Advertisement

ಸ್ಟೀವನ್‌ ಸ್ಮಿತ್‌, ವಾರ್ನರ್‌ಗೆ 1 ವರ್ಷ ನಿಷೇಧ ?

06:00 AM Mar 28, 2018 | Team Udayavani |

ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್‌ಗೆ ಬರ ಸಿಡಿಲಿನಂತೆ ಅಪ್ಪಳಿಸಿರುವ ಚೆಂಡು ವಿರೂಪ ಪ್ರಕರಣದಲ್ಲಿ ತಂಡದ ನಾಯಕ ಸ್ಟೀವನ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ತಲೆದಂಡವಾಗುವ ಸಾಧ್ಯತೆಯಿದೆ. ಈ ಇಬ್ಬರನ್ನು 1 ವರ್ಷದ ಮಟ್ಟಿಗೆ ನಿಷೇಧಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಅಷ್ಟು ಮಾತ್ರವಲ್ಲ ತಂಡದ ಕೋಚ್‌ ಡ್ಯಾರೆನ್‌ ಲೆಹ್ಮನ್‌ ಅವರು ತಮ್ಮ ಸ್ಥಾನಕ್ಕೆ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಲಿದ್ದಾರೆಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

Advertisement

ತಂಡದ ನಾಯಕತ್ವ ವಹಿಸಿದ್ದ ಗುಂಪು ಸೇರಿಯೇ ಚೆಂಡು ವಿರೂಪ ಮಾಡಲು ತೀರ್ಮಾನಿಸಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಸ್ಮಿತ್‌ ಒಪ್ಪಿಕೊಂಡಿರುವುದು ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜತೆಗೆ ಇಡೀ ಆಸ್ಟ್ರೇಲಿಯದಲ್ಲಿ ಈ ಬಗ್ಗೆ ಆಕ್ರೋಶ ಹುಟ್ಟಿಕೊಂಡಿದೆ. ಆದ್ದರಿಂದ ಕಠಿನ ಕ್ರಮ ಕೈಗೊಳ್ಳುವ ಅನಿವಾರ್ಯತೆಯಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯವಿದೆ. ಅದರ ಮುಖ್ಯಸ್ಥ ಜೇಮ್ಸ್‌ ಸದರ್‌ಲ್ಯಾಂಡ್‌ ಈ ಬಗ್ಗೆ ಹೇಳಿಕೆ ನೀಡಿ, ಬುಧವಾರ ನಿರ್ಧಾರ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸ್ಮಿತ್‌ ಒಂದು ಟೆಸ್ಟ್‌ಗೆ ನಿಷೇಧಗೊಂಡಿದ್ದಾರೆ. ಶುಕ್ರವಾರದಿಂದ ಆರಂಭವಾಗಲಿರುವ ದ.ಆಫ್ರಿಕಾ ಮತ್ತು ಆಸ್ಟ್ರೇಲಿಯ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಅವರು ಆಡುವುದಿಲ್ಲ. ತರಬೇತುದಾರ ಲೆಹ್ಮನ್‌ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲದಿರುವುದರಿಂದ ತಂಡದ ತಾಪತ್ರಯಗಳು ಹೆಚ್ಚಾಗಿವೆ.

ಪಾಂಟಿಂಗ್‌, ಲ್ಯಾಂಗರ್‌ ಪೈಪೋಟಿ
2013ರಿಂದ ಲೆಹ್ಮನ್‌ ಆಸ್ಟ್ರೇಲಿಯ ತಂಡದ ಕೋಚ್‌ ಆಗಿದ್ದಾರೆ. ಅವರಿಂದ ತೆರವಾಗುವ ಸ್ಥಾನಕ್ಕೇರಲು ಆಸ್ಟ್ರೇಲಿಯ ಟೆಸ್ಟ್‌ ತಂಡದ ಮಾಜಿ ಆರಂಭಕಾರ ಜಸ್ಟಿನ್‌ ಲ್ಯಾಂಗರ್‌ ಮತ್ತು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾಗಿರುವ ರಿಕಿ ಪಾಂಟಿಂಗ್‌ ಪೈಪೋಟಿ ನಡೆಸಿದ್ದಾರೆ. ಪಾಂಟಿಂಗ್‌ ಟಿ20 ಪಂದ್ಯಗಳ ಸಂದರ್ಭದಲ್ಲಿ ಆಸೀಸ್‌ ತಂಡಕ್ಕೆ ಆಗಾಗ ತರಬೇತಿ ನೀಡಿದ್ದಾರೆ. ಈಗ ಪೂರ್ಣ ಪ್ರಮಾಣದ ಜವಾಬ್ದಾರಿ ನಿಭಾಯಿಸಲು ಸಜ್ಜಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next