ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿಯವರು ಶುಕ್ರವಾರ ಚುನಾವಣಾ ಪ್ರಚಾರ ಕೈಗೊಂಡಿದ್ದಾಗ, ಕಾರೊಂದರ ಮೇಲೆ ಕಲ್ಲು ತೂರಲಾಗಿದೆ.
ಕೆ.ಆರ್.ಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ ಕಾರಿನ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು, ಇದರಿಂದ ಕಾರಿನ ಒಂದು ಭಾಗದ ಗಾಜು ಪುಡಿಯಾಗಿದೆ. ಕಟ್ಟೆಕ್ಯಾತನಹಳ್ಳಿ ಸಮೀಪ ನಿಖಿಲ್ ಚುನಾವಣಾ ಪ್ರಚಾರ ಮುಗಿಸಿ ಅಕ್ಕಿಹೆಬ್ಟಾಳು ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ತಾಲೂಕಿನ ಹುಲಿವಾನ ಗ್ರಾಮದ ಬಳಿ ಚುನಾವಣಾ ಪ್ರಚಾರದ ವೇಳೆ ಮತದಾರರು ನಿಖಿಲ್ ರನ್ನು ತರಾಟೆಗೆತೆಗೆದುಕೊಂಡರು. ಭಾಷಣ ಮಾಡಿದ ನಿಖೀಲ್, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ನೀಡಿದ್ದಾರೆ. ಅವೆಲ್ಲವೂ ಅನುಷ್ಠಾನಕ್ಕೆ ಬರಬೇಕಾದರೆ…ಎಂದು ಹೇಳುತ್ತಿದ್ದಂತೆ ಅವರ ಮಾತಿಗೆ ಬ್ರೇಕ್ ಹಾಕಿದ ಮತದಾರರು, ಮುಂದೆ ಮಾತನಾಡುವುದಕ್ಕೆ ಅವಕಾಶ ನೀಡಲೇ ಇಲ್ಲ. ತಕ್ಷಣ ಅವರು ಅಲ್ಲಿಂದ ನಿರ್ಗಮಿಸಿದರು.
ಈ ಮಧ್ಯೆ, ತಾಲೂಕಿನ ಚಿಕ್ಕೋನಹಳ್ಳಿ ಗ್ರಾಮದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ತೆರಳಿದ್ದ ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್‌ಗೌಡ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವು ಮುಖಂಡರನ್ನು ರೈತರು ತರಾಟೆ ತೆಗೆದುಕೊಂಡು, ಸುಮಲತಾ ಪರ ಘೋಷಣೆ ಕೂಗಿದರು. ರೈತರ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಾಗದ ನೀವು, ಈಗ ನಿಮ್ಮ ಪಕ್ಷದ ಅಭ್ಯರ್ಥಿ ಪರ ಮತ ಕೇಳಲು ಬಂದಿದ್ದಿರಿ. ನಿ ಮಗೆ ನೈತಿಕತೆ ಇದೆಯೇ ಎಂದು ಶಾಸಕ ಸುರೇಶ್‌ಗೌಡ ಹಾಗೂಕೆ.ಟಿ.ಶ್ರೀಕಂಠೇಗೌಡರನ್ನು ಪ್ರಶ್ನಿಸಿದರು. ಬಳಿಕ, ಸುಮಲತಾ ಪರ ಘೋಷಣೆ ಕೂಗಿದರು. ರೈತರನ್ನು ಸಮಾಧಾನಪಡಿಸಿದ ಶಾಸಕರು ಚುನಾವಣೆ ಬಳಿಕ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಬೂಬು ಹೇಳಿ ಅಲ್ಲಿಂದ ನಿರ್ಗಮಿಸಿದರು.