿರುವವರು, ಗಂಡನಿಂದ ವಂಚನೆಗೊಳಗಾದವರು, ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾದವರು ಅದೆಷ್ಟೋ ಜನ ಇದ್ದಾರೆ. ಅವರ ಮುಂದೆ ನಿನ್ನ ಸಮಸ್ಯೆ ಏನೂ ಅಲ್ಲ. ಇಷ್ಟಕ್ಕೂ ನಿನ್ನದು ಈಗ ಪ್ರೀತಿ, ಪ್ರೇಮ, ಪ್ರಣಯ ಇದರ ಬಗ್ಗೆ ಎಲ್ಲ ಯೋಚನೆ ಮಾಡೋ ಬಾಲಿಶ ವಯಸ್ಸಲ್ಲ. ಸ್ವಲ್ಪ ಮೆಚೂರ್‌ ಆಗಿ ಯೋಚನೆ ಮಾಡೋದನ್ನು ಕಲಿ’ ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದೆ.

***

ನಾನು ದುಬೈಗೆ ವಾಪಸಾದ ನಂತರ ಶರ್ಮಿಳಾಳಿಂದ ಮತ್ತೆ ಯಾವತ್ತೂ ಮೆಸೇಜ್‌ ಬರಲಿಲ್ಲ. ನಾನೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದಾಗಿ ಆರು ತಿಂಗಳ ನಂತರ ನನ್ನಣ್ಣ ಫೋನ್‌ ಮಾಡಿದ. “ಇಳಾ, ನಿನ್ನ ಫ್ರೆಂಡ್‌ ಶರ್ಮಿಳಾ ಎಂಥಾ ಕೆಲಸ ಮಾಡಿ­ ಬಿಟ್ಟಳು ನೋಡು…’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದ.

ಶರ್ಮಿ ಜೀವಕ್ಕೇನಾದರೂ ಮಾಡಿಕೊಂಡಳಾ ಎಂದು ಗಾಬರಿಯಿಂದ, “ಏನಾಯಿತಣ್ಣ?’ ಎಂದೆ. “ಅವಳ ಗಂಡನ ಕಾರ್‌ ಡ್ರೈವರ್‌ ಜೊತೆ ಓಡಿಹೋದಳು. ಥೂ! ಈ ವಯಸ್ಸಿನಲ್ಲಿ ಇಂಥಾ ಅಸಹ್ಯ ಕೆಲಸ ಮಾಡಿದಳಲ್ಲ. ನಿನಗೇನಾದರೂ ಈ ಬಗ್ಗೆ ಗೊತ್ತಿತ್ತಾ? ಗಂಡನ ಬಗ್ಗೆ, ಹೆತ್ತವರ ಬಗ್ಗೆ ಆಲೋಚನೆ ಇಲ್ಲದಿದ್ದರೆ ಹೋಗಲಿ, ಹೆತ್ತ ಮಕ್ಕಳ ಬಗ್ಗೆಯಾದರೂ ಯೋಚಿಸಬೇಕಿತ್ತು’ ಎಂದ.

ನನಗೆ ಗಂಟಲಿನ ದ್ರವವೇ ಆರಿ­ಹೋದಂತಾ­ಯಿತು. ಪ್ರೀತಿಯ ಹಂಬಲಕ್ಕೆ ಇಂಥಾ ಹೆಜ್ಜೆಯಿಟ್ಟಳಾ ಶರ್ಮಿ ಅನಿಸಿ ಮನಸಿಗೆ ತುಂಬಾ ಆಘಾತವಾಯಿತು. “ಇಳಾ, ನೀನು ಅವಳ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬೇಡ. ನಾಳೆ ದಿನ ನಿನಗೂ ಕೆಟ್ಟ ಹೆಸರು ಬರುತ್ತೆ… ಅವಳೇನಾದರೂ ಇದರ ಬಗ್ಗೆ ನಿನಗೆ ಫೋನ್‌ ಮಾಡಿದಳಾ?’ ಎಂದ ಅಣ್ಣ. “ಇಲ್ಲಣ್ಣ, ನಾನು ಲಾಸ್ಟ್‌ ಟೈಮ್‌ ಭಾರತಕ್ಕೆ ಬಂದಾಗ ಅವಳಿಗೆ ಬೈಯ್ದು ಬುದ್ಧಿ ಹೇಳಿ¨ªೆ. ಅದರ ಮೇಲೆ ಅವಳು ನನಗೆ ಮತ್ತೆ ಕಾಲ್‌ ಕೂಡ ಮಾಡಿಲ್ಲ, ಮೆಸೇಜೂ ಹಾಕಿಲ್ಲ… ನಾನೂ ಮಾಡೋಕೆ ಹೋಗಿಲ್ಲ. ಆ ಡ್ರೈವರ್‌ ಇವಳನ್ನು ಬಾಳಿಸ್ತಾನಾ. ಇಲ್ಲಿ ಗಂಡನ ಮನೆಯಲ್ಲಿ ಬೇಕಾಬಿಟ್ಟಿ ಹಣ ಖರ್ಚು ಮಾಡಿಕೊಂಡು ಇದ್ದವಳು. ಮುಂದೇನು ಮಾಡ್ತಾಳ್ಳೋ..’ ಎಂದೆ. “ಮನೆಯಿಂದ ಸಾಕಷ್ಟು ಚಿನ್ನ ಕದ್ದುಕೊಂಡು ತನ್ನ ಅಕೌಂಟಿನ ಅಷ್ಟೂ ಕ್ಯಾಷ್‌ ತೊಗೊಂಡು ಹೋಗಿದ್ದಾಳೆ… ಮಿಸ್ಸಿಂಗ್‌ ಕಂಪ್ಲೇಂಟ್‌ ಕೊಟ್ಟಿದ್ದಾನೆ ಅವಳ ಗಂಡ. ಎಂಥಾ ಭಂಡ ಧೈರ್ಯ ನೋಡು ಅವಳದು’ ಎಂದು ಅಣ್ಣ ಹೇಳುತ್ತಿದ್ದರೆ ನನ್ನ ಕಣ್ಣ ಮುಂದೆ ಶರ್ಮಿಳಾಳ ಮುದ್ದು ಮಕ್ಕಳ ಮುಖ ಹಾದು ಹೋಯಿತು.

***

ಈ ಘಟನೆ ನಡೆದು ಎರಡು ವರ್ಷವಾಯಿತು. ಹೆಚ್ಚು ಕಡಿಮೆ ಮರೆತೇಹೋಗಿತ್ತು. ಅವತ್ತು ನಮ್ಮ ಕಾಲೇಜು ಗೆಳತಿಯರ ವಾಟ್ಸಪ್‌ ಗ್ರೂಪ್‌ನಲ್ಲಿ ಯಾರೋ ವೀಡಿಯೋ ಲಿಂಕ್‌ ಒಂದನ್ನು ಹಾಕಿದ್ದರು. ಕೆಳಗೆ ಶೇಮ್‌ ಆನ್‌ ಶರ್ಮಿ ಅಂತ ಕಾಮೆಂಟ್‌ ಹಾಕಿದ್ದರು. ನಾನು ಲಿಂಕ್‌ ಓಪನ್‌ ಮಾಡಿ ನೋಡಿದೆ. ಲೋಕಲ್‌ ಟಿವಿ ಚಾನೆಲ್‌ ಒಂದರಲ್ಲಿ ಹೈಟೆಕ್‌ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಪತ್ತೆಯಾಗಿದ್ದ ಸಿವಿಲ್‌ ಇಂಜಿನಿಯರ್‌ ಪತ್ನಿ ಸೆರೆ. ವೇಶ್ಯಾವಾಟಿಕೆ ದಂಧೆಯಲ್ಲಿ ಆಕೆಯ ಪ್ರಿಯಕರನೂ ಬಂಧನಕ್ಕೊಳಗಾಗಿದ್ದಾನೆ. ಎಂದು ವರದಿಗಾರ ಅರಚುತ್ತಿದ್ದ. ತಲೆಯ ಮೇಲೆ ಶಾಲು ಹೊದ್ದು ಪೋಲೀಸರ ಹಿಂದೆ ಹೋಗುತ್ತಿದ್ದ ಶರ್ಮಿಳಾ ಕಂಡಳು.

-ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ

Advertisement

Udayavani is now on Telegram. Click here to join our channel and stay updated with the latest news.

Next