ಕಾಸರಗೋಡು: ರಾಜ್ಯದಲ್ಲಿ ರೈಲುಗಳಿಗೆ ವ್ಯಾಪಕವಾಗಿ ಕಲ್ಲು ತೂರಾಟ ನಡೆಸುವುದನ್ನು ಗಂಭೀರವಾಗಿ ಪರಿಗಣಿಸಿ ತಡೆಗಟ್ಟಲು ಕಠಿನ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ| ಶೇಖ್ ದರ್ವೇಶ್ ಸಾಹಿಬ್ ರಾಜ್ಯದ ಜಿಲ್ಲೆಗಳ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.
ಈ ನಿರ್ದೇಶವನ್ನು ಎಲ್ಲ ಜಿಲ್ಲಾ ಪೊಲೀಸ್ ಕಚೇರಿಗಳಿಗೆ ಈಗಾಗಲೇ ಕಳುಹಿಸಿಕೊಡಲಾಗಿದ್ದು, ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗಳೇ ತನಿಖೆ ನಡೆಸಬೇಕೆಂದು ತಿಳಿಸಲಾಗಿದೆ.
ರೈಲುಗಳಿಗೆ ಕಲ್ಲು ತೂರಾಟ ನಡೆದ ಸ್ಥಳದ ಸಮೀಪದ ಮನೆಗಳಲ್ಲಿ ಸಿಸಿ ಕೆಮರಾಗಳಿದ್ದಲ್ಲಿ ಸಮಗ್ರವಾದ ರೀತಿಯಲ್ಲಿ ಪರಿಶೀಲಿಸಬೇಕು. ಅಲ್ಲದೆ ರೈಲು ಹಳಿಗಳ ಸಮೀಪದ ರಸ್ತೆಗಳ ಸಿಸಿ ಕೆಮರಾಗಳನ್ನು ಪರಿಶೀಲಿಸಬೇಕು. ಅದರಲ್ಲಿ ದುಷ್ಕರ್ಮಿಗಳ ಮಾಹಿತಿ ಲಭಿಸಿದಲ್ಲಿ ಅದರ ಜಾಡು ಹಿಡಿದು ಅವರನ್ನು ಬಂಧಿಸಿ ಕಠಿನ ಕ್ರಮ ತೆಗೆದುಕೊಳ್ಳಬೇಕು. ರೈಲು ಹಳಿಗಳನ್ನು ಪೊಲೀಸರು ಪದೇಪದೆ ತಪಾಸಣೆಗೊಳಪಡಿಸಬೇಕು.
ಹಳಿಗಳ ಮತ್ತು ರೈಲು ನಿಲ್ದಾಣಗಳು ಹಾಗೂ ಪರಿಸರ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಏರ್ಪಡಿಸಬೇಕು. ರಾತ್ರಿ ಹೆಚ್ಚಿನ ನಿಗಾ ವಹಿಸಬೇಕು. ಇದಕ್ಕೆ ರೈಲ್ವೇ ಭದ್ರತಾ ಪಡೆ ಮತ್ತು ರೈಲ್ವೇ ಪೊಲೀಸರ ಸಹಾಯವನ್ನು ಬಳಸಿಕೊಳ್ಳಬೇಕೆಂದು ಡಿಜಿಪಿ ತಿಳಿಸಿದ್ದಾರೆ.
ರೈಲುಗಳಿಗೆ ಕಲ್ಲು ತೂರಾಟ ತಡೆಗಟ್ಟಲು ಸಾರ್ವಜನಿಕರ ನೆರವನ್ನು ಪಡೆಯಬೇಕು. ಕಲ್ಲು ತೂರಾಟ ನಡೆಯುತ್ತಿರುವ ಪ್ರದೇಶದ ಜನರನ್ನು ಒಳಗೊಂಡ ವಿಶೇಷ ಸಮಿತಿ ರಚಿಸಬೇಕು. ಆ ಮೂಲಕ ತನಿಖೆಗಾಗಿ ಜನರ ಸಹಭಾಗಿತ್ವ ಖಚಿತಪಡಿಸಬೇಕೆಂದು ತಿಳಿಸಲಾಗಿದೆ.