Advertisement

ಎಸ್‌ಡಿಎಂಸಿ ಖಾತೆ ಬಡ್ಡಿ ಹಣ ಪಡೆವ ಪ್ರಕ್ರಿಯೆ ನಿಲ್ಲಿಸಿ

01:37 PM May 31, 2019 | Suhan S |

ಹುಬ್ಬಳ್ಳಿ: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಸ್‌ಡಿಎಂಸಿ ಖಾತೆಯಲ್ಲಿ ಜಮೆ ಇರುವ ಬಡ್ಡಿ ಹಣ ಪಡೆಯುವ ಪ್ರಕ್ರಿಯೆ ಕೂಡಲೇ ಹಿಂಪಡೆಯಬೇಕು ಹಾಗೂ ಈಗಾಗಲೇ ಪಡೆದಿರುವ ಶಾಲೆಗಳಿಗೆ ಅವರ ಮೊತ್ತವನ್ನು ಹಿಂದಿರುಗಿಸಲು ಆದೇಶಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.

Advertisement

ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸರಕಾರದ ಅನುದಾನದ ಕೊರತೆಯಿಂದ ನೀರು, ವಿದ್ಯುತ್‌, ದೂರವಾಣಿ, ನಿಪುಣ ಕೆಲಸದಾಳುಗಳಿಗೆ ಹಾಗೂ ಇತ್ಯಾದಿ ಕೆಲಸ ಕಾರ್ಯಗಳಿಗೆ ಶಾಲೆಯ ಎಸ್‌ಡಿಎಂಸಿ ಖಾತೆಯಿಂದ ಬರುವ ಬಡ್ಡಿ ಹಣದಲ್ಲಿ ಬಳಕೆ ಮಾಡುತ್ತಿದ್ದಾರೆ. ಇಂತಹ ಬಡ್ಡಿ ಹಣವೂ ಸಹ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮೊತ್ತವನ್ನಾಧರಿಸಿ 200ದಿಂದ 1000 ರೂ. ವರೆಗೆ ಇರುತ್ತದೆ. ಇಂತಹ ಕನಿಷ್ಠ ಮೊತ್ತವನ್ನು ಸರಕಾರವು ಯಾವ ಉದ್ದೇಶಕ್ಕೆ ಪಡೆಯುತ್ತಿದೆ ಎಂಬುದು ತಿಳಿದಿಲ್ಲ. ಅಲ್ಲದೇ ಈ ಮೊತ್ತ ಪಡೆದಲ್ಲಿ ಎಲ್ಲ ಶಾಲೆಗಳ ನಿರ್ವಹಣೆಗಾಗಿ ಸಾಕಷ್ಟು ಸಾದಿಲ್ವಾರು ಮೊತ್ತ ಬಿಡುಗಡೆ ಮಾಡಬೇಕಾಗುತ್ತದೆ.

ಸರಕಾರದ ಶಿಕ್ಷಣ ಸಂಸ್ಥೆಗಳು ಹೀನಾಯ ಸ್ಥಿತಿಯಲ್ಲಿರುವುದು ಇನ್ನು ಅರ್ಥವಾಗಿಲ್ಲವೆಂದರೆ ಹೇಗೆ? ಎಷ್ಟೋ ಶಾಲೆಗಳಲ್ಲಿ ಮಕ್ಕಳಿಂದ ಕಸ ಗುಡಿಸುವುದು, ಗಂಟೆ ಬಾರಿಸುವುದು ಮತ್ತು ಬಾಗಿಲ ಕೀಲಿ ಹಾಕಿಸುವುದು ಮುಂತಾದ ಕೆಲಸಗಳನ್ನು ಅನಿವಾರ್ಯವಾಗಿ ಮಾಡಲಾಗುತ್ತಿತ್ತು. ಮಾಧ್ಯಮದಲ್ಲಿ ಬರುತ್ತಿದ್ದ ಈ ಅನಿಷ್ಟ ಪದ್ಧತಿ ತಪ್ಪಿಸಲು ಎಸ್‌ಡಿಎಂಸಿಯಲ್ಲಿ ಜಮಾ ಇರುವ ಬಡ್ಡಿಯನ್ನು ಈ ರೀತಿ ಹಿಂದೆ ಪಡೆದರೆ ಹೇಗೆ? ಸರಕಾರದಲ್ಲಿ ಕೋಟಿ ಕೋಟಿ ಹಣ ವಿನಾಕಾರಣ ಪೋಲಾಗುವುದನ್ನು ಮೊದಲು ನಿಲ್ಲಿಸಿ. ಈಗ ಎಸ್‌ಡಿಎಂಸಿ ಖಾತೆಯಲ್ಲಿ ಜಮೆ ಇರುವ ಬಡ್ಡಿ ಮೊತ್ತವನ್ನು ಬಿಇಒ ಮತ್ತು ಇಆರ್‌ಸಿಒ ಜಂಟಿ ಖಾತೆಗೆ ಜಮಾ ಮಾಡುವಂತೆ ಉಪನಿರ್ದೇಶಕರು ಆದೇಶ ಹೊರಡಿಸಿರುವುದನ್ನು ಕೂಡಲೇ ಹಿಂಪಡೆಯಬೇಕೆಂದು ಹೊರಟ್ಟಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next