Advertisement

ಯೋಜನೆ ಹೆಸರಲ್ಲಿ ಮಾಹಿತಿ ಕದಿವ ಗ್ಯಾಂಗ್‌!

10:45 AM Jan 04, 2019 | |

ಬೆಳಗಾವಿ: ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಆಶಯದ ಬೇಟಿ ಬಚಾವೋ ಬೇಟಿ ಪಡಾವೋ ಮೂಲಕ 2 ಲಕ್ಷ ರೂ. ಕೊಡಿಸುವುದಾಗಿ ಜನರನ್ನು ವಂಚಿಸುತ್ತಿರುವ ಅಂತಾರಾಜ್ಯ ಗ್ಯಾಂಗ್‌ ಬೆಳಗಾವಿ ಮೂಲಕ ಕರ್ನಾಟಕವನ್ನು ಪ್ರವೇಶಿಸಿದ್ದು, ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಕಾರ್ಡ್‌ ಮಾಹಿತಿ ಪಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಹೆಣ್ಣು ಮಕ್ಕಳ ಸಬಲೀಕರಣ ಮಾಡುವುದಾಗಿದೆ. ಶಾಲೆಗೆ ಕಳುಹಿಸುವುದು, ಭ್ರೂಣ ಹತ್ಯೆ ತಡೆಯುವ ಮೂಲಕ ಜಾಗೃತಿ ಮೂಡಿಸುವುದೇ ಇದರ ಉದ್ದೇಶ. ಆದರೆ ಸುಳ್ಳು ಅರ್ಜಿ ತುಂಬಿಸಿಕೊಳ್ಳುತ್ತಿರುವ ಗ್ಯಾಂಗ್‌ ಕರ್ನಾಟಕಕ್ಕೂ ಕಾಲಿಟ್ಟಿದೆ. ಮನೆ ಮನೆಗೆ ತೆರಳಿ ಯೋಜನೆಯಡಿ 2 ಲಕ್ಷ ರೂ. ಸರಕಾರದಿಂದ ಸಹಾಯಧನ ಸಿಗಲಿದೆ ಎಂದು ನಂಬಿಸಿ ಅರ್ಜಿ ತುಂಬಿಸಿಕೊಳ್ಳಲಾಗುತ್ತಿದೆ.

ಪ್ರತಿ ಅರ್ಜಿಗೆ ಜನರಿಂದ 20 ರೂ. ವಸೂಲಿ ಮಾಡುವ ಮೂಲಕ ವಂಚಿಸುವ ಜಾಲ ಬೆಳಗಾವಿ ನಗರ ಹಾಗೂ ಜಿಲ್ಲಾದ್ಯಂತ ಕ್ರೀಯಾಶೀಲವಾಗಿದೆ. ಹರಿಯಾಣಾದಲ್ಲಿ ಈ ರೀತಿ ಕಾನೂನು ಬಾಹಿರವಾಗಿ ಅರ್ಜಿ ತುಂಬಿಸಿಕೊಳ್ಳುತ್ತಿರುವ ಬಗ್ಗೆ ಕೇಂದ್ರ ಸಚಿವಾಲಯದ ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡು ವಂಚಕರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಪ್ರಧಾನಿ ಮೋದಿ ಅವರ ಹೆಸರು ಹೇಳುತ್ತ ಗ್ಯಾಂಗ್‌ ಈಗ ರಾಜ್ಯವನ್ನು ಪ್ರವೇಶಿಸಿದ್ದು, ಜನರ ಕಣ್ಣಿಗೆ ಮಣ್ಣೆರಚುವ ಕೆಲಸದಲ್ಲಿ ತೊಡಗಿದೆ. ಬಹುತೇಕ ಜನ ಈ ಮೋಸದ ಬಲೆಗೆ ಒಳಗಾಗಿದ್ದಾರೆ.

ಮನೆ ಮನೆಗೆ ಬರುತ್ತಿದೆ ಗ್ಯಾಂಗ್‌: 20 ರೂ. ಅರ್ಜಿ ಭರ್ತಿ ಮಾಡಿಕೊಟ್ಟರೆ 2 ಲಕ್ಷ ರೂ. ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಜನರನ್ನು ವಂಚಿಸಲಾಗುತ್ತಿದೆ. ಮೂಲ ಅರ್ಜಿಯನ್ನು ಈ ಗ್ಯಾಂಗ್‌ ಸದಸ್ಯರೇ ತಮ್ಮ ಬಳಿ ಇಟ್ಟುಕೊಂಡು ಕಾರ್ಬನ್‌ ಕಾಪಿ ಅರ್ಜಿದಾರರಿಗೆ ಕೊಡುತ್ತಿದ್ದಾರೆ. ಈ ಕಾಪಿಯನ್ನು ಕೇಂದ್ರ ಸರಕಾರದ ಸಚಿವಾಲಯಕ್ಕೆ ಅಂಚೆ ಮೂಲಕ ಕಳುಹಿಸಬೇಕು ಎಂದು ಹೇಳುತ್ತಿದ್ದಾರೆ. ಈಗಾಗಲೇ ಮನೆ ಮನೆಗೆ ತೆರಳಿ ಜನರಿಂದ ಮಾಹಿತಿ ಕಲೆ ಹಾಕುತ್ತಿರುವ ಕಾರ್ಯ ಜಿಲ್ಲಾದ್ಯಂತ ಭರದಿಂದ ಸಾಗಿದೆ.

ಮಾಹಿತಿ ಪಡೆಯುತ್ತೆ ಹುಷಾರ್‌: ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ 10 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಬೆಳಗಾವಿಗೆ ಕಾಲಿಟ್ಟಿರುವ ಈ ಅಂತಾರಾಜ್ಯ ಗ್ಯಾಂಗ್‌ 0-31 ವಯಸ್ಸಿನವರಿಂದ ಅರ್ಜಿ ತುಂಬಿಸಿಕೊಂಡು ಸಂಪೂರ್ಣ ಹೆಸರು, ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ಪಡೆಯಲಾಗುತ್ತಿದೆ.

Advertisement

ಅಥಣಿ, ಬೆಳಗಾವಿ ನಗರದ ವಡಗಾಂವಿ, ಶಹಾಪುರ, ಜುನೆ ಬೆಳಗಾವಿ ಸೇರಿದಂತೆ ಕೆಲವು ಕಡೆ ಇಂಥ ಮೋಸದ ಜಾಲ ವ್ಯಾಪಿಸಿದೆ. ಕೆಲ ದಿನಗಳ ಹಿಂದೆ ಅಥಣಿಯಲ್ಲಿ ಹೀಗೆ ಮನೆಗೆ ಬಂದಾಗ ಗ್ರಾಮಸ್ಥರು ಹಿಡಿದು ವಿಚಾರಣೆ ನಡೆಸಿದಾಗ ಬಯಲಾಗಿದೆ. ಆಗ ಕೂಡಲೇ ಅಲ್ಲಿಂದ ಈ ಗ್ಯಾಂಗ್‌ ಕಾಲ್ಕಿತ್ತಿದೆ.

ಜನಸಂಖ್ಯೆ ಅನುಪಾತದಲ್ಲಿ 940ಕ್ಕಿಂತ ಕಡಿಮೆ ಹೆಣ್ಣು ಮಕ್ಕಳು ಇರುವ ಜಿಲ್ಲೆಗಳಲ್ಲಿ ಯೋಜನೆ ಕ್ರಿಯಾಶೀಲವಾಗಬೇಕು. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇದೆ. ಅಲ್ಲಿ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಆದರೆ ಬೆಳಗಾವಿಯಲ್ಲಿ ಜನಸಂಖ್ಯೆ ಅನುಪಾತ 960:1000 ಇದೆ. ಹಳ್ಳಿ ಹಳ್ಳಿಗಳಲ್ಲಿ ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸುವುದು, ಭ್ರೂಣ ಹತ್ಯೆ ತಡೆಯುವುದು, ಹೆಣ್ಣಿನ ಮೇಲೆ ದೌರ್ಜನ್ಯ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಅಡಿ ಯಾವುದೇ ಸಹಾಯಧನ ಇಲ್ಲ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇರುವ ಜಿಲ್ಲೆಯಲ್ಲಿ ಮಾತ್ರ ಇದು ಜಾರಿಯಾಗಿದೆ. ಆದರೆ ಇದರ ಹೆಸರಿನಲ್ಲಿ ಅರ್ಜಿ ಭರ್ತಿ ಮಾಡಿಸಿಕೊಂಡು ಜನರನ್ನು ವಂಚಿಸುವ ಮೋಸದ ಜಾಲ ಜಿಲ್ಲಾದ್ಯಂತ ಇದೆ ಎಂಬುದು ಗಮನಕ್ಕೆ ಬಂದಿದೆ. ಇಂಥ ಸುಳ್ಳು ಮಾಹಿತಿಗಳನ್ನು ಜನ ನಂಬಬಾರದು.
• ಮಲ್ಲಿಕಾರ್ಜುನ ಮಾಳಗೇರ,
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಯೋಜನೆಯಡಿ ಜನರನ್ನು ವಂಚಿಸುತ್ತಿರುವವರು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಬೇಕು. ಮುಲಾಜಿಲ್ಲದೇ ಅಂಥ ವಂಚಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜನರು ಮೋಸದ ಜಾಲಕ್ಕೆ ಬೀಳದೇ ಸರಕಾರದ ಯೋಜನೆಗಳ ಮಾಹಿತಿಯನ್ನು ಆಯಾ ಇಲಾಖೆಗೆ ಹೋಗಿ ಪಡೆದುಕೊಳ್ಳಬೇಕು.
ಡಾ| ಡಿ.ಸಿ. ರಾಜಪ್ಪ,
 ಮಹಾನಗರ ಪೊಲೀಸ್‌ ಆಯುಕ್ತರು

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next