Advertisement

ಕೋವಿಡ್ ತೊಲಗಲಿ, ಆಫೀಸು ತೆರೆಯಲಿ…

03:15 PM May 05, 2020 | mahesh |

ಲಾಕ್‌ಡೌನ್‌ ಶುರುವಾದಾಗ ಬಹಳ ಖುಷಿಯಾಗಿತ್ತು. ಏಕೆಂದರೆ, ಆಫೀಸಿಗೆ ಹೋಗೋದು, ಬರೋದು, ಟ್ರಾಫಿಕ್‌ ಜಾಮಲ್ಲಿ ಒದ್ದಾಡೋದು… ಇದೆಲ್ಲವನ್ನೂ ನೆನಪಿಸಿಕೊಂಡು, ಇದರಿಂದ ಮುಕ್ತಿ ಸಿಗುತ್ತಲ್ಲಾ ಅಂತ ಖುಷಿಯೋ ಖುಷಿ. ಬೆಳಗ್ಗೆ ತಿಂಡಿ ಮಾಡಿ, ತಿಂದು, ಗಡಿಬಿಡಿಯಲ್ಲಿ ಆಫೀಸಿಗೆ ಓಡುವ ಒತ್ತಡ ಇದೆಯಲ್ಲ; ಆ ಸಂಕಟ ಯಾರಿಗೂ ಬೇಡ.

Advertisement

ನಾಳೆಯಿಂದ ವರ್ಕ್‌ ಫ್ರಂ ಹೋಮ್‌ ಅಲ್ವಾ… ಸ್ವಲ್ಪ ನಿಧಾನಕ್ಕೆ ಏಳ್ಳೋಣ. ತಿಂಡಿ ಅರ್ಧ ಗಂಟೆ ಲೇಟಾದರೂ ಪರವಾಗಿಲ್ಲ- ಹೀಗೆಲ್ಲಾ ಲೆಕ್ಕ ಹಾಕಿಕೊಂಡಿದ್ದೆ. ಆದರೆ, ಆದದ್ದೇ ಬೇರೆ… ಈಗ, ಮನೆಯೂ ಆಫೀಸೇ. ಪ್ರತಿದಿನ ಎದ್ದು, ಆಫೀಸಿನ ಸಮಯಕ್ಕೆ ಸರಿಯಾಗಿಯೇ ಕೆಲಸ ಶುರುಮಾಡಬೇಕು. ಆ ಕಡೆಯಲ್ಲಿ ಕ್ಲೈಂಟ್‌ ಕಾಯುತ್ತಿರುತ್ತಾರೆ. ಪ್ರತಿದಿನದ ಕೊನೆಯಲ್ಲಿ, ಇವತ್ತು
ಏನೇನು ಮಾಡಿದ್ದೇನೆ, ಹೊಸ ಪ್ಲಾನ್‌ ಏನು, ಎಷ್ಟು ಜನ ಕ್ಲೈಂಟ್‌ ಅನ್ನು ಬೆಳಗ್ಗೆಯಿಂದ ಅಟೆಂಡ್‌ ಮಾಡಿದ್ದೇನೆ ಎಂಬ ಮಾಹಿತಿಯನ್ನು ಮ್ಯಾನೇಜರ್‌ಗೆ ಒಪ್ಪಿಸಬೇಕು… ಇದು ಕೆಲಸದ ಶೆಡ್ನೂಲ್ಡ್

ಆಫೀಸಿನಲ್ಲಿ ಮಾಡ್ತಾ ಇದ್ದರಲ್ಲ, ಅದಕ್ಕಿಂತ ಹೆಚ್ಚು ಕೆಲಸವನ್ನು ಮನೆಯಲ್ಲಿ ಇದ್ದಾಗಲೇ ಮಾಡಿಸಬಹುದು ಎಂಬುದು ನಮ್ಮ ಬಾಸ್‌ ನಂಬಿಕೆ- ನಿರೀಕ್ಷೆ. ವರ್ಕ್‌ ಫ್ರಂ ಹೋಮ್‌ ಆದ್ದರಿಂದ, ಕೆಲಸಕ್ಕೆ ನಿಗದಿತ ಸಮಯ ಕೂಡ ಇರಲಿಲ್ಲ. ನಮ್ಮದು ಟೆಲಿ ಬೇಸ್ಡ್ ಕೆಲಸಗಳಾದ್ದರಿಂದ, ಇಂಥ ಕಡೆಯಿಂದಲೇ ಕೆಲಸ ಮಾಡಬೇಕು ಅಂತಿಲ್ಲ. ಹೇಗಿದ್ದರೂ ಮನೆಯಲ್ಲಿ ಕೂತಿರ್ತಾರಲ್ಲ ಅಂತ
ಹೆಚ್ಚುವರಿ ಕಾಲ್‌ಗ‌ಳನ್ನು, ರಜೆ ಹಾಕಿದವರ ಕೆಲಸವನ್ನು, ಈ ಕಡೆ ತಳ್ಳಿಬಿಡುತ್ತಿದ್ದರು. ಕೆಲಸದ ಒತ್ತಡದಲ್ಲಿ ಅಡುಗೆ ಮಾಡಲಿಕ್ಕೂ ಪುರುಸೊತ್ತು ಸಿಗ್ತಿಲ್ಲ ಈಗ. ಅನ್ನುವಂತಿಲ್ಲ, ಅನುಭವಿಸುವಂತಿಲ್ಲ, ಹಾಗಾಗಿದೆ ನಮ್ಮ ಪಾಡು. ನನ್ನ ಕೆಲಸ ಏನೆಂದರೆ, ಜಪಾನಿ ಭಾಷೆಯನ್ನು ಕನ್ನಡಕ್ಕೆ ಅಥವಾ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಹೇಳುವುದು. ಮೊನ್ನೆ ಹೀಗಾಯ್ತು… ಬೆಳಗ್ಗೆ 10 ಗಂಟೆಗೆ ಮೀಟಿಂಗ್‌ ಶುರುವಾಯಿತು. 12ಕ್ಕೆ ಇನ್ನೊಂದು ಮೀಟಿಂಗ್‌, ಮಾತುಕತೆ. ಇದು ಹೀಗೇ ಮುಂದೆ ಹೋಗಿ ಹೋಗಿ, ಸಂಜೆ ಐದು ಗಂಟೆ ಆಯಿತು. ಆದರೂ ಕೆಲಸ ಮುಗಿಯಲಿಲ್ಲ. ಹೊಟ್ಟೆ ಪೂರ್ತಿ ತಾಳ ಹಾಕುತ್ತಿದೆ. ವೈದ್ಯರು, ಹೊಟ್ಟೆ ಖಾಲಿ ಬಿಡಬೇಡಿ ಅಂತ ಹೇಳಿದ್ದಾರೆ. ನನ್ನ ಊಟದ ಟೈಮ್‌ ಮಧ್ಯಾಹ್ನದ ಒಂದೂವರೆ ಗಂಟೆ. ಈಗ ನೋಡಿದರೆ ಸಂಜೆ ಐದು ಗಂಟೆ. ಈಗೇನು ಮಾಡೋದು?

ಸಮಯ ಜಾರಿದಂತೆಲ್ಲಾ ನನ್ನ ತಾಳ್ಮೆ ಕಡಿಮೆಯಾಗುತ್ತಾ ಬಂತು. ಆ ತುದಿಯಲ್ಲಿ ಕ್ಲೈಂಟ್‌ ಜಪಾನಿ ಭಾಷೆಯಲ್ಲಿ ಏನೇ ಹೇಳುತ್ತಿದ್ದಾರೆ. ನನಗೆ ಕೇಳುವ ವ್ಯವಧಾನವಿಲ್ಲ. ಕೊನೆಗೆ, ಇಲ್ಲಿ ನೆಟ್‌ವರ್ಕ್‌ ಸರಿ ಇಲ್ಲ. ಏನೂ ಕೇಳ್ತಾ ಇಲ್ಲ ಅಂತ ಎರಡು ಮೂರು ಸಲ ಹೇಳಿ, ಕಟ್‌ಮಾಡಿ, ಸುಮ್ಮನೆ ಕೂತೆ. ಅಷ್ಟರಲ್ಲಿ, ಮನೆಯವರು ಜ್ಯೂಸ್‌ ತಂದುಕೊಟ್ಟರು. ಕುಡಿದೆ. ಸ್ವಲ್ಪ
ಸುಧಾರಿಸಿಕೊಂಡು ಮತ್ತೆ ಕಾರ್ಯನಿರತವಾದೆ. ಇಂಥ ಸಂದರ್ಭದಲ್ಲಿ ಮನೆಯವರ ಅಸಹಕಾರ ಇದ್ದರೆ, ಮಹಿಳೆಯರು ಹೇಗೆ ಕೆಲಸ ಮಾಡಬೇಕು, ಅಲ್ವಾ? ಪುಣ್ಯಕ್ಕೆ, ನಮ್ಮ ಮನೆಯವರೆಲ್ಲರೂ ನೆರವು ನೀಡಿದರು. ಹಾಗಾಗಿ ಬಚಾವ್‌. ಬೇಗ ಕೊರೊನಾ ತೊಲಗಿ, ಮತ್ತೆ ಆಫೀಸು ತೆರೆಯಲಿ ಅಂತ ನಾನೀಗ ಕಾಯುತ್ತಿದ್ದೇನೆ.

ನೀವೂ ಬರೆಯಿರಿ
ಜೋಶ್‌ ಪುರವಣಿಗೆ ಚೆಂದದ ಬರಹಗಳು ಬೇಕು, ಕಾಲೇಜಿನಲ್ಲಿ ಕಳೆದ ಮಧುರ ಕ್ಷಣಗಳು | ಗೆಳೆಯರಿಂದ ಕಲಿತ ಪಾಠಗಳು | ಓದುವ ದಿನಗಳಲ್ಲಿ ಆಡಿದ ಆಟಗಳು | ಮಾಡಿದ ಕೀಟಲೆಗಳು | ಟ್ರೆಕಿಂಗ್‌ಹೋದಾಗ ಆದ ಫ‌ಜೀತಿಗಳು | ಕನಸೆಂಬ ಕುದುರೆಯನೇರಿ ಜೀಕಿದ ಸಂದರ್ಭಗಳು | ಪ್ರೀತಿಯ ಸೆಳವಿಗೆ ಸಿಕ್ಕು ಪತರಗುಟ್ಟಿದ ದಿನಗಳು | ಪ್ರಪೋಸ್‌ ಮಾಡಲು ಧೈರ್ಯವಿಲ್ಲದೆ
ಪೆಚ್ಚಾಗಿ ನಿಂತ ಕ್ಷಣಗಳು | ಕಾಲೇಜಿನ ಆವರಣ-ಹಾಸ್ಟೆಲಿನ ಅಂಗಳದಲ್ಲಿ ಮಾಡಿದ ಕಿತಾಪತಿಗಳು | ಮರೆಯಲಾಗದ ಗುರುಗಳು | ಮರೆತುಹೋಗದ ಮಾತುಗಳು | ಎವರ್‌ಗ್ರೀನ್‌ ಅನ್ನುವಂಥ ಪ್ರೇಮಪತ್ರ…

Advertisement

ಇಂಥವೇ ಘಟನೆಗಳಿಗೆ ಸಂಬಂಧಿಸಿದ ಚೆಂದದ ಬರಹಗಳು ಬೇಕು…

ನಿಮ್ಮ ಬರಹಗಳು ನುಡಿ, ಯೂನಿಕೋಡ್‌ ಅಥವಾ ಬರಹದಲ್ಲಿ ಇರಲಿ. ಬರಹಗಳನ್ನು ಕಳಿಸಬೇಕಾದ ಇಮೇಲ್‌ ವಿಳಾಸ-
uvani.josh@ gmail.com

ಪ್ರತಿಭಾ

Advertisement

Udayavani is now on Telegram. Click here to join our channel and stay updated with the latest news.

Next