ಹುಣಸೂರು: ತಾಲೂಕಿನ 10 ಕಡೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು ತೆರೆಯಲು ಉತ್ಪಾದಕರು ಬೇಡಿಕೆ ಸಲ್ಲಿಸಿದ್ದು, ಹಂತ ಹಂತವಾಗಿ ಆರಂಭಿಸಲಾಗುವುದೆಂದು ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ತಿಳಿಸಿದರು.
ನಗರದ ಹಾಲು ಶಿಥಲೀಕರಣ ಕೇಂದ್ರದಲ್ಲಿ ಮೈಮುಲ್‌ನ 2018ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ತಾಲೂಕಿನಲ್ಲಿ 176 ಡೇರಿಗಳಿದ್ದು, ಈ ಪೈಕಿ 70 ಮಹಿಳಾ ಡೇರಿಗಳಿವೆ, 100 ಡೇರಿಗೆ ಸ್ವಂತ ಕಟ್ಟಡವಿಲ್ಲ,
ಇತ್ತೀಚೆಗೆ ಶಾಸಕ, ಸಂಸದ, ಜಿ.ಪಂ.ಸೇರಿದಂತೆ ಯಾವ ತರದ ಅನುದಾವೂ ಕಟ್ಟಡ ನಿರ್ಮಾಣಕ್ಕೆ ಸಿಗುತ್ತಿಲ್ಲ, ಕೆಎಂಎಫ್ ಮಾತ್ರ ನೀಡುತ್ತಿದೆ. ಸರ್ಕಾರಗಳು ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿವೆ ಎಂದರೆ ಸಾಲದು ಮುಂದಾದರೂ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಮೈಮುಲ್ ಮನವಿ ಮಾಡಿಕೊಂಡಿದೆ ಎಂದರು.
ತಾಲೂಕಿಂದ ಗುಣಮಟ್ಟದ ಹಾಲು: ಈ ಹಿಂದೆ ಮೆಮುಲ್ ವತಿಯಿಂದ ಕೇರಳ ಹಾಗೂ ತಮಿಳುನಾಡಿನ ಗಡಿಯಂಚಿನ ಜಿಲ್ಲೆಗಳಿಗೆ ಹಾಲು ಸರಬರಾಜು ಮಾಡಲಾಗುತ್ತಿತ್ತು, ಇದೀಗ ಆ ರಾಜ್ಯಗಳಲ್ಲೇ ಹೆಚ್ಚು ಹಾಲು ಉತ್ಪತ್ತಿಯಾಗುತ್ತಿರುವುದರಿಂದ ಬೇಡಿಕೆ ಕುಸಿದಿದೆ,
ಇದೀಗ ಮೈಮುಲ್‌ಗೆ ನಿತ್ಯ 7 ಲಕ್ಷ ಲೀಟರ್ ಹಾಲುಬರುತ್ತಿತ್ತು, ಇದರಲ್ಲಿ 3 ಲಕ್ಷ ಹಾಲು ಮಾತ್ರ ಮಾರಾಟವಾಗುತ್ತಿದ್ದು, ಇನ್ನು 4 ಲಕ್ಷ ಲೀಟರ್ ಹಾಲನ್ನು ಪೌಡರ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಉತ್ಪಾದಕರಿಗೆ ಲೀಟರ್‌ಗೆ ಮೊದಲು 30 ರೂ. ನೀಡಲಾಗುತ್ತಿದ್ದು, ಇದೀಗ 22 ರೂ.ಜೊತೆಗೆ ಸರ್ಕಾರದ ಐದು ರೂ. ಪ್ರೋತ್ಸಾಹ ಸಿಗುತ್ತಿದೆ, ಇದೀಗ ಸಾಕಷ್ಟು ಪೌಡರ್ ದಾಸ್ತಾನಿದ್ದು, ಪೌಡರ್ ಮಾರಾಟವಾದಲ್ಲಿ ಲಾಭದಲ್ಲಿ ಮುಂದುವರೆಯಲಿದೆ.
ಒಕ್ಕೂಟಕ್ಕೆ ಅತೀಹೆಚ್ಚು ಹಾಗೂ ಗುಣಮಟ್ಟದ ಹಾಲು ಹುಣಸೂರು ತಾಲೂಕಿನಿಂದ ಪೂರೈಕೆಯಾಗುತ್ತಿರುವುದು ಹೆಮ್ಮೆಯ ವಿಚಾರವೆಂದರು. ಉತ್ಪಾದಕರಿಗೆ ಮೈಮುಲ್‌ನಿಂದ ಹಲವಾರು ಯೋಜನೆಗಳಿದ್ದು, ಇದರ ಸೌಲಭ್ಯ,ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ಆಶಿಸಿದರು. ವಿಸ್ತರಣಾಧಿಕಾರಿಗಳಾದ ಮಹದೇವಮ್ಮ, ಗೌತಮ್, ದರ್ಶನ್, ನಂದೀಶ್ ಹಾಗೂ ಬಾಲಚಂದ್ರ ಇದ್ದರು.