ಚಿಂತಾಮಣಿ: ಸರ್ಕಾರಿ ಖರಾಬ್‌ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಕಟ್ಟಡ ನಿರ್ಮಾಣ ತಡೆಯುವಂತೆ ತಾಲೂಕು ಆಡಳಿತಕ್ಕೆ ಆದೇಶಿಸಿದ ಏಳು ದಿನಗಳ ನಂತರ ತಾಲೂಕು ಆಡಳಿತದಿಂದ ಒತ್ತುವರಿದಾರರಿಗೆ ಮಂಗಳವಾರ ನೋಟಿಸ್ ನೀಡಲಾಗಿದೆ.
ಪ್ರಕರಣದ ವಿವರ: ಮಾಳ್ಳಪಳ್ಳಿ ಗ್ರಾಮ ಸರ್ವೆ ನಂ.63 ಮತ್ತು 65 ರ ಜಮೀನನ್ನು ಪರಿವರ್ತನೆ ಮಾಡಿ ಬಡಾವಣೆ ನಿರ್ಮಾಣ ಮಾಡಿ ಅದರ ಅಭಿವೃದ್ಧಿ ವೇಳೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ಈ ಕುರಿತು ಕ್ರಮ ಕೈಗೊಳ್ಳದ ಸ್ಥಳೀಯ ಅಧಿಕಾರಿಗಳ ಹಾಗೂ ಒತ್ತುವರಿದಾರರ ವಿರುದ್ಧ ಅಶ್ವಿನಿ ಬಡಾವಣೆ ನಿವಾಸಿ ಮಂಜುನಾಥ ಮತ್ತು ಪೌರಕಾರ್ಮಿಕ ಬಡಾವಣೆಯ ನಿವಾಸಿ ಕೆ.ಎನ್.ಅನಿಲ್ ಕುಮಾರ್‌ರವರು ಜಿಲ್ಲಾ ಅಸಿಸ್ಟೆಂಟ್ ಕಮಿಷನರ್, ತಾಲೂಕು ದಂಡಾಧಿಕಾರಿ, ಪೌರಾಯುಕ್ತರು ಹಾಗೂ ಜಗದೀಶ್ ಎಂಬುವರ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.
ಸೂಚನಾ ಪತ್ರ: ಎದುರುದಾರ ಜಗದೀಶ್ ಎಂಬುವರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದನ್ನು ತಡೆಯುವಂತೆ ದೂರುದಾರರು ಒತ್ತಾಯಿಸಿದ್ದ ಪರಿಣಾಮ ಜಿಲ್ಲಾಧಿಕಾರಿಗಳು ಸದರಿ ವಿವಾದಿತ ಸ್ಥಳದಲ್ಲಿನ ಕಟ್ಟಡ ಕಾಮಗಾರಿಯನ್ನು ತಡೆಯುವಂತೆ ಆದೇಶಿಸಿ ಜಿಲ್ಲಾಧಿಕಾರಿಗಳು ಕಳೆದ ಆ.22 ರಂದೇ ತಾಲೂಕು ಆಡಳಿತಕ್ಕೆ ಸೂಚನಾ ಪತ್ರ ನೀಡಲಾಗಿತ್ತು. ಸ್ಥಳೀಯ ಕಂದಾಯ ಅಧಿಕಾರಿಗಳು ಭೂ ಒತ್ತುವರಿದಾರರೊಂದಿಗೆ ಶಾಮೀಲಾಗಿ ಏಳು ದಿನಗಳು ಕಳೆದರೂ ಒತ್ತುವರಿದಾರರಿಗೆ ನೋಟಿಸ್ ನೀಡದಿದ್ದನ್ನು ಅರಿತ ದೂರುದಾರರು ತಾಲೂಕು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮಂಗಳವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದರಾದರೂ ಕಟ್ಟಡ ಕಾಮಗಾರಿ ಕೆಲಸ ಮಾತ್ರ ತಡೆಯದೆ ಹಿಂತಿರುಗಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ದಂಡಾಧಿಕಾರಿ ಹನುಮಂತ ರಾಯಪ್ಪ ಜಿಲ್ಲಾಧಿಕಾರಿಗಳು ಆದೇಶ ನೀಡಿದ ಮರು ದಿನವೇ ನಾನು ನೋಟೀಸ್ ಜಾರಿ ಮಾಡಿದ್ದೀನಿ ಎಂದು ತಿಳಿಸಿದ್ದಾರೆ. ದಂಡಾಧಿಕಾರಿಗಳು ಜಾರಿ ಮಾಡಿದ ನೋಟಿಸ್ 7 ದಿನಗಳ ತಡವಾಗಿ ಒತ್ತುವರಿದಾರರಿಗೆ ನೀಡಿರು ವುದು ಕಂಡರೆ ಸ್ಥಳೀಯ ಕಂದಾಯ ವೃತ್ತ ನಿರೀಕ್ಷಕರು ಜಿಲ್ಲಾಧಿಕಾರಿಗಳ ಆದೇಶ ನಿರ್ಲಕ್ಷಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಸೋಮವಾರ ನನ್ನಕೈಗೆ ಜಿಲ್ಲಾಧಿಕಾರಿಗಳ ನೋಟಿಸ್ ಪ್ರತಿ ದೊರೆತಿದೆ. ಮೇಲಧಿಕಾರಿಗಳ ಆದೇಶದಂತೆ ಮಂಗಳವಾರ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿದ್ದೇವೆ.
– ಅಂಬರೀಶ್, ಕಸಬಾ ಹೋಬಳಿ ಕಂದಾಯ ವೃತ್ತ ನಿರೀಕ್ಷಕ