Advertisement

ಅನಗತ್ಯ ವಿದ್ಯುತ್‌, ವಾಹನ ಬಳಕೆ ನಿಲ್ಲಿಸಿ; ಡಾ.ಎಂ.ಮಹಂತೇಶಪ್ಪ 

06:18 PM Jun 14, 2022 | Team Udayavani |

ಹುಣಸೂರು: ಭೂಮಿಯ ಫಲವತ್ತತೆ-ಹಸಿರು ಸಂರಕ್ಷಣೆ, ಪ್ಲಾಸ್ಟಿಕ್‌ ಬಳಸದಿರುವುದು, ತ್ಯಾಜ್ಯದ ಸದ್ಭಳಕೆ, ವಿದ್ಯುತ್‌, ರಾಸಾಯನಿಕಗಳ ಹಾಗೂ ವಾಹನಗಳ ಮಿತ ಬಳಕೆ, ಪರಿಸರ ಸ್ನೇಹಿ ಜೀವನಕ್ರಮಗಳನ್ನು ಅನುಸರಿಸಿದಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾಗಲಿದೆ ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮಹಂತೇಶಪ್ಪ ಹೇಳಿದರು.

Advertisement

ವಿಶ್ವಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಹೆಗ್ಗಂದೂರಿನಲ್ಲಿ ಒಡಿಪಿ ಸಂಸ್ಥೆಯು ನಾಗನಹಳ್ಳಿಯ ಕೃಷಿ ವಿಸ್ತರಣಾ ಶಿಕ್ಷಣ ಘಟಕ, ಮೈಸೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಹಾಗೂ ಶುಂಠಿ ಬೆಳೆಯಲ್ಲಿ ಉತ್ಪಾದನಾ ತಾಂತ್ರಿಕತೆ ಮತ್ತು ತೆಂಗಿನಲ್ಲಿ ರುಗೋಸ್‌ ಬಿಳಿನೊಣದ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪರಿಸರ ಮಾಲಿನ್ಯಕ್ಕೆ ಅರಣ್ಯನಾಶ, ನಗರೀಕರಣ, ಕೈಗಾರಿಕರಣ, ತಾಪಮಾನ ಏರಿಕೆ ಕಾರಣವಾಗಿದ್ದು, ಹಳ್ಳಿಗಳಿಂದಲೇ ಪರಿಸರಸಂರಕ್ಷಣೆಗಾಗಿ ನಿಮ್ಮ ಜಮೀನಿಗೆ ಬಳಸುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಕಡಿಮೆ ಮಾಡಿ, ಅನಗತ್ಯವಾಗಿ ವಿದ್ಯುತ್‌ ಹಾಗೂ ವಾಹನ ಬಳಕೆ ಮಾಡಬೇಡಿ. ಗಿಡ-ಮರ ಬೆಳೆಸುವುದನ್ನು ಹವ್ಯಾಸವಾಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ನಾಗನಹಳ್ಳಿಯ ಕೃಷಿ ವಿಸ್ತರಣಾ ಶಿಕ್ಷಣಘಟಕದ ಬೇಸಾಯಶಾಸ್ತ್ರದ ಪ್ರಾಧ್ಯಾಪಕ ಡಾ.ಸಿ.ರಾಮಚಂದ್ರ ಮಾತನಾಡಿ, ಶುಂಠಿಬೆಳೆಯ ಸುಧಾರಿತ ಬೇಸಾಯ ಕ್ರಮದಲ್ಲಿ ತಳಿಗಳ ಆಯ್ಕೆಗೆ ಆದ್ಯತೆ ನೀಡಬೇಕು. ಅಗತ್ಯಕ್ಕೆ ತಕ್ಕಷ್ಟು ಮಾತ್ರ ರಸಗೊಬ್ಬರ, ಕ್ರಿಮಿನಾಶಕ ಬಳಸಬೇಕು. ನೀರಾವರಿ ವ್ಯವಸ್ಥೆ ಸಮರ್ಪಕ ವಾಗಿರಬೇಕು. ಅಂತರ ಬೇಸಾಯ ಮಾಡುವುದರಿಂದ ಗುಣಮಟ್ಟದ ಶುಂಠಿ ಉತ್ಪಾದಿಸಬಹುದಾಗಿದೆ. ಶುಂಠಿ ಬೆಳೆಯಲ್ಲಿ ಕಂಡು ಬರುವ ರೋಗಗಳು ಹಾಗೂ ಅವುಗಳ ನಿರ್ವಹಣಾ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ತೋಟಗಾರಿಕಾ ತಜ್ಞ ರಾಹುಲ್‌ದಾಸ್‌ ಹಾಗೂ ಸಸ್ಯಸಂರಕ್ಷಣೆ ವಿಭಾಗದ ಸಹಾಯಕ
ಪ್ರಾಧ್ಯಾಪಕಿ ಡಾ.ಆರ್‌.ಎನ್‌.ಪುಷ್ಪ ತೆಂಗಿನಲ್ಲಿ ಕಂಡುಬರುವ ರುಗೋಸ್‌ ಬಿಳಿನೊಣದ ನಿಯಂತ್ರಣಾ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.

ಒಡಿಪಿ ಸಂಸ್ಥೆಯ ರಮೇಶ್‌ ಸಂಸ್ಥೆಯ ಯೋಜನೆಗಳು ಮತ್ತು ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಹೈನುಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕಿ ಡಾ.ನಾಗಮಣಿ, ಡಾ.ಕೃಷ್ಣಯಾದವ್‌, ಒಡಿಪಿ ಸಂಯೋಜಕರಾದ ಸುಶೀಲಾ, ಕಲಾವತಿ, ವಡ್ಡಂಬಾಳಿನ ಲಕ್ಷ್ಮಣತೀರ್ಥ, ರೈತ ಉತ್ಪಾದಕ ಸಮಿತಿ ಅಧ್ಯಕ್ಷ ಜಯಣ್ಣ, ಪದಾಧಿಕಾರಿಗಳಾದ ಚೆನ್ನವೀರಪ್ಪ, ಗಣೇಶ್‌ಗೌಡ, ಮುಖಂಡರಾದ ಚಂದ್ರಪ್ಪ, ರಾಜಯ್ಯ, ಕ್ಷೇತ್ರಸಹಾಯಕ ಧರಣೇಶ್‌ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next