Advertisement

“ವರ್ಕ್‌ ಫ್ರಂ ಹೋಂ’ಗೆ ಒಗ್ಗೀತೇ ಬದುಕು?

11:53 PM Jan 05, 2021 | Team Udayavani |

ವರ್ಕ್‌ ಫ್ರಂ ಹೋಂ ವಿದೇಶಗಳಲ್ಲಿ ಹೊಸದೇನಲ್ಲ. ಭಾರತದಲ್ಲಿ ಕಳೆದ ದಶಕದಲ್ಲಿಯೇ ಈ ವ್ಯವಸ್ಥೆಯ ಪರಿಚಯವಾಗಿದ್ದರೂ ಕೇವಲ ಐಟಿ-ಬಿಟಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಕೊರೊನಾದ ಬಳಿಕ ಅನಿವಾರ್ಯವಾಗಿ ಬಹುತೇಕ ಕಾರ್ಪೋರೆಟ್‌ ಕಂಪೆನಿಗಳು ವರ್ಕ್‌ ಫ್ರಂ ಹೋಂಗೆ ಅನಿವಾರ್ಯವಾಗಿ ಮಣೆ ಹಾಕಬೇಕಾಯಿತು. ಸರಕಾರಗಳೂ ಈ ತಂತ್ರಜ್ಞಾನಾಧರಿತ ಹೊಸ ವ್ಯವಸ್ಥೆಗೆ ಪ್ರೋತ್ಸಾಹ ನೀಡಿದವು. ಕೊರೊನೋತ್ತರ ಕಾಲಘಟ್ಟದಲ್ಲಿಯೂ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮುಂದುವರಿದಿದೆ. ಇದರಿಂದ ಕಂಪೆನಿಗಳು ಮತ್ತು ಉದ್ಯೋಗಿಗಳಿಗೂ ಬಹಳಷ್ಟು ಅನುಕೂಲಗಳು, ಉಳಿತಾಯವಾಗಿವೆ. ಇದೇ ವೇಳೆ ಈ ಹೊಸ ವ್ಯವಸ್ಥೆ ಮತ್ತೆಲ್ಲಿ ಕುಟುಂಬ ಕಲಹಕ್ಕೆ ಹಾದಿ ಮಾಡಿಕೊಡಲಿದೆಯೋ ಎಂಬ ಆತಂಕವೂ ಉದ್ಯೋಗಸ್ಥ ಕುಟುಂಬಗಳನ್ನು ಕಾಡತೊಡಗಿದೆ.

Advertisement

ಹಳ್ಳಿಯ ಮಕ್ಕಳು ಕಲಿತು ಉತ್ತಮ ಉದ್ಯೋಗ ಗಳನ್ನು ಅರಸಿ ನಗರಗಳೆಡೆಗೆ ತೆರಳಿದರು. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿ ಹೆತ್ತವರು ಮಾತ್ರ ಉಳಿದರು. ಒಂದು ರೀತಿಯಲ್ಲಿ ಹಳ್ಳಿಗಳು ವೃದ್ಧಾಶ್ರಮ ಗಳಂತಾದವು. ನಗರವಾಸಿಗಳಾದ ಮಕ್ಕಳು ಮಕರ ಸಂಕ್ರಾಂತಿಗೋ, ದೀಪಾವಳಿಗೋ ಹೀಗೆ ವರ್ಷಕ್ಕೆ ಎರಡೋ ಮೂರು ಬಾರಿ ಮಾತ್ರ ಬಂದು ಎರಡು ದಿನ ಉಳಿದು ಪುನಃ ನಗರಗಳಿಗೆ ವಾಪಸಾಗುತ್ತಿದ್ದರು. ಇನ್ನು ಹೆತ್ತವರು ಊರಲ್ಲಿಯೇ ಉಳಿದು ಕೃಷಿ ಕಾರ್ಯಗಳಲ್ಲಿ ಜೀವನ ಸವೆಸಿದವರು. ದಿನವಿಡೀ ಏನೋ ಕೆಲಸಗಳನ್ನು ಮಾಡುತ್ತಾ ಹಳ್ಳಿಯ ಸ್ವತ್ಛಂದ ಜೀವನವನ್ನು ಸವಿ ಯುತ್ತಾ ಬದುಕುತ್ತಿದ್ದ ಹೆತ್ತವರಿಗೆ ನಗರ ಜೀವನ ಹಿಡಿಸುವುದಿಲ್ಲ. ದಿನವಿಡೀ ಮನೆಯೊಳಗೆಯೇ ಬಂಧಿಯಂತೆ ಜೀವನ ನಡೆಸುವುದು ಹಿರಿಯ ಜೀವಗಳಿಗೆ ಸಾಧ್ಯವಾಗದ ಮಾತು. ವಯಸ್ಸಾದ ತಂದೆ-ತಾಯಂದಿರು ಅಸೌಖ್ಯರಾದಾಗ ಮಕ್ಕಳು ಉದ್ಯೋಗಕ್ಕೆ ರಜೆ ಹಾಕಿ ಪಟ್ಟಣದಿಂದ ಓಡೋಡಿ ಬರಬೇಕು. ಅವರಿಗೂ ಹೆತ್ತವರ ಶುಶ್ರೂಶೆ ಮಾಡುತ್ತಾ ಹೆಚ್ಚು ದಿನ ಹಳ್ಳಿಯಲ್ಲಿ ಉಳಿಯಲಾರದಂತಹ ಪರಿಸ್ಥಿತಿ. ಅವರಿಗೆ ಉದ್ಯೋಗದಾತ ಸಂಸ್ಥೆಯ ಕೆಲಸದ ಒತ್ತಡ! ಇದರ ಸಂದಿಗ್ಧತೆ ಅನುಭವಿಸಿದವರಿಗೇ ಗೊತ್ತು.

ಮಕ್ಕಳು ನಗರವಾಸಿಗಳಾದ ಮೇಲೆ ಹೆತ್ತವರು ಎದುರಿಸುವ ಇನ್ನೊಂದು ಪ್ರಮುಖ ಸಮಸ್ಯೆ ಕೃಷಿ ಕೆಲಸಗಳನ್ನು ಮುಂದುವರಿಸಲಾಗದಿರುವುದು. ವಯಸ್ಸಾದಂತೆ ಹೆತ್ತವರ ದುಡಿಯುವ ಚೈತನ್ಯ ಕಡಿಮೆ ಯಾಗುತ್ತದೆ. ಹಾಗಾಗಿ ಅವರಿಗೆ ತಮ್ಮ ಜಮೀನಿನಲ್ಲಿ ಹಿಂದಿನಂತೆ ಕೃಷಿ ಕೆಲಸಗಳನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕೃಷಿ ಭೂಮಿ ಪಾಳು ಬೀಳುತ್ತದೆ ಅಥವಾ ಕೃಷಿ ಭೂಮಿಯನ್ನು ಮಾರಬೇಕಾಗುವ ಅನಿವಾರ್ಯ ಸ್ಥಿತಿ ಒದಗಿಬರುತ್ತದೆ. ತಾವು ಸಾಕಿದ ಹಸುಗಳನ್ನು ಮಾರಬೇಕಾದ ಸ್ಥಿತಿ, ತಾವೇ ಉತ್ತು ಬಿತ್ತಿ ಫ‌ಸಲು ತಗೆದ ಭೂಮಿಯನ್ನು ಹಡಿಲು ಬಿಡುವುದು ಅಥವಾ ಮಾರಬೇಕಾದ ಪರಿಸ್ಥಿತಿ ಮನಸ್ಸಿಗೆ ಅಸಹನೀಯ ನೋವು ಕೊಡುತ್ತದೆ. ಕಳೆದ 20 ವರ್ಷಗಳಲ್ಲಿ ಮಕ್ಕಳು ಮನೆಯಲ್ಲಿ ಇಲ್ಲದ ಕಾರಣ ಕೃಷಿ ಮುಂದುವರಿಸಲು ಸಾಧ್ಯವಾಗದೆ ಅಸಂಖ್ಯ ಮಂದಿ ಹಿರಿಯರು ತಮ್ಮ ಹೊಲ, ಅಡಿಕೆ-ತೆಂಗು-ಕಾಫಿ ತೋಟಗಳನ್ನು ಮಾರಿ¨ªಾರೆ. ಕೃಷಿ ಭೂಮಿಯನ್ನು ಮಾರಿ ನಗರಗಳಿಗೆ ಹೋಗಿ ಜೀವನ ನಡೆಸಬೇಕಾಗಿ ಬಂದು ಆ ಅಪರಿಚಿತ ವಾತಾವರಣದಲ್ಲಿ ಅನಾಥಪ್ರಜ್ಞೆಯಲ್ಲಿ ಬದುಕುವ ಹಿರಿಯ ಜೀವಗಳು ಎಷ್ಟು ಮಂದಿ ಇದ್ದಾರೋ?

ಈರ್ವರಿಗೂ ಲಾಭ
ಕೊರೊನಾದಿಂದಾಗಿ ಉದ್ಯೋಗ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವುಗಳ ಪೈಕಿ ಒಂದು ಈಗಾಗಲೇ ವಿದೇಶಗಳಲ್ಲಿ ಮನೆಮಾತಾಗಿರುವ “ವರ್ಕ್‌ ಫ್ರಂ ಹೋಂ’. ಬಹಳಷ್ಟು ಸಾಫ್ಟ್ ವೇರ್‌ ತಂತ್ರಜ್ಞರಿಗೆ, ಅಕೌಂಟೆಂಟ್‌ ಮೊದಲಾದ ಹು¨ªೆಯನ್ನು ಹೊಂದಿದ್ದವರಿಗೆ ಈಗ ಮನೆಯಿಂದಲೇ ಕೆಲಸ ಮಾಡುವ ಅವಕಾಶವು ದೊರೆತಿದೆ. ಈಗ ಆಫೀಸಿಗೆ ಹೋಗುವುದು ಕಡ್ಡಾಯವೇನಲ್ಲ. ಉದ್ಯೋಗಿ ಲ್ಯಾಪ್‌ ಟಾಪ್‌/ ಟೇಬಲ್‌ ಟಾಪ್‌ ಕಂಪ್ಯೂಟರ್‌ಗಳನ್ನು ಬಳಸಿ ತಮ್ಮ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು. ಇದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವುದರ ಜತೆಯಲ್ಲಿ ಇಂಟರ್‌ನೆಟ್‌ ವೆಚ್ಚವನ್ನೂ ಕಂಪೆನಿಗಳು ಭರಿಸುತ್ತಿವೆ. ಮೀಟಿಂಗ್‌ ಸಹಿತ ಎಲ್ಲ ಕೆಲಸಗಳು ಆನ್‌ಲೈನ್‌ ಮೂಲಕವೇ ನಡೆಯುತ್ತಿವೆ. ಹೀಗಾಗಿ ಬಹಳಷ್ಟು ಉದ್ಯೋಗಿಗಳು ನಗರದಲ್ಲಿನ ಬಾಡಿಗೆ ಮನೆಯನ್ನು ಬಿಟ್ಟು ಹಳ್ಳಿಯಲ್ಲಿರುವ ತಮ್ಮ ಮನೆಗೆ ಬಂದು “ವರ್ಕ್‌ ಫ್ರಂ ಹೋಂ’ ಅನ್ನು ನಿಭಾಯಿಸುತ್ತಿದ್ದಾರೆ. “ವರ್ಕ್‌ ಫ್ರಂ ಹೋಂ’ ನಿಂದಾಗಿ ಕಂಪೆನಿ ಮತ್ತು ಉದ್ಯೋಗಿ ಇಬ್ಬರಿಗೂ ಲಾಭವಿದೆ. ಕಂಪೆನಿಗೆ ಕಟ್ಟಡದ ಬಾಡಿಗೆ, ವಿದ್ಯುತ್‌ ಬಿಲ್‌ ಮೊದಲಾದ ಖರ್ಚುಗಳು ಉಳಿತಾಯವಾದರೆ ಉದ್ಯೋಗಿಗೆ ನಗರಗಳ ದುಬಾರಿ ಮನೆಗಳಿಗೆ ಬಾಡಿಗೆ ಕೊಡುವುದು ತಪ್ಪುತ್ತಿದೆ.

ಮನೆಯಿಂದಲೇ ಕೆಲಸ ಮಾಡಲು ಅವಕಾಶವಿರುವ ಕಾರಣ ಮಕ್ಕಳು ಹಳ್ಳಿಗಳಲ್ಲಿರುವ ತಮ್ಮ ಮನೆಗೆ ಹಿಂದಿರುಗಿ¨ªಾರೆ. ಬಹುತೇಕ ಹಳ್ಳಿಗಳಿಗೂ ಇಂಟರ್‌ನೆಟ್‌ ತಲುಪಿದೆ. ವಯಸ್ಸಾದ ಹೆತ್ತವರಿಗೂ ತಮ್ಮ ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಸ್ವಲ್ಪ ಧೈರ್ಯ ಹಾಗೂ ಸಮಾಧಾನ. ಮಕ್ಕಳಿಗೂ ವಯಸ್ಸಾದ ಹೆತ್ತವರನ್ನು ಊರಲ್ಲಿ ಬಿಟ್ಟು ಬಂದಿದ್ದೇವಲ್ಲ ಎನ್ನುವ ಅಪರಾಧಿ ಪ್ರಜ್ಞೆ ಇಲ್ಲ. ಮೊಮ್ಮಕ್ಕಳಿಗೂ ಅಜ್ಜ-ಅಜ್ಜಿಯರ ಪ್ರೀತಿ ದೊರಕುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕೃಷಿ ಕಾರ್ಯಗಳಿಗೆ ಮತ್ತೆ ಚಾಲನೆ ಸಿಕ್ಕಿದೆ.

Advertisement

ಉದ್ಯೋಗಿಗಳ ಅಳಲು
ಉದ್ಯೋಗಿಗಳಿಗೆ “ವರ್ಕ್‌ ಫ್ರಂ ಹೋಂ’ ಭಾರವೆನಿಸತೊಡಗಿದೆ. ಆಫೀಸಿಗೆ ಹೋಗಿ ಕೆಲಸ ಮಾಡುವ ವ್ಯವಸ್ಥೆಯಲ್ಲಿ ಕೆಲಸಕ್ಕೆ ಒಂದು ನಿರ್ಧರಿತ ಸಮಯ ಅಂತ ಇರುತ್ತಿತ್ತು. ಬೆಳಗ್ಗೆ ಎಂಟು ಅಥವಾ ಒಂಬತ್ತು ಗಂಟೆಗೆ ಕಚೇರಿಗೆ ತಲುಪಿದರೆ ಸಂಜೆ ಐದು ಅಥವಾ ಆರಕ್ಕೆ ಮನೆಗೆ ಹಿಂದಿರುಗಬಹುದಿತ್ತು. ಆದರೆ ವರ್ಕ್‌ ಫ್ರಂ ಹೋಂ ಬಂದ ಅನಂತರ ಕೆಲಸಕ್ಕೆ ಹೊತ್ತುಗೊತ್ತು ಇಲ್ಲ ಎನ್ನುವುದು ಬಹು ಮಂದಿಯ ಅಳಲು. ಬೆಳಗ್ಗೆ ಏಳು ಗಂಟೆಗೇ ಲಾಗ್‌ ಇನ್‌ ಆದರೆ ಕೆಲವೊಮ್ಮೆ ರಾತ್ರಿ ಹತ್ತರ ವರೆಗೂ ಕೆಲಸವನ್ನು ಮುಂದುವರಿಸಬೇಕಾಗುತ್ತದೆ ಎನ್ನುವುದು “ವರ್ಕ್‌ ಫ್ರಂ ಹೋಂ’ ನ ಕುರಿತಾದ ದೂರು. ಬಹಳಷ್ಟು ಕಂಪೆನಿಗಳು “ವರ್ಕ್‌ ಫ್ರಂ ಹೋಂ’ ಗೆ ಅನುಮತಿ ನೀಡಿರುವ ನೆಪದಲ್ಲಿ ಉದ್ಯೋಗಿಗಳಿಂದ ಎರಡರಷ್ಟು ಕೆಲಸ ಮಾಡಿಸಿಕೊಳ್ಳುತ್ತಿವೆ. ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಕೌಟುಂಬಿಕ ಸಮಸ್ಯೆಗೂ ಕಾರಣವಾಗುವ ಸಾಧ್ಯತೆಯಿದೆ. ಹೊಂದಾಣಿಕೆಯ ಸಮಸ್ಯೆ. ತಲೆಮಾರಿನ ಅಂತರ, ಅಪ್ಪ-ಮಗನ ನಡುವಿನ ಅಭಿಪ್ರಾಯ ಬೇಧಗಳು, ಅತ್ತೆ-ಸೊಸೆಯ ನಡುವಿನ ಭಿನ್ನಾಭಿಪ್ರಾಯಗಳು ಕೂಡಾ ಮನೆಯಿಂದಲೇ ಕೆಲಸ ಮಾಡುವ ಆನಂದವನ್ನು ಕಿತ್ತುಕೊಳ್ಳುವ ಸಾಧ್ಯತೆ ಇದೆ. ಭಾರತದ ಉದ್ಯೋಗಿಗಳ ಮಟ್ಟಿಗಂತೂ “ವರ್ಕ್‌ ಫ್ರಂ ಹೋಂ’ ತೀರಾ ಇತ್ತೀಚಿನದು. ಇದು ಧನಾತ್ಮಕ ಬದಲಾವಣೆಗಳನ್ನು ತರುವುದೋ ಅಥವಾ ಋಣಾತ್ಮಕ ಪರಿಣಾಮವನ್ನು ಬೀರುವುದೋ ಎಂಬುದನ್ನು ಕಾಲವೇ ನಿರ್ಧರಿಸಬೇಕು!

 ಗಣೇಶ್‌ ಭಟ್‌ ವಾರಣಾಶಿ, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next