Advertisement

ಕಲ್ಚೆರ್ಪೆ: ದುರ್ನಾತ ಬೀರುತ್ತಿದೆ ಡಂಪಿಂಗ್‌ ಯಾರ್ಡ್‌

10:34 PM Aug 12, 2019 | mahesh |

ಸೊಳ್ಳೆ ಕೊಂಪೆಯಾಗಿ ಪರಿವರ್ತನೆಯಾಗಿದೆ ತ್ಯಾಜ್ಯ ರಾಶಿ

Advertisement

ಅರಂತೋಡು: ಆಲೆಟ್ಟಿ ಗ್ರಾಮದ ಪೆರಾಜೆ ಸಮೀಪದ ಸುಳ್ಯ ನಗರ ಪಂಚಾಯತ್‌ನ ಡಂಪಿಂಗ್‌ ಯಾರ್ಡ್‌ ನಾರುತ್ತಿದ್ದು, ಸೊಳ್ಳೆ ಕೊಂಪೆಯಾಗಿ ಪರಿವರ್ತನೆಯಾಗಿದೆ. ಸುರಿದ ಧಾರಾಕಾರ ಮಳೆಗೆ ಡಂಪಿಂಗ್‌ ಯಾರ್ಡ್‌ನ ಆವರಣ ಗೋಡೆ ಕುಸಿದು ರಸ್ತೆಗೆ ಉರುಳಿ ಬಿದ್ದಿದೆ. ತ್ಯಾಜ್ಯಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೊಳಚೆ ನೀರು ಅಲ್ಲಲ್ಲಿ ಹರಿಯುತ್ತಿದೆ. ಇದರಿಂದ ಇಲ್ಲಿಯ ನಿವಾಸಿಗಳಿಗೆ ರೋಗ ಹರಡುವ ಆತಂಕ ಎದುರಾಗಿದೆ.

ಹತ್ತು ವರ್ಷಗಳಿಂದ ಕಲ್ಚೆರ್ಪೆಯಲ್ಲಿ ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯ ತ್ಯಾಜ್ಯವನ್ನು ಅಲ್ಲಿ ರಾಶಿ ಹಾಕಲಾಗುತ್ತಿತ್ತು. ಸ್ಥಳೀಯರು ಪ್ರತಿಭಟನೆ ನಡೆಸಿ ನಾವು ಯಾವುದೇ ಕಾರಣಕ್ಕೂ ಇಲ್ಲಿ ಸುಳ್ಯ ನ.ಪಂ. ತ್ಯಾಜ್ಯವನ್ನು ತಂದು ರಾಶಿ ಹಾಕಲು ಬಿಡುವುದಿಲ್ಲ ಎಂದು ಹೇಳಿದ್ದರು. ಆಗ ಇಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇ ಮಾಡಿ ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದೆಂದು ನ.ಪಂ. ಭರವಸೆ ನೀಡಿತ್ತು. ಅಧಿಕಾರಿಗಳು ನೀಡಿದ್ದ ಭರವಸೆ ಈಡೇರಿಲ್ಲ. ರಾಶಿ ರಾಶಿ ತ್ಯಾಜ್ಯಗಳು ಕಲ್ಚೆರ್ಪೆಗೆ ಬಂದು ಬೀಳತೊಡಗಿದವು, ಗಬ್ಬೆದ್ದು ನಾರಲು ಶುರುವಾದವು. ವೈಜ್ಞಾನಿಕ ಕಸ ವಿಲೇವಾರಿ ನಡೆದಿಲ್ಲ. ತ್ಯಾಜ್ಯ ಘಟಕ ಸೊಳ್ಳೆ ಕೊಂಪೆಯಾಯಿತು. ಈ ಪರಿಸರದ ಗಿಡ – ಮರಗಳು ಸತ್ತು ಹೋಗಿವೆ. ಸ್ಥಳೀಯರಿಗೆ ತ್ಯಾಜ್ಯದ ದುರ್ವಾಸನೆಯಿಂದ ಶುದ್ಧವಾದ ಗಾಳಿಯೂ ಇಲ್ಲದಾಗಿದೆ.

ಬೆಂಕಿ ಹತ್ತಿಕೊಂಡಿತ್ತು
ಆರು ತಿಂಗಳ ಹಿಂದೆ ಈ ಡಂಪಿಂಗ್‌ ಯಾರ್ಡ್‌ಗೆ ಬೆಂಕಿ ಹತ್ತಿಕೊಂಡು ಉರಿದಾಗ ನಗರ ಪಂಚಾಯತ್‌, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿಕೊಂಡು ನಂದಿಸಿದ್ದರು. ಅನಂತರ ಇಲ್ಲಿಗೆ ನ.ಪಂ. ತ್ಯಾಜ್ಯ ತಂದು ಹಾಕುವುದನ್ನು ನಿಲ್ಲಿಸಿ ಇದೀಗ ನ.ಪಂ. ಎದುರಿನಲ್ಲಿ ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸಲಾಗುತ್ತಿದೆ. ಒಣ ಕಸವನ್ನು ಇಲ್ಲಿ ಸಂಗ್ರಹ ಮಾಡಿ ಇಡಲಾಗುತ್ತಿದೆ. ಹಸಿ ಕಸವನ್ನು ಸುಳ್ಯ ನಿವಾಸಿಯೊಬ್ಬರು ಕೊಂಡು ಹೋಗಿ ಗೊಬ್ಬರ ತಯಾರು ಮಾಡುತ್ತಿದ್ದಾರೆ.

ರೋಗ ಹರಡಲು ಕಾರಣ
ಕಲ್ಚೆರ್ಪೆ ಡಂಪಿಂಗ್‌ ಯಾರ್ಡ್‌ ಆವರಣಗೋಡೆ ಗೋಡೆ ಕುಸಿತಗೊಂಡು ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಅಲ್ಲಿಲ್ಲಿ ಕೊಳಚೆ ನೀರು ಸಂಗ್ರಹ ಆಗುತ್ತಿದೆ. ಇದು ರೋಗ ಹರಡಲು ಕಾರಣವಾಗಬಹುದು.
– ಅಶೋಕ್‌ ಪೀಚೆ,  ಸ್ಥಳೀಯರು

Advertisement

ವ್ಯವಸ್ಥೆ ಮಾಡಿದ್ದೇವೆ
ಆರು ತಿಂಗಳಿಂದ ನಾವು ಕಲ್ಚೆರ್ಪೆಯಲ್ಲಿ ತ್ಯಾಜ್ಯ ಹಾಕುವುದನ್ನು ನಿಲ್ಲಿಸಿದ್ದೇವೆ. ಕಲ್ಚೆರ್ಪೆ ಡಂಪಿಂಗ್‌ ಯಾರ್ಡ್‌ಅನ್ನು ನಾವೇ ನಿರ್ವಹಣೆ ಮಾಡುತ್ತಿದ್ದೇವೆ. ಮಳೆಗೆ ಕಲ್ಚೆರ್ಪೆ ಡಂಪಿಂಗ್‌ ಯಾರ್ಡ್‌ನ ಒಂದು ಭಾಗದ ಆವರಣ ಗೋಡೆ ಕುಸಿತಗೊಂಡಿದ್ದು, ಅದನ್ನು ತೆಗೆದು ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.
– ರವಿಕೃಷ್ಣ , ಆರೋಗ್ಯಾಧಿಕಾರಿ, ನಗರ ಪಂಚಾಯತ್‌, ಸುಳ್ಯ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next