ಬೆಳಗಾವಿ: ನಗರದ ಚನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ಕೆಲ ಕಿಡಿಗೇಡಿಗಳು ಮಹಾರಾಷ್ಟ್ರ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
ಚನ್ನಮ್ಮ ವೃತ್ತದ ಪಕ್ಕದಲ್ಲಿರುವ ಕ್ಲಬ್ ರಸ್ತೆಯಿಂದ ಹೊರಟಿದ್ದ ಮಹಾರಾಷ್ಟ್ರ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಸಿವಿಲ್, ಆಸ್ಪತ್ರೆ, ಮಿಲನ್ ಹೊಟೇಲ್ ವರೆಗೂ ಬೆನ್ನಟ್ಟಿ ಲಾಠಿ ಪ್ರಹಾರ ನಡೆಸಿದರು.
ಜಿಲ್ಲಾಡಳಿತ ಕೊರೊನಾ ಹಿನ್ನೆಲೆಯಲ್ಲಿ ಅದ್ಧೂರಿ ಮೆರವಣಿಗೆಗೆ ಬ್ರೇಕ್ ಹಾಕಿದೆ. ಆದರೂ ಕನ್ನಡಿಗರ ಉತ್ಸಾಹ ಕಡಿಮೆ ಆಗಿರಲಿಲ್ಲ. ನಗರದ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಕನ್ನಡಪರ ಘೋಷಣೆ ಕೂಗಿದ ಯುವಕರು ಬೈಕ್‌ಗಳಿಗೆ ಕನ್ನಡ ಬಾವುಟ ಹಾಕಿ ಸ್ಟಂಟ್ ಮಾಡುತ್ತಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿದರು.
ಇದನ್ನೂ ಓದಿ:ಭಕ್ತರ ಸಂಖ್ಯೆ ಹೆಚ್ಚಳ: ನ. 4ರಿಂದ ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಸಮಯ ವಿಸ್ತರಣೆ
ಈ ವರ್ಷ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಬೆಳಗಾವಿ ಮಹಾನಗರ ಪಾಲಿಕೆಯಿಂದ ನವೀಕೃತ ಚನ್ನಮ್ಮ ವೃತ್ತ ಸಿಂಗಾರಗೊಂಡಿತ್ತು. ಮಧ್ಯರಾತ್ರಿಯಿಂದಲೇ ಕನ್ನಡಿಗರು ಚನ್ನಮ್ಮ ವೃತ್ತಕ್ಕೆ ಬಂದು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ರವಿವಾರ ರಾತ್ರಿವೆರೆಗೂ ಈ ಸಂಭ್ರಮ ಮುಂದುವರಿದಿತ್ತು. ಪೊಲೀಸರು ಗುಂಪುಗೂಡದಂತೆ ಎಷ್ಟೇ ಹೇಳಿದರೂ ಜನರು ಮಾತ್ರ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.