ಮಳವಳ್ಳಿ: ಲೋಕಸಭೆ ಚುನಾವಣೆ ಮುಗಿದ ಬಳಿಕ ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ದೊಡ್ಡ ಚೆನ್ನಿಪುರ, ಹುಲ್ಲೇಗಾಲ, ಹುಲ್ಲಹಳ್ಳಿ, ದಡಮಹಳ್ಳಿ, ಬಾಣಸಮುದ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮಾಡಿ ಮಾತನಾಡಿ, ರಾಜ್ಯಾದ್ಯಂತ ಎಲ್ಲಾ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಜೊತೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಸ್ತ್ರೀಶಕ್ತಿ ಮಹಿಳೆಯರ ಮಗನಾಗಿ ನಿಂತು ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಇದಕ್ಕೆ ಮತದಾರರೆಲ್ಲರ ಆಶೀರ್ವಾದ ಬಯಸುತ್ತೇನೆ ಎಂದು ಹೇಳಿದರು.
ನೀರಿನ ಸಮಸ್ಯೆಗೆ ಪರಿಹಾರ: ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆಯೂ ಗಂಭೀರವಾಗಿ ಗಮನಹರಿಸಿದ್ದೇನೆ. ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ನೀಡಿದ್ದಾರೆ. ಕೆರೆಗಳನ್ನು ತುಂಬಿಸಲು ಹಾಗೂ ನೀರಾವರಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಚುನಾವಣೆ ಬಳಿಕ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರಕಿಸುವ ಭರವಸೆ ನೀಡಿದರು. ನಮ್ಮ ಪಕ್ಷ ರೈತರ ಸಾಲ ಮನ್ನಾ ಮಾಡಲು ಶ್ರಮಿಸಿದೆ. ನುಡಿದಂತೆ ನಡೆದಿದೆ. ಹಿಂದಿನ ಯಾವ ಮುಖ್ಯಮಂತ್ರಿಯೂ ಜಿಲ್ಲೆಯ ಅಭಿವೃದ್ದಿ ಕಡೆ ಇಷ್ಟು ಗಮನ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಶ್ರಮಿಸಲಾಗುವುದು. ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿದರೆ, ನನ್ನ ಕೊನೆಯ ಉಸಿರು ಇರುವವರೆಗೂ ಕ್ಷೇತ್ರದ ಜನರ ನಿಮ್ಮ ಸೇವೆ ಮಾಡುವೆ ಎಂದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ದೇವೇಗೌಡರ ಹೋರಾಟದ ಫಲವಾಗಿ ಈ ಭಾಗ ಹಸಿರಿನಿಂದ ಕಂಗೊಳಿಸುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲೂಕಿನ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಅನುದಾನ ನೀಡಿ¨ªಾರೆ. ಅಭಿವೃದ್ಧಿ ದೃಷ್ಟಿಯಿಂದ ನಿಖೀಲ್ ಗೆಲ್ಲಬೇಕಿದೆ ಎಂದು ಹೇಳಿದರು.
ನಟರನ್ನು ನಂಬಬೇಡಿ: ಸಿನಿಮಾ ನಟರನ್ನು ದಯಮಾಡಿ ನಂಬಬೇಡಿ. ಚಿತ್ರನಟರ ಮಾತಿಗೆ ಬೆರಗಾಗದೆ, ರೈತರ ಮಗ ನಿಖೀಲ್ ಗೆ ಮತ ನೀಡಿ ಆಶೀರ್ವದಿಸಿ. ಚುನಾವಣೆ ಮುಗಿದ ಇಪ್ಪತ್ತನಾಲ್ಕು ಗಂಟೆಯಲ್ಲಿ ಸರ್ಕಾರ ಉರುಳಿಸುವೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿಗೆ ಮತ ನೀಡುವಿರಾ ಎಂದು ಪ್ರಶ್ನಿಸಿದ ಅವರು, ಪಕ್ಷ ಉಳಿಸುವ ಹೊಣೆ ನಿಮ್ಮದು, ತಂದೆ ಮುಖ್ಯಮಂತ್ರಿ ಆಗಿದ್ದಾರೆ. ಇದರಿಂದಾಗಿ ನಿಖೀಲ್ ಸಂಸದರಾದರೆ ಹೆಚ್ಚು ಅನುದಾನ ತರಲು ಸಹಕಾರಿಯಾಗಲಿದೆ ಎಂದು ಹೇಳಿದರು. ಪ್ರಚಾರದ ವೇಳೆ ಶಾಸಕರಾದ ಡಾ.ಕೆ.ಅನ್ನದಾನಿ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ರವಿ ಕಂಸಾಗರ, ಜೆಡಿಎಸ್ ಮುಖಂಡರಾದ ಡಾಬಾ ಸೋಮಣ್ಣ ಇತರರಿದ್ದರು.
ನನ್ನ ಮನವರಿಕೆ ಬಳಿಕ ಅಭಿವೃದ್ಧಿ ಅರ್ಥ ಗೊತ್ತಾಗಿದೆ: ನಿಖೀಲ್
ಮಂಡ್ಯ: ಅಭಿವೃದ್ಧಿ ಕುರಿತಂತೆ ನಾನು ಮನವರಿಕೆ ಮಾಡಿಕೊಟ್ಟ ಬಳಿಕ ಪಕ್ಷೇತರ ಅಭ್ಯರ್ಥಿಗೆ ಅಭಿವೃದ್ಧಿಯ ಅರ್ಥ ಗೊತ್ತಾಗಿದೆ ಎಂದು ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ಗೆ ಟಾಂಗ್ ನೀಡಿದರು.
ಟೀಕೆ, ಆರೋಪಗಳನ್ನೇ ಸುಮಲತಾ ಜೆಡಿಎಸ್ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದರು. ಪ್ರಚಾರದ ಸಮಯದಲ್ಲಿ ಒಮ್ಮೆಯೂ ಅಭಿವೃದ್ಧಿ ಬಗ್ಗೆ ಮಾತನಾಡಿರಲಿಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಅಧಿಕಾರ ಬೇಕಷ್ಟೇ. ಈ ಮಾತನ್ನು ನಾನು ನಿನ್ನೆ ಹೇಳಿದ ಬಳಿಕ ಈಗ ಅಭಿವೃದ್ಧಿ ಏನು ಎನ್ನುವುದರ ಅರ್ಥವಾಗಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಮನವರಿಕೆ ಮಾಡಿಕೊಟ್ಟ ನಂತರ ಅಭಿವೃದ್ಧಿ ಬಗ್ಗೆ ಅವರಿಗೆ ಅರ್ಥವಾಗಿರುವುದಕ್ಕೆ ಸಂತೋಷವಾಗಿದೆ ಎಂದರು. ಜಿಲ್ಲೆಯಲ್ಲಿರುವ ಏಳು ಶಾಸಕರು ಮಂಡ್ಯ ಅಭಿವೃದ್ಧಿಗೆ ಏನು ಮಾಡಿದ್ದಾರೆ ಅನ್ನೋದು ನಮಗೆ ಗೊತ್ತಿದೆ.
ಬೇರೆಯವರು ಅದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದ ನಿಖೀಲ್, ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬಿಜೆಪಿ ಬೆಂಬಲ ನೀಡಿರುವುದಕ್ಕೆ, ಅಯ್ಯೋ ಬಿಡಿ, ಬಿಜೆಪಿಗೆ ಮಂಡ್ಯದಲ್ಲಿ ನೆಲೆನೂ ಇಲ್ಲ, ಕಾರ್ಯಕರ್ತರೂ ಇಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಯೂ ಇಲ್ಲ ಎಂದು ಹೇಳಿದರು