ಕಲಬುರಗಿ: ನಗರದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಮತ್ತು ಕಾರುಗಳ ಮೇಲೆ ಸೋಮವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಿ ಜಖಂಗೊಳಿಸಿರುವ ಘಟನೆ ನಗರದ ಸಂತೋಷ್ ಕಾಲೊನಿಯಲ್ಲಿ ನಡೆದಿದೆ.
ದುಷ್ಕರ್ಮಿಗಳ ದಾಳಿಯಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿದ್ದು, ಆಟೋಗಳಿಗೂ ಕೂಡ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.
ಲಕ್ಷಾಂತರ ರೂಪಾಯಿಗಳ ನಷ್ಟ ಕಾರು ಮತ್ತು ಬೈಕ್ ಮಾಲೀಕರಿಗೆ ಎದುರಾಗಿದೆ. ಈ ಹಿಂದೆ ಹಲವು ಬಾರಿ ನಗರದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದವು. ಕೋವಿಡ್ ಕಾರಣದಿಂದ ಈ ದುಷ್ಕರ್ಮಿಗಳ ಅಟ್ಟಹಾಸ ತುಸು ತಗ್ಗಿತ್ತು. ಆದರೆ ಈಗ ಪುನಃ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಭಯ ಮೂಡಿಸಿದೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಸಲಿಂಗಕಾಮಿ ಕಥಾಹಂದರ… ಗಲ್ಫ್ ದೇಶದಲ್ಲಿ ಮೋಹನ್ ಲಾಲ್ ʼಮಾನ್ ಸ್ಟರ್ʼ ಸಿನಿಮಾ ಬ್ಯಾನ್
ಘಟನೆಯ ದೃಶ್ಯಾವಳಿಗಳು ಹಲವಾರು ಮನೆಗಳ ಮುಂದುಗಡೆ ಅಳವಡಿಸಿದ್ದ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದ್ದು, ದುಷ್ಕರ್ಮಿಗಳ ಪತ್ತೆಗೆ ಈ ದೃಶ್ಯಾವಳಿಗಳು ಅನುಕೂಲವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಇದನ್ನು ತಡೆಯುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿರುವುದು ಮತ್ತು ರಾತ್ರಿಯಲ್ಲಿ ನಡೆಯುತ್ತಿರುವ ಗಸ್ತು ಕರ್ತವ್ಯದ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.