ಕಾಳಗಿ: ಕೋಲಿ ಸಮಾಜದ ಅಭಿವೃದ್ಧಿಗೆ ಕುಡಿತ ಮೊದಲಾದ ದುಶ್ಚಟಗಳೇ ಬಹುದೊಡ್ಡ ಶಾಪವಾಗಿ ಕಾಡುತ್ತಿದ್ದು, ಸಮಾಜದ ಹಿರಿಯರು, ಯುವಕರು ಇದನ್ನು ಅರ್ಥಮಾಡಿಕೊಂಡು ಮದ್ಯಪಾನ ಮಾಡುವುದನ್ನು ಬಿಟ್ಟು, ಇತರ ಸಮಾಜದ ಜನರೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಂಡು ಸಹಬಾಳ್ವೆ ನಡೆಸಿದರೆ ಸಮಾಜದ ಏಳಿಗೆಯಾಗುತ್ತದೆ ಎಂದು ಕೋಲಿ ಸಮಾಜದ ಯುವ ಮುಖಂಡ ಸಂದೇಶ ಕಮಕನೂರ ಹೇಳಿದರು.
ಸ್ವಗ್ರಾಮ ಕಮಕನೂರಲ್ಲಿ ರವಿವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ನವರ 902ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವುದೇ ಸಮಾಜ ಎಷ್ಟೇ ಶಕ್ತಿಶಾಲಿಯಗಿದ್ದರೂ, ಶಿಕ್ಷಣ, ಸಂಸ್ಕಾರ, ಅನ್ಯ ಸಮುದಾಯದ ಸಹಾಯ, ಸಹಕಾರವಿಲ್ಲದೆ ಏಕಾಂಗಿಯಾಗಿ ಬೆಳೆಯಲು ಸಾಧ್ಯವಿಲ್ಲ ಎಂದರು.
ಕೋಲಿ ಸಮಾಜದ ಜನತೆ ಇದನ್ನು ಮನಗಂಡು ಯಾರೊಂದಿಗೂ ವ್ಯರ್ಥ ಸಂಘರ್ಷಕ್ಕಿಳಿಯದೇ ಶಾಂತಿ, ಸೌಹಾರ್ದತೆಯಿಂದ ಬಾಳುವಂತಾಗಬೇಕು ಎಂದು ತಿಳಿಸಿದರು. ಗ್ರಾಮದ ಅಂಬಿಗರ ಚೌಡಯ್ಯ ದೇವಸ್ಥಾನದ ಜಾಗದಲ್ಲಿ ಕಾಂಪೌಂಡ್ ಗೋಡೆ ಕಟ್ಟಲು 50 ಸಾವಿರ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದ ಅವರು, ಮುಂದಿನ ವರ್ಷದ ಜಯಂತಿಯೊಳಗಾಗಿ ಕಾಂಪೌಂಡ್ ಕೆಲಸ ಮುಗಿಸುವ ಪ್ರಯತ್ನಿಸಲಾಗುವುದು. ಅಲ್ಲದೇ ಗ್ರಾಮದ ಬಡವರಿಗಾಗಿ ಆರೋಗ್ಯ ತಪಾಸಣೆಗಾಗಿ ಕೆಲವೇ ದಿನಗಳಲ್ಲಿ ಹೆಲ್ತ್ ಕ್ಯಾಂಪ್ ಆಯೋಜಿಸಲಾಗುವುದು ಎಂದರು.
ಕಲಬುರಗಿಯ ಬಚಪನ್ ಶಾಲೆ ಪ್ರಾಚಾರ್ಯ ರಾಜಕುಮಾರ, ಗ್ರಾಪಂ ಸದಸ್ಯ ಗುಂಡು ಮುತ್ತಿನ್, ಸಂಗಮೇಶ ಜಮಾದಾರ, ನ್ಯಾಯವಾದಿ ಲಾಳೆ ಪಟೇಲ್ ಮಾತನಾಡಿದರು. ಗ್ರಾಪಂ ಸದಸ್ಯರಾದ ಗುಣವಂತ ಹೋಳ್ಕರ್, ರುಕ್ಮಿಣಿ ಭೀಮಾಶಂಕರ, ಸಂಜೀವ ಬಿರಾದಾರ, ರುಕ್ಮಣ್ಣ ಗೋಟೂರ, ಹಣಮಂತ ಬಿ. ಜಮಾದಾರ, ಸೂರ್ಯಕಾಂತ ಜಮಾದಾರ, ಜಗದೀಶ ಶ್ಯಾಮಸುಂದರ, ಶ್ರೀಶೈಲ ಹೊಸಮನಿ, ದೇವರಾಜ ಜಮಾದಾರ ಮತ್ತಿತರರು ಇದ್ದರು. ಭೀಮಾಶಂಕರ ಕಮಕನೂರ ನಿರೂಪಿಸಿ, ವಂದಿಸಿದರು.