ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಮಲ ತಂದೆ ಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹತ್ಯೆಗೈದಿರುವ ಘಟನೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಘಟನೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ.
ಉತ್ತರಾಖಂಡದ ಮೂಲದ ಸುಮಿತ್ ಮೋಹನ್(35) ಹತ್ಯೆಗೈದವ. ಆರೋಪಿ ತನ್ನ 16 ಮತ್ತು 15 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆಗೈದು ಪರಾರಿಯಾಗಿದ್ದು, ಆತನ ಪತ್ತೆಗಾಗಿ 3 ವಿಶೇಷ ತಂಡ ರಚಿಸಲಾಗಿದೆ. ಶನಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ದುರ್ಘಟನೆ ನಡೆದಿದೆ.
ಆರೋಪಿ ಸುಮಿತ್ ಮೋಹನ್, ನಗರದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಈತನ ಪತ್ನಿ ಅನಿತಾ ಉತ್ತರ ಪ್ರದೇಶದ ಮೂಲದವರಾಗಿದ್ದು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಕೆ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು, ಕೆಲ ವರ್ಷಗಳ ಹಿಂದೆ ಆರೋಪಿಯನ್ನು 2ನೇ ಮದುವೆಯಾಗಿದ್ದರು. ಈತನನ್ನು ಮದುವೆಯಾಗುವುದಕ್ಕೂ ಮುನ್ನ ಅನಿತಾಗೆ ಇಬ್ಬರು ಹೆಣ್ಣುಮಕ್ಕಳಿದ್ದರು.
ದಂಪತಿ ಕಾವೇರಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಮೃತ ಮಕ್ಕಳು ಸಮೀಪದ ಶಾಲೆಯಲ್ಲಿ ಓದುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಆರೋಪಿ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದ. ಅವರಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಕೊಡಿಸುತ್ತಿದ್ದ. ಆದರೆ, ಎರಡು ತಿಂಗಳಿಂದ ಈತನನ್ನು ಮಾತನಾಡಿಸುತ್ತಿರಲಿಲ್ಲ. ಆದರೆ, ಮನೆ ಸಮೀಪದ ಕೆಲವರನ್ನು ಮಾತ್ರ ಮಾತನಾಡಿಸುತ್ತಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆದಿತ್ತು. ಶನಿವಾರ ಮಧ್ಯಾಹ್ನ ಕೂಡ ಆರೋಪಿ ಮಕ್ಕಳ ಜತೆಗೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಮನೆಯಲ್ಲಿದ್ದ ಮಾರಕಾಸ್ತ್ರಗಳಿಂದ ಇಬ್ಬರ ಮಕ್ಕಳ ಕುತ್ತಿಗೆಗೆ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದಾನೆ. ಬಳಿಕ ರಕ್ತದ ಬಟ್ಟೆಯಲ್ಲೇ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಇನ್ನು ಘಟನೆ ವೇಳೆ ತಾಯಿ ಅನಿತಾ ಮನೆಯಲ್ಲಿ ಇರಲಿಲ್ಲ. ಕೆಲಸಕ್ಕೆ ತೆರಳಿದ್ದರು. ಅದೇ ವೇಳೆ ಕೊಲೆ ನಡೆದಿದೆ. ಸಂಜೆ 6 ಗಂಟೆ ವೇಳೆಯಲ್ಲಿ ಆಕೆ ಕೆಲಸದಿಂದ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳನ್ನು ಕಂಡು ಆಕೆಯ ಜೋರಾಗಿ ಅಳುತ್ತಿದ್ದಳು. ಅದನ್ನು ಕೇಳಿದ ಸ್ಥಳೀಯರು ಬಂದು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ತಾಯಿ ಅನಿತಾರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ಪೊಲೀಸರು ಹೇಳಿದರು.
ಯಾವ ಕಾರಣಕ್ಕೆ ಮಕ್ಕಳ ಹತ್ಯೆಯಾಗಿದೆ ಎಂಬುದು ಗೊತ್ತಾಗಿಲ್ಲ. ಪ್ರಾಥಮಿಕ ಮಾಹಿತಿ ಕೌಟುಂಬಿಕ ವಿಚಾರ ಎಂಬುದು ಗೊತ್ತಾಗಿದೆ. ಆರೋಪಿ ಬಂಧಿಸಿದ ಬಳಿಕವೇ ನಿಖರ ಗೊತ್ತಾಗಲಿದೆ. ಮನೆ ಅಕ್ಕಪಕ್ಕದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಲಾಗುತ್ತಿದೆ. –
ವಿ.ಜೆ.ಸಜಿತ್,ಈಶಾನ್ಯ ವಿಭಾಗದ ಡಿಸಿಪಿ.