ಕಲಬುರಗಿ: ಆಳಂದ ತಾಲೂಕಿನನವ ಕಲ್ಯಾಣ ಮಠ ಸುಕ್ಷೇತ್ರ ಜಿಡಗಾ ಮಠ ಪ್ರವಾಸಿ ತಾಣವಾಗಿಸಲು ಸೂಕ್ತ ಅಭಿವೃದ್ಧಿ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಭರವಸೆ ನೀಡಿದರು. ಮಠಕ್ಕೆ ಭೇಟಿ ಭೇಟಿ ನೀಡಿ ಶ್ರೀ ಮಠದ ಪೀಠಾಧ್ಯಕ್ಷರಾದ ಷಡಕ್ಷರಿ ಮುರುಘರಾಜೇಂದ್ರ ಶಿವಯೋಗಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಿಂ. ಸಿದ್ಧರಾಮ ಶಿವಯೋಗಿಗಳು ತಪಸ್ಸು ಮಾಡಿದ ಈ ಭೂಮಿ ನಾಡಿಗೆ ಇನ್ನಷ್ಟು ಚಿರಪರಿಚತವಾಗಬೇಕಿದೆ ಎಂದರು.
ದಾಸೋಹ, ಧರ್ಮ ರಕ್ಷಣೆ ಕಾಯಕ ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಜಿಡಗಾ ಮಠವು, ಅನ್ನ, ಶಿಕ್ಷಣ ದಾಸೋಹದ ಮೂಲಕ ಸಮಾಜವನ್ನು
ರಕ್ಷಿಸಿ, ಸುಶಿಕ್ಷಿತವನ್ನಾಗಿಸಿದ್ದು, ನಾಡನ್ನು ಬೆಳಗಿಸಿದೆ ಎಂದರು.ಪ್ರಸ್ತುತ ಮಠದ ಪೀಠಾಧ್ಯಕ್ಷರು ಅನೇಕ ಜನಪರ, ಸಮಾಜಪರ ಕೆಲಸಗಳನ್ನು ಮಾಡುತ್ತಾ ಶ್ರೀಮಠದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಬಲವಾಗಿ ನಂಬಿರುವ ಪೂಜ್ಯ ಮುರುಘರಾಜೇಂದ್ರ ಶ್ರೀಗಳನ್ನು ಆಧುನಿಕ ಸ್ವಾಮಿ ವಿವೇಕಾನಂದರು ಎಂದರೆ ತಪ್ಪಾಗಲಾರದು. ಇಂಥಹ ತಪೋಭೂಮಿಗೆ ಬಂದು ನಾನು ಧನ್ಯನಾದೆ. ಮುಂಬರುವ ದಿನಗಳಲ್ಲಿ ಶ್ರೀ ಮಠದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದರ ಮೂಲಕ ಕೃಪೆಗೆ ಪಾತ್ರನಾಗುವೆ. ಶ್ರೀ ಮಠವನ್ನು ಉತ್ತರ ಕರ್ನಾಟಕ ಭಾಗದ ಪ್ರಮುಖ ಪ್ರವಾಸಿ ತಾಣವನ್ನಾಗಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಚಿಂಚೋಳಿ ಶಾಸಕ ಅವಿನಾಶ ಜಾಧವ, ರಾಜ್ಯ ಬಿಜೆಪಿ ಯುವ ಮುಖಂಡ ಭೀಮಾಶಂಕರ ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯ ಹರ್ಷಾನಂದ ಗುತ್ತೇದಾರ, ಆಳಂದ ಮಂಡಲ ಅಧ್ಯಕ್ಷ ಆನಂದ ಪಾಟೀಲ, ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ ಇದ್ದರು