Advertisement

ಬಿರುಸಿನ ರಾಜಕೀಯ ಚಟುವಟಿಕೆ ಶುರು: ಸೋನಿಯಾ ಜತೆ ಸಿಎಂ ಚರ್ಚೆ

11:13 AM Apr 15, 2017 | |

ಬೆಂಗಳೂರು: ಉಪ ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನ ತುಂಬುವ ಲೆಕ್ಕಾಚಾರ ಹಾಕಿದ್ದು, ಶನಿವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಚರ್ಚಿಸಿ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ.

Advertisement

ಉಪ ಚುನಾವಣೆ ಫ‌ಲಿತಾಂಶ ಕುರಿತು ಮಾಹಿತಿ ನೀಡಲು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಅವರಿಗೆ ಶನಿವಾರ ಸೋನಿಯಾಗಾಂಧಿ ಭೇಟಿಗೆ ಸಮಯ ನಿಗದಿಯಾಗಿದ್ದು, ಆಗ ಸಂಪುಟ ವಿಸ್ತರಣೆ ಹಾಗೂ ವಿಧಾನಪರಿಷತ್‌ನಲ್ಲಿ ಖಾಲಿ ಇರುವ ಮೂರು ನಾಮಕರಣ ಸದಸ್ಯರ ಸ್ಥಾನ ಭರ್ತಿ ಬಗ್ಗೆಯೂ
ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಖಾಲಿ ಉಳಿದಿರುವ ಎರಡು ಸಚಿವ ಸ್ಥಾನಗಳ ಪೈಕಿ ಕುರುಬ ಸಮುದಾಯಕ್ಕೆ ಒಂದು ಸ್ಥಾನ ಸಿಗಲಿದೆ ಎಂಬ ಮಾತುಗಳು ಇವೆಯಾದರೂ ಸಿಎಂ ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಬೇಡ ಎಂಬ ಆಲೋಚನೆಯಲ್ಲಿದ್ದಾರೆ. ನಾನೇ ಆ ಸಮುದಾಯ ಪ್ರತಿನಿಧಿಸುತ್ತಿದ್ದೇನಲ್ಲಾ ಎಂದು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟವರ ಮುಂದೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ರೇಸ್‌ನಲ್ಲಿದ್ದಾರೆ ಹಲವರು: ಈ ಹಿಂದೆಯೂ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಸಿಎಂಗೆ ಮನಸ್ಸಿರಲಿಲ್ಲ. ಆದರೆ, ಸಮುದಾಯದ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕೆಂದು ಸಮಾಜದ ಮುಖಂಡರು ಒತ್ತಡ ಹೇರಿದ್ದರಿಂದ ಬಾಗಲಕೋಟೆ ಶಾಸಕ ಎಚ್‌. ವೈ. ಮೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸಂಪುಟಕ್ಕೆ ಸೇರಿದ ಆರೇ ತಿಂಗಳಲ್ಲಿ ಎಚ್‌.ವೈ ಮೇಟಿ ಲೈಂಗಿಕ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡರು. ಇದು ಸಿದ್ದರಾಮಯ್ಯ ಅವರಿಗೆ ಆಘಾತ ತಂದಿತ್ತು.

ಈಗ ಮತ್ತೂಬ್ಬ ಸಮುದಾಯದ ಶಾಸಕನಿಗೆ ಸಚಿವ ಸ್ಥಾನ ನೀಡಿ ಎನ್ನುವ ಆಗ್ರಹ ಇದೆ. ಬಾದಾಮಿಯ ಹಿರಿಯ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಜಾತಿ ಹಾಗೂ ಜಿಲ್ಲಾ ಪ್ರಾತಿನಿಧ್ಯದ ಲೆಕ್ಕಾಚಾರದಲ್ಲಿ ತಮಗೇ ಸಚಿವ ಸ್ಥಾನ ಸಿಗುತ್ತದೆ ಎಂಬ ಆಲೋಚನೆಯಲ್ಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಕೂಡ ತೀವ್ರ ಕಸರತ್ತು ನಡೆಸಿದ್ದಾರೆ.

Advertisement

ಧಾರವಾಡ ಜಿಲ್ಲೆ ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿ ಕೂಡ ರೇಸ್‌ನಲ್ಲಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಈ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಿದ್ದು ಕುರುಬ ಸಮುದಾಯ ಮತ್ತು ನಾಯಕರುಗಳಿಗೆ ಅಗತ್ಯ ಕೆಲಸ ಮಾಡಿಕೊಡುವ ಭರವಸೆ ನೀಡಿದ್ದು, ಸಂಪುಟಕ್ಕೆ ಮಾತ್ರ ಸೇರಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಹೇಳಲಾಗಿದೆ.

ಹೊಸ ಲೆಕ್ಕಾಚಾರ: ಈ ಬಾರಿ ಮಂತ್ರಿ ಮಂಡಲ ವಿಸ್ತರಣೆಯಲ್ಲ, ಪುನಾರಚನೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಸಂಪುಟದ ಕೆಲ ವಿಕೆಟ್‌ಗಳು ಬೀಳುತ್ತಾ ಎಂಬ ಪ್ರಶ್ನೆ ಮೂಡಿದೆ.

ಪರಮೇಶ್ವರ್‌ ಅಥವಾ ಡಿ.ಕೆ. ಶಿವಕುಮಾರ್‌ ಯಾರೇ ಕೆಪಿಸಿಸಿ ಅಧ್ಯಕ್ಷರಾದರೂ ಮಂತ್ರಿ ಸ್ಥಾನ ಖಾಲಿ ಮಾಡಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ. ಅದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಮೂರರಿಂದ ಅಥವಾ ನಾಲ್ಕು ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡುವ ಆಲೋಚನೆ ನಡೆಸಿದ್ದಾರೆ. ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಲೆಕ್ಕಾಚಾರ ಅವರದಾಗಿದ್ದು ಇದನ್ನು ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಹಲವರ ಒತ್ತಡ: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆದರೆ ಅವಕಾಶಕ್ಕಾಗಿ ಮುದ್ದೆಬಿಹಾಳ ಶಾಸಕ ಸಿ.ಎಸ್‌. ನಾಡಗೌಡ, ಮಧುಗಿರಿ ರಾಜಣ್ಣ , ರಾಮದುರ್ಗದ ಅಶೋಕ್‌ ಪಟ್ಟಣ ಕಾಯುತ್ತಿದ್ದಾರೆ. ಇನ್ನು, ಭೋವಿ ಸಮುದಾಯದ ಏಕೈಕ ಶಾಸಕ ಎಂಬ ಕಾರಣಕ್ಕೆ ಕನಕಗಿರಿಯ ಶಿವರಾಜ್‌ ತಂಗಡಿಯನ್ನು ಮತ್ತೆ ಸಂಪುಟಕ್ಕೆ ಸೇರಿಸಬೇಕು ಎಂಬ ಒತ್ತಡವೂ ಇದೆ.

ಎಸ್‌.ಆರ್‌. ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿದ್ದರೇ ಮಂತ್ರಿ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಲ್ಲದೇ ಹಳೆ ಮೈಸೂರು ಭಾಗದಲ್ಲಿ ಲಿಂಗಾಯತ ಸಮುದಾಯ ಪ್ರತಿನಿಧಿಸುವ ಸಚಿವರು ಯಾರೂ ಇಲ್ಲ ಎಂಬ ಕಾರಣಕ್ಕೆ ಗೀತಾ ಮಹದೇವ ಪ್ರಸಾದ್‌ ಅವರಿಗೂ ಚುನಾವಣಾ ಪ್ರಚಾರದಲ್ಲಿ ಮಾತು ಕೊಟ್ಟಂತೆ ಮಂತ್ರಿ ಮಾಡಬಹುದು ಎಂದು ಹೇಳಲಾಗಿದೆ.

ಗ್ರೀನ್‌ ಸಿಗ್ನಲ್‌ ಸಿಗುತ್ತಾ?
ಉಪಚುನಾವಣೆಯಲ್ಲಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸೇರಿ ರಾಜ್ಯ ಕಾಂಗ್ರೆಸ್‌ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ.ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಚರ್ಚೆಗೆ ಬರಲಿದೆ. ಆದರೆ, ಇದೇ ಸಭೆಯಲ್ಲಿ ಎಲ್ಲವೂ ಅಂತಿಮವಾಗುವ ಸಾಧ್ಯತೆ ಕಡಿಮೆ. ಈ ಕುರಿತ ಪ್ರಸ್ತಾಪ ಹೈಕಮಾಂಡ್‌ ಮುಂದಿಟ್ಟು ಪಟ್ಟಿ ಸಿದ್ಧಪಡಿಸಿಕೊಂಡು ಮತ್ತೂಮ್ಮೆ ಭೇಟಿಯಾಗಿ ಒಪ್ಪಿಗೆ ಪಡೆಯಬಹುದು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next