Advertisement

“ಮಂಗಳ, ಚಂದ್ರನಲ್ಲಿ ಬೇಗ ಮಾನವ ವಸಾಹತು ಸ್ಥಾಪಿಸಿ’

03:45 AM Jun 23, 2017 | Team Udayavani |

ವಾಷಿಂಗ್ಟನ್‌: “ಭೂಮಿಯಲ್ಲಿ ಜನಸಂಖ್ಯೆ ದಿನೇ ದಿನೆ ಏರುತ್ತಿದೆ. ಮಾನವನಿಗೆ ಭೂಮಿ ಗಾತ್ರ ಸಾಲದಾಗುತ್ತಿದೆ. ಇದಕ್ಕೆ ಕೂಡಲೇ ನಾವು ಮಂಗಳ ಮತ್ತು ಚಂದ್ರನಲ್ಲಿ ವಸಾಹತು ಸ್ಥಾಪನೆಗೆ, ಅಲ್ಲಿಗೆ ತೆರಳುವ ಕುರಿತ ಆಲೋಚನೆ, ಯತ್ನಗಳನ್ನು ಮಾಡಬೇಕು.’ ಹೀಗಂತ ಹೇಳಿದ್ದು, ಪ್ರಖ್ಯಾತ ಖಗೋಳ ಭೌತ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌. 

Advertisement

ನಾರ್ವೆಯ ಟ್ರೋಂಡೈಮ್‌ನಲ್ಲಿ ನಡೆಯುತ್ತಿರುವ ಸ್ಟಾರ್‌ಮಸ್‌ ಕಾರ್ಯಕ್ರಮವನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ನಮ್ಮಲ್ಲಿ ಸ್ಥಳದ ಅಭಾವ ಉಂಟಾಗುತ್ತಿದೆ. ಬೇರೆ ಗ್ರಹಗಳನ್ನು ಹುಡುಕುವುದು ಅನಿವಾರ್ಯವಾಗಿದೆ. ಪ್ರಪಂಚದ ಎಲ್ಲಾ ದೇಶಗಳು ಚಂದ್ರನಲ್ಲಿ 30 ವರ್ಷದೊಳಗೆ ಕಾಲನಿ ಸ್ಥಾಪನೆಗೆ ಒಟ್ಟಾಗಬೇಕಿದೆ. ಮುಂದಿನ 200ರಿಂದ 500 ವರ್ಷದೊಳಗೆ ಸಾಮೂಹಿಕ ವಲಸೆಗೆ ಸಿದ್ಧವಾಗಬೇಕಿದೆ ಎಂದಿದ್ದಾರೆ. 

ಭೂಮಿ ಸಾಲದಾಗುತ್ತಿದೆ. ತಾಪಮಾನ ಏರಿಕೆ, ನೀರ್ಗಲ್ಲುಗಳ ಕರಗುವಿಕೆ ಕಂಡು ಬರುತ್ತಿದೆ. ಇದರಿಂದ ಪಾರಾಗಲು ಭವಿಷ್ಯದಲ್ಲಿ ದೀರ್ಘಾವಧಿಯ ಕಾರ್ಯತಂತ್ರಗಳನ್ನು ಅನುಸರಿಸಬೇಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಹವಾಮಾನ ಬದಲಾವಣೆ ಕುರಿತಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಧೋರಣೆ ಬಗ್ಗೆಯೂ ಪ್ರಸ್ತಾವಿಸಿದ ಅವರು, ಹವಾಮಾನ ಬದಲಾವಣೆ ತೀವ್ರ ಕಳವಳಕಾರಿ ವಿಚಾರವಾಗಿದ್ದು, ಈ ಬಗ್ಗೆ ಟ್ರಂಪ್‌ ಅವರ ನಿರ್ಧಾರ ತಪ್ಪಾಗಿದೆ ಎಂದು ಹೇಳಿದ್ದಾರೆ. 

ಅನ್ಯಗ್ರಹಕ್ಕೆ ಹೋಗೋದು ಹೇಗೆ? 
ಸ್ಟೀಫ‌ನ್‌ ಹಾಕಿಂಗ್‌ ಅವರು ಹೇಳುವಂತೆ ಭೂಮಿಯಿಂದ 4.37 ಜ್ಯೋತಿರ್ವರ್ಷದಷ್ಟು ದೂರದ ಪ್ರಾಕ್ಸಿಮಾ ಬಿ ಮತ್ತು ಆಲ್ಫಾ ಸೆಂಚುರೈ ಕಡೆಗೆ ಇರಬೇಕು. ಅಲ್ಲಿ ವಸಾಹತು ಸ್ಥಾಪನೆಯ ಗುರಿ ಇರಬೇಕು. ಥಿಯರಿ ಪ್ರಕಾರ ನಾವು ಬೆಳಕಿನ ವೇಗದಲ್ಲಿ ಸಂಚರಿಸುವಷ್ಟರ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರಬೇಕಾಗುತ್ತದೆ. 

ನ್ಯಾನೋ ಏರ್‌ಕ್ರಾಫ್ಟ್ನಂತಹ ಬಾಹ್ಯಾಕಾಶ ನೌಕೆ (ಸೈಲ್‌ಬೋಟ್‌) ಹೊಂದಿದ್ದರೆ, ಮಂಗಳ ಗ್ರಹಕ್ಕೆ ಒಂದು ಗಂಟೆಯಲ್ಲಿ, ಪೂÉಟೋ ಗ್ರಹಕ್ಕೆ ಕೆಲವು ದಿನಗಳಲ್ಲಿ, ಆಲ್ಫಾ ಸೆಂಚುರೈ ಗ್ರಹಕ್ಕೆ 20 ವರ್ಷದಲ್ಲಿ ಕ್ರಮಿಸಬಹುದು. ಮಾನವ ಜೀವಿ ಇನ್ನೂ ಕೆಲವು ದಶಲಕ್ಷ ವರ್ಷಗಳ ಕಾಲ ಜೀವಿಸಿದಲ್ಲಿ ಯಾರೂ ಹೋಗದ ಜಾಗಕ್ಕೆ ಹೋಗುವಂತಹ ಭವಿಷ್ಯದ ದಿನಗಳು ಬರಲಿದೆ ಎಂಬಿತ್ಯಾದಿ ಚಿಂತನೆಗಳನ್ನು ಹರಿಯಬಿಟ್ಟಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next