Advertisement

ಮೀನು ಮಾರುಕಟ್ಟೆ ಗೆ ಜಾಗ ಗುರುತಿಸಲು ಸೂಚನೆ

02:15 AM Jul 14, 2017 | Karthik A |

ಮೂಲ್ಕಿ: ಬೆಳೆಯುತ್ತಿರುವ ಮೂಲ್ಕಿಗೆ ಸುಸಜ್ಜಿತವಾದ ಮೀನು ಮಾರುಕಟ್ಟೆಯ ನಿರ್ಮಾಣ ಅತ್ಯಗತ್ಯವಾಗಿದೆ. ತತ್‌ಕ್ಷಣದಿಂದ ನಗರ ಪಂಚಾಯತ್‌ ಜಾಗವನ್ನು ಗುರುತಿಸಿ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ಅಭಯಚಂದ್ರ ಜೈನ್‌ ಸೂಚಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸುವ ಯೋಜನೆಯಡಿ ಮಂಜೂರಾದ ರಾಜ್ಯ ಸರಕಾರದ ವಿಶೇಷ ಅನುದಾನ 2 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಕಾರ್ನಾಡಿನಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

Advertisement

ಮೂಲ್ಕಿಯ ಕಾರ್ನಾಡು, ಸದಾಶಿವ ನಗರ, ಬಿಜಾಪುರ ಕಾಲೋನಿ, ಚಿತ್ರಾಪು, ಸರಕಾರಿ ಆಸ್ಪತ್ರೆಯ ಹಿಂಬದಿ ಮತ್ತು ಕೊಯ್ನಾರು ಹಾಗೂ ಬಿಜಾಪುರ ಕಾಲೋನಿ, ಕುದ್ಕ ಪಳ್ಳ ಮೊದ ಲಾದೆಡೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವಾಸಿಗಳ ಪ್ರದೇಶಗಳಿಗೆ ರಸ್ತೆ, ದಾರಿ ದೀಪ ಹಾಗೂ ಹೂದೋಟ ಮತ್ತು ವಾಚನಾಲಯ ಯೋಜನೆಗಳ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು. ಮಂಗಳೂರು ಎಪಿಎಂಸಿಯ ಮೂಲಕ ಮಾರ್ಕೆಟ್‌ ಯಾರ್ಡ್‌ ನಿರ್ಮಾಣವಾಗುವಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಯೋಜನೆಯ ರೂಪು ರೇಷೆಗಳಿಗೆ ಅಧಿಕಾರಿಗಳು ಸೂಕ್ತ ನಿವೇಶನವನ್ನು ಗುರುತಿಸಬೇಕು. ಮೂಲ್ಕಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಶೀಘ್ರವಾಗಿ ಜಾಗ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣ ಗೊಳಿಸುವಂತೆ ಶಾಸಕರು ತಿಳಿಸಿದರು. 

14 ಕೋ.ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ
ನಗರದ ಜನರಿಗೆ ಮೂಲ ಸೌಕರ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರಕಾರ ಹಮ್ಮಿಕೊಂಡಿರುವ ಹೆಚ್ಚಿನ ಕಾರ್ಯಕ್ರಮಗಳನ್ನು ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಗೆ ತರಲಾಗುತ್ತಿದೆ. ಇದರಲ್ಲಿ ಕುಡಿಯುವ ನೀರಿನ 14 ಕೋಟಿ ರೂ. ವೆಚ್ಚದ ಯೋಜನೆಗೆ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದ್ದು, ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು. ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ ಅಧ್ಯಕ್ಷತೆ ವಹಿಸಿದ್ದರು.

54 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಬಿಜಾಪುರ ಕಾಲೋನಿಯಲ್ಲಿ ಮತ್ತು ಮಾತಾ ಅಮೃತಾನಂದಮಯಿ ನಗರದಲ್ಲಿ ಶಾಸಕ ಅಭಯಚಂದ್ರ ಜೈನ್‌ ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇರಿಸಿದರು. ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌, ಸದಸ್ಯರಾದ ಪುರುಷೋತ್ತಮ ರಾವ್‌, ಬಿ.ಎಂ.ಆಸೀಫ್, ವಿಮಲಾ ಪೂಜಾರಿ, ಕಲಾವತಿ, ವಸಂತಿ ಭಂಡಾರಿ, ಮೀನಾಕ್ಷಿ ಬಂಗೇರ, ಬಶೀರ್‌ ಕುಳಾಯಿ, ಅಶೋಕ್‌, ಸಂದೀಪ್‌ ಚಿತ್ರಾಪು, ಯೋಗೀಶ್‌ ಚಿತ್ರಾಪು, ಮೂಡಾ ಸದಸ್ಯ ಎಚ್‌. ವಸಂತ್‌ ಬೆರ್ನಾಡ್‌, ಎಪಿಎಂಸಿ ಸದಸ್ಯ ಜೋಯಲ್‌ ಡಿ’ಸೋಜಾ, ನ.ಪಂ. ಮಾಜಿ ಸದಸ್ಯ ಮಹಾಬಲ ಸನಿಲ್‌, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಚಂದ್ರಶೇಖರ್‌, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಕೋಟ್ಯಾನ್‌ ಮಟ್ಟು, ಯುವ ಕಾಂಗ್ರೆಸ್‌ ಅಧ್ಯಕ್ಷ ಹಕೀಂ ಮೂಲ್ಕಿ, ಎಂಜಿನಿಯರ್‌ ಅಶ್ವಿ‌ನಿ, ಆರೋಗ್ಯಾಧಿಕಾರಿ ಲಿಲ್ಲಿ ನಾಯರ್‌, ಕಂದಾಯ ಅಧಿಕಾರಿ ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next