Advertisement

ಕಥೆಗಳಿಗೆ ಬದುಕನ್ನು ಬದಲಿಸುವ ಶಕ್ತಿ ಇದೆ: ಡಾ. ಸಂಧ್ಯಾ ಪೈ

09:52 AM Nov 25, 2019 | Team Udayavani |

ಕೋಟ: ಉತ್ತಮ ಕಥೆಗಳಿಗೆ ಓದುಗರನ್ನು ಸದಾ ಕಾಡುವ ಮತ್ತು ಬದುಕಿನ ದೃಷ್ಟಿಕೋನವನ್ನು ಬದಲಾಯಿಸುವ ಸಾಮರ್ಥ್ಯ ಇದೆ ಎಂದು ತರಂಗ ಮತ್ತು ತುಷಾರ ನಿಯತಕಾಲಿಕಗಳ ವ್ಯವಸ್ಥಾಪಕ ಸಂಪಾದಕಿ ಡಾ ಸಂಧ್ಯಾ ಎಸ್. ಪೈ ಹೇಳಿದರು.

Advertisement

ಕೋಟದ ಕಾರಂತ ಕಲಾಭವನದಲ್ಲಿ, ತುಷಾರ ಮಾಸಪತ್ರಿಕೆಯು ಕ್ಯಾಲಿಫೋರ್ನಿಯಾದ ಸಾಹಿತ್ಯಾಂಜಲಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸಂಯೋಜಿಸಿದ ಕಥಾಸ್ಪರ್ಧೆಯ ಬಹುಮಾನ ವಿತರಣೆ ಮತ್ತು “ಕೇಳು ಸಖಿ’ ಲೇಖಕಿಯರ ಶಿಬಿರದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಗೆ ಕುಟುಂಬದ ಹೊರತಾದ ಪ್ರಪಂಚವೊಂದಿದೆ. ಹೀಗಾಗಿ ಅವಳ ಭಾವನೆಗಳಿಗೆ ನಾವು ಬೆಲೆ ಕೊಡಬೇಕು ಮತ್ತು ಆಕೆ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬೆಳೆಯುವಂತೆ ಪ್ರೇರೇಪಿಸಬೇಕು ಎಂದರು.

ತಾಯಿ ನೆಲವೇ ಶ್ರೇಷ್ಠ: ನಾವು ಅಮೆರಿಕ, ಆಫ್ರಿಕಾಗಳಂಥ ಊರುಗಳಲ್ಲಿ ಉದ್ಯೋಗ- ಉದ್ಯಮಗಳಲ್ಲಿ ತೊಡಗಿಕೊಳ್ಳಬಹುದು. ಆದರೆ ನಮಗೆ ನಿಜವಾದ ಗೌರವ-ನೆಮ್ಮದಿ ಸಿಗುವುದು ನಮ್ಮ ತಾಯಿ ನೆಲದಲ್ಲಿ ಎಂದು ಸ್ಪರ್ಧೆಯ ಬಹುಮಾನ ವಿತರಿಸಿದ ಅಮೆರಿಕನ್ನಡ ಲೇಖಕ, ಸಾಹಿತ್ಯಾಂಜಲಿಯ ಸ್ಥಾಪಕಾಧ್ಯಕ್ಷ ಡಾ ನಾಗ ಐತಾಳ ಅಭಿಪ್ರಾಯಪಟ್ಟರು.

ಕಥೆ ಓದುಗನಿಗೆ ಹತ್ತಿರವಾಗಬೇಕು: ಕಥೆ ಎಂದರೆ ಒಂದು ಬಗೆಯ ಅನುಭವ. ಅದು ಮೊದಲು ಲೇಖಕನ ಅನುಭವವಾಗಿ ಬಳಿಕ ಓದುಗನ ಅನುಭವವಾಗುತ್ತದೆ ಎಂಬುದಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳು ಸಾಕ್ಷಿ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ತಿಳಿಸಿದರು. ಲೇಖಕಿಯರಾದ ವೈದೇಹಿ, ಭುವನೇಶ್ವರಿ ಹೆಗಡೆ, ಮಣಿಪಾಲ ಮೀಡಿಯ ನೆಟ್‌ವರ್ಕ್ ಲಿ. ಸಿಇಒ ವಿನೋದ್ ಕುಮಾರ್, ಅಭಿನವ ಪ್ರಕಾಶನದ ರವಿಕುಮಾರ್ ಉಪಸ್ಥಿತರಿದ್ದರು.

ಬಹುಮಾನ ವಿತರಣೆ: ಕಥಾಸ್ಪರ್ಧೆಗೆ 500 ಕಥೆಗಳು ಬಂದಿದ್ದು, ಇದರಲ್ಲಿ 11 ಮಂದಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಮೆಚ್ಚುಗೆ ಪಡೆದ ಕಥಾ ಬಹುಮಾನಗಳನ್ನು ವಿತರಿಸಲಾಯಿತು. ಉಷಾ ನರಸಿಂಹನ್ ಮೈಸೂರು (ಪ್ರಥಮ), ಛಾಯಾ ಭಟ್ ಬೆಂಗಳೂರು, ಬಸವಣ್ಣೆಪ್ಪ ಕಂಬಾರ ಧಾರವಾಡ (ದ್ವಿತೀಯ), ತೇಜಸ್ವಿನಿ ಹೆಗ್ಡೆ ಬೆಂಗಳೂರು, ಶರದ್ ಸೌಕೂರು ಮುಂಬಯಿ, ಸ್ವಾಾಮಿ ಪೊನ್ನಾಚಿ ಕೊಳ್ಳೇಗಾಲ (ತೃತೀಯ) ಕಲ್ಪನಾ ಹೆಗಡೆ ಶಿರಸಿ, ಅರ್ಪಣಾ ಎಚ್.ಎಸ್. ಹೈದ್ರಾಬಾದ್, ಡಾ ಬಿ. ಜನಾರ್ಧನ ಭಟ್ ಬೆಳ್ಮಣ್, ಮನೋಹರ್ ನಾಯಕ್ ಮುಂಬಯಿ, ರೇಣುಕಾ ರಮಾನಂದ ಅಂಕೋಲಾ (ಮೆಚ್ಚುಗೆ ಪಡೆದ ಕತೆ) ಬಹುಮಾನ ವಿಜೇತರು.

Advertisement

ತುಷಾರದಿಂದ ಯುವಬರಹಗಾರರ ಸೃಷ್ಟಿ: “ಉದಯವಾಣಿ’ ಬಳಗವು ಲಕ್ಷಾಂತರ ಓದುಗರು, ಬರಹಗಾರರರನ್ನು ಸಿದ್ಧಗೊಳಿಸಿದೆ. ಈಗ ಕಥಾಸ್ಪರ್ಧೆ ಮತ್ತು ಶಿಬಿರದಿಂದಾಗಿ ಈ ಪರಂಪರೆ ಮುಂದುವರಿದಿದೆ ಎಂದು ಲೇಖಕಿ ವೈದೇಹಿ ಶ್ಲಾಘನೆ ವ್ಯಕ್ತಪಡಿಸಿದರು. “ತುಷಾರ’ ಮಾಸಪತ್ರಿಕೆಯು ನನ್ನನ್ನು ಲೇಖಕಿಯಾಗಿ ರೂಪಿಸಿದೆ ಎಂದು ಭುವನೇಶ್ವರಿ ಹೆಗಡೆ ತಾವು ಲೇಖನ ಬರೆಯಲಾರಂಭಿಸಿದ ದಿನಗಳನ್ನು ನೆನಪಿಸಿಕೊಂಡರು.

ಕೇಳು ಸಖಿ ಶಿಬಿರ ಸಮಾರೋಪ: ತುಷಾರ ಮತ್ತು ಉದಯವಾಣಿ ಬಳಗದ ಮಹಿಳಾ ಬರಹಗಾರರಿಗಾಗಿ ಬೀಜಾಡಿಯ ಕಡಲಮನೆಯಲ್ಲಿ ಆಯೋಜನೆಗೊಂಡ ಶಿಬಿರದ ಸಮಾರೋಪ ಕೂಡ ಇದೇ ವೇದಿಕೆಯಲ್ಲಿ ಜರುಗಿತು. ರಾಜ್ಯದ ವಿವಿಧ ಕಡೆಗಳಿಂದ 25 ಮಂದಿ ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿದ್ದರು. ಡಾ ಸಂಧ್ಯಾ ಎಸ್. ಪೈ ಮಾರ್ಗದರ್ಶನದಲ್ಲಿ ಜರುಗಿದ ಶಿಬಿರವನ್ನು ವೈದೇಹಿ ಮತ್ತು ಭುವನೇಶ್ವರಿ ಹೆಗಡೆ ನಿರ್ದೇಶಿಸಿದರು. ಶಿಬಿರಾರ್ಥಿಗಳು ಶಿಬಿರದ ಅನುಭವವನ್ನು ಹಂಚಿಕೊಳ್ಳುತ್ತ ಮನಬಿಚ್ಚಿ ಮಾತನಾಡುವ ಅವಕಾಶವನ್ನು ಮಾಡಿಕೊಡುವ ಇಂಥ ಶಿಬಿರಗಳು ಆಗಾಗ ಆಯೋಜನೆಗೊಳ್ಳಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next