Advertisement

ಕಂಡ್ಲೂರು ಠಾಣೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ; ನಾಲ್ವರ ಸೆರೆ

04:43 AM May 18, 2019 | Sriram |

ಕುಂದಾಪುರ/ಬಸ್ರೂರು: ಅಕ್ರಮ ಮರಳು ದಂಧೆಗೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ದುಷ್ಕರ್ಮಿಗಳು ಗುರುವಾರ ರಾತ್ರಿ 10.30ರ ಸುಮಾರಿಗೆ ಕುಂದಾಪುರ ಗ್ರಾಮಾಂತರ ಕಂಡ್ಲೂರು ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದು ಪರಿಸರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು.

Advertisement

ಗುರುವಾರ ರಾತ್ರಿ ಕಂಡ್ಲೂರಿನ ಅಕ್ರಮ ಮರಳುಗಾರಿಕಾ ಅಡ್ಡೆ ಮೇಲೆ ಗ್ರಾ. ಠಾಣೆ ಪೊಲೀಸರು ದಾಳಿ ನಡೆಸಿ ವಾಹನ ವಶಕ್ಕೆ ತೆಗೆದುಕೊಂಡಿದ್ದರು. ಅವರನ್ನು ಬಿಡುಗಡೆಗೊಳಿಸುವಂತೆ ಕೆಲವರು ಒತ್ತಡ ಹೇರಿದರೂ ಪರಿಣಾಮ ಬೀರದ್ದರಿಂದ ಗುಂಪೊಂದು ಠಾಣೆಯ ಮೇಲೆ ಕಲ್ಲೆಸೆದಿದ್ದಾರೆ. ಈ ಪೈಕಿ ಬೆಟ್ಟೆ ಶಾಹಿದ್‌ (30), ಜಾಕಿರ್‌ ಹುಸೇನ್‌ (32), ತಬ್ರೇಜ್‌ (26), ಕರಾಣಿ ಶಾಕಿರ್‌ (24) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಶುಕ್ರವಾರ ಬೆಳಗ್ಗೆ ಕಂಡ್ಲೂರು ಠಾಣೆಗೆ ಭೇಟಿ ನೀಡಿದ್ದಾರೆ. ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ಸೇರಿದಂತೆ ಮೇಲಧಿಕಾರಿಗಳು ಉಪಸ್ಥಿತರಿದ್ದರು.

ಪ್ರಕರಣ ದಾಖಲು
ಗುರುವಾರ ರಾತ್ರಿ ಎಸ್‌ಐ ಶ್ರೀಧರ ನಾಯ್ಕ ಅಕ್ರಮ ಮರಳುಗಾರಿಕೆಯ ವಾಹನ ವಶಕ್ಕೆ ಪಡೆದು ಠಾಣೆಗೆ ತಂದಿದ್ದರು. ಸಿಬಂದಿ ವಾಹನವನ್ನು ಠಾಣೆಯ ಆವರಣದಲ್ಲಿ ಇರಿಸಿ ಬರುತ್ತಿದ್ದಾಗ ಶಾಹಿದ್‌, ಜಾಕಿರ್‌, ಶಾಕಿರ್‌ ಮತ್ತು ತಬ್ರೇಜ್‌, ನೌಶಾದ್‌ ಆಲಿ ಕೋಟೆ, ಕರಾಣಿ ಮುಸೀನ್‌, ಶಾಹಿದ್‌, ಕರಾಣಿ ನದೀಮ್‌, ಕರಾಣಿಶಾಹಿದ್‌, ರಯಾನ್‌, ಕರಾಣಿ ಬಿಲಾಲ್,ಕರಾಣಿ ಮನ್ಸೂರ್‌, ಮಹಮ್ಮದ್‌, ಸದಾಕತ್‌, ಜಿಮ್ಮಿ ಜೆಫ್ರಿ, ಅಬ್ದುಲ್ಲ, ಫಹಾದ್‌, ನಹೀಮ್‌, ಹಮೀದ್‌ ದ್ವಿಚಕ್ರ ವಾಹನಗಳಲ್ಲಿ ಬಂದು ಸಿಬಂದಿಯನ್ನು ಸುತ್ತುವರಿದರು. ನಮ್ಮ ಹುಡುಗರು ಹೊಗೆ ಸಾಗಾಟ ಮಾಡಿದರೆ ಅವರನ್ನೇಕೆ ಹಿಡಿಯುತ್ತೀರಿ, ನಮ್ಮ ವಾಹನದ ಮೇಲೆ ಕೇಸು ಮಾಡಬೇಡಿ, ಬಿಟ್ಟುಬಿಡಿ ಎಂದು ಏರುದನಿಯಲ್ಲಿ ಹೇಳಿ ತಳ್ಳಿ ಠಾಣೆಗೆ ಕಲ್ಲು ಎಸೆದು ಪರಾರಿಯಾದರು. ನಾಲ್ವರನ್ನು ಸ್ಥಳ ದಲ್ಲೇ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಠಾಣೆಗೆ ಕಲ್ಲೆಸೆದು ಹಾನಿ ಮಾಡಿ,ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂಬ ಆರೋಪದಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಡಿಸಿ, ಎಸಿ ಮೇಲೂ ಹಲ್ಲೆ ನಡೆದಿತ್ತು
2 ವರ್ಷಗಳ ಹಿಂದೆ ಮರಳು ದಂಧೆಕೋರರು ಕಂಡ್ಲೂರಿನಲ್ಲಿ ಡಿಸಿ ಹಾಗೂ ಎಸಿ ಮೇಲೆ ಹಲ್ಲೆ ನಡೆಸಿದ್ದರು. 2017ರ ಎ. 2ರಂದು ರಾತ್ರಿ ಆಗಿನ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕುಂದಾಪುರದ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್‌, ಅಂಪಾರು ಗ್ರಾಮ ಕರಣಿಕ ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ಮೇಲೆ ಹಲ್ಲೆ, ಕಲ್ಲು ತೂರಿದ್ದರು.

ತನಿಖೆಗೆ 3 ತಂಡ ರಚನೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ 4 ಮಂದಿಯನ್ನು ಬಂಧಿಸಿದ್ದು, ದೂರು ದಾಖಲಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗಾಗಿ 3 ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ. 4 ಆಯಾ ಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಪ್ಯಾಟ್ರೋಲಿಂಗ್‌ ವ್ಯವಸ್ಥೆಯನ್ನು ಆರಂಭಿಸಲಾಗುವುದು. ನೈಟ್ ರೌಂಡ್ಸ್‌ ಕೂಡ ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಿಸಲಿದೆ. – ನಿಶಾ ಜೇಮ್ಸ್‌, ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next