Advertisement
ಒತ್ತುಗಳಿಲ್ಲದೇ ಪದಗಳನ್ನು ಬರೆಯುವುದು ತುಂಬಾ ಕಷ್ಟ. ಅಬ್ಬಬ್ಟಾ ಎಂದರೆ, ಒತ್ತಕ್ಷರವಿಲ್ಲದೆ ಎರಡ ಮೂರು ಅರ್ಥಪೂರ್ಣ ವಾಕ್ಯಗಳನ್ನು ಬರೆಯಬಹುದೇನೋ. ಆದರೆ, ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ಒತ್ತಕ್ಷರ ಇಲ್ಲದೇ ಕಥಾ ಸಂಕಲನವನ್ನು ಹೊರ ತರುವ ಮೂಲಕ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೊದಲು, ಒಂದು ಕತೆ ಬರೆಯಲು 2-3 ತಿಂಗಳಷ್ಟು ಸಮಯ ಬೇಕಾಗುತ್ತಿತ್ತು. ಒತ್ತುಗಳಿಲ್ಲದ ಪದಗಳನ್ನು ಹುಡುಕಿ, ಅದನ್ನು ಅರ್ಥಪೂರ್ಣ ವಾಕ್ಯಗಳನ್ನಾಗಿಸುವುದು ಸುಲಭವಾಗಿರಲಿಲ್ಲ. ಇದನ್ನು ಸವಾಲೆಂದು ಪರಿಗಣಿಸಿದ ಶಿಕ್ಷಕ ಚೌರಿ, ದಿನ ನಿತ್ಯ ಕತೆಗಾಗಿ ಸಮಯ ವಿನಿಯೋಗಿಸಿದರು. ಈಗ, ಅರ್ಧ ಗಂಟೆಯೊಳಗೆ ಒತ್ತಕ್ಷರ ಇಲ್ಲದೆ ಕಥೆ ಬರೆಯುವುದರಲ್ಲಿ ಪರಿಣತರಾಗಿದ್ದಾರೆ.
Related Articles
ಸದ್ಯ ಬಿಡುಗಡೆಯಾಗಿರುವ “ಚೌರೀಶನ ಕಥೆಗಳು’ ಎಂಬ ಕಥಾ ಸಂಕಲನದಲ್ಲಿ ಒಟ್ಟು 18 ಮಕ್ಕಳ ಕಥೆಗಳಿವೆ. ಒಂದೊಂದು ಕಥೆಯೂ ಸುಮಾರು 150 ಪದಗಳದ್ದಾಗಿದೆ. ಒಂದೂವರೆ ಪುಟಗಳ ಕಥೆಯಲ್ಲಿ ಹುಡುಕಿದರೂ ಒಂದು ಒತ್ತಕ್ಷರ ಸಿಗುವುದಿಲ್ಲ. ಕನ್ನಡ ಸಾರಸ್ವತ ಲೋಕದ ಮಟ್ಟಿಗೆ ಇದೊಂದು ವಿಶಿಷ್ಟ ಪ್ರಯತ್ನ ಎನ್ನಬಹುದು. ಬಿಡುಗಡೆಗೊಂಡ ಒಂದೇ ವಾರದಲ್ಲಿ ಪುಸ್ತಕದ ಸಾವಿರ ಪ್ರತಿಗಳು ಮಾರಾಟಗೊಂಡಿವೆ. ಈ ಕುರಿತು ಚರ್ಚೆಗಳೂ ನಡೆಯುತ್ತಿದ್ದು, ಬೇಡಿಕೆಯೂ ಹೆಚ್ಚುತ್ತಿದೆ.
Advertisement
ಬಿ.ಎಂ.ಶ್ರೀ ಬರೆದಿದ್ದರುಕನ್ನಡದ ಹಿರಿಯ ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರು ಒತ್ತಕ್ಷರಗಳೇ ಇಲ್ಲದೆ “ಬಾವುಟ’ ಪದ್ಯ ಬರೆದಿದ್ದರು. ಆದರೆ, ಇದನ್ನು ಅಪೂರ್ಣ ಎಂದು ಒಪ್ಪಿಕೊಂಡಿದ್ದ ಬಿಎಂಶ್ರೀ, ಮುಂದೆ ಇಂಥ ಪ್ರಯೋಗ ಕನ್ನಡದಲ್ಲಿ ಆಗಲಿ ಎಂದು ಬಯಸಿದ್ದರು. ಈ ಪ್ರೇರಣೆಯಿಂದಲೇ ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಅವರು ಸುಮಾರು 20 ವರ್ಷಗಳಿಂದ ಈ ಪ್ರಯತ್ನ ನಡೆಸಿದ್ದರು. ಇಂಗ್ಲಿಷ್‌ನಿಂದ ಪ್ರೇರಣೆ
ಚೌರಿ ಅವರು ಡಿಗ್ರಿಯಲ್ಲಿ ಇಂಗ್ಲಿಷ್ ವಿಷಯವನ್ನು ಆಯ್ದುಕೊಂಡಿದ್ದರು. ಇಂಗ್ಲಿಷ್‌ನಲ್ಲಿ 1ರಿಂದ 99ರವರೆಗೆ ಬರೆಯುವಾಗ ಯಾವ ಪದದಲ್ಲಿಯೂ “ಎ’ ಎಂಬ ಅಕ್ಷರ ಬರುವುದಿಲ್ಲ. ಇದನ್ನು ಗಮನಿಸಿದ ಚೌರಿ, ಕನ್ನಡದಲ್ಲಿಯೂ ಇಂಥ ಪ್ರಯತ್ನ ಮಾಡಬಹುದಲ್ಲವೇ ಎಂದು ಯೋಚಿಸಿದರು. ಆಗಿನಿಂದಲೇ ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಶುರು ಮಾಡಿದರು. ಒತ್ತಕ್ಷರ ಇಲ್ಲದ “ಚೌರೀಶನ ಕಥೆಗಳು’ ಪುಸ್ತಕಕ್ಕೆ, ಯೂನಿವರ್ಸಲ್ ಅಚೀವರ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಪ್ಯೂಚರ್ ಕಲಾಂಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗಳು ಲಭಿಸಿವೆ. ತಮಿಳುನಾಡಿನ ಮಧುರೈನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ವಿಶ್ವದಾಖಲೆಯ ಪ್ರಶಸ್ತಿ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಈ ಕೃತಿಯ ಎರಡನೇ ಮುದ್ರಣವಾಗಿ, 5 ಸಾವಿರ ಪುಸ್ತಕಗಳನ್ನು ಮುದ್ರಣಕ್ಕೆ ಕಳುಹಿಸಲಾಗಿದೆ. “ಒತ್ತಕ್ಷರಗಳಿಲ್ಲದೇ ಪದಗಳನ್ನು ಜೋಡಿಸುವುದು ಬಹಳ ಕಷ್ಟದ ಕೆಲಸ. ರೂಢಿ ಮಾಡಿಕೊಂಡು ಇಂಥ ಪ್ರಯೋಗಕ್ಕೆ ಕೈ ಹಾಕಿದೆ. ಈ ರೀತಿಯಲ್ಲಿ ಕಥೆ ಬರೆಯಲು ಮೊದಲಿಗೆ 2-3 ತಿಂಗಳು ಬೇಕಾಗಿತ್ತು. ಈಗ ಅರ್ಧ ಗಂಟೆಯೊಳಗೆ ಕಥೆ ಬರೆಯುತ್ತೇನೆ. ಕನ್ನಡದಲ್ಲಿಯೇ ಇದೊಂದು ವಿಶಿಷ್ಟ ಪ್ರಯೋಗ’.
-ಲಕ್ಷ್ಮಣ ಚೌರಿ, ಮಕ್ಕಳ ಸಾಹಿತಿ -ಭೈರೋಬಾ ಕಾಂಬಳೆ