ಚಿತ್ರದುರ್ಗ: ದೃಢತೆಯಿಂದ ಗಟ್ಟಿ ಬದುಕು ಪ್ರಾಪ್ತವಾಗುತ್ತದೆ. ಭೌತಿಕ ಶಾರೀರಿಕವಾಗಿ ಮಾನವ ನಿಂತುಕೊಳ್ಳುತ್ತಾನೆ. ಆದರೆ ಸೈದ್ಧಾಂತಿಕವಾದ ನಿಲುವು ಅನೇಕ ಸಲ ಸಾಧ್ಯವಾಗುವುದಿಲ್ಲ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮುರುಘಾ ಮಠದಿಂದ ನಡೆಯುತ್ತಿರುವ “ನೀವಿದ್ದಲ್ಲಿಯೇ ಶ್ರಾವಣ ದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದ ಶರಣರು, ಅವಾಸ್ತವಿಕ ಬದುಕಿನಲ್ಲಿ ಕೃತ್ರಿಮತೆ ಇರುತ್ತದೆ. ಅದು ಯಾಂತ್ರಿಕತೆಯ ಕಡೆಗೆ ಕೆದೊಯ್ಯುತ್ತದೆ ಎಂದರು.
ಸಹಜತೆ ಒಂದು ಮೌಲ್ಯ. ಸಂತರು, ಶರಣರು, ಶಿವಯೋಗಿಗಳು, ಆದರ್ಶ ಪುರುಷರು ಸಹಜತೆಯ ತಳಹದಿಯ ಮೇಲೆ ಬದುಕು ಕಟ್ಟಿದರು. ಅಸಹಜತೆಯ ಸೌಧ ಒಂದು ದಿನ ಕುಸಿಯುತ್ತದೆ. ಗುಣಮಟ್ಟದ ಚಿಂತನೆ, ಕಾಮಗಾರಿ ಇಲ್ಲದೆ ಸೌಧಗಳು ಕುಸಿಯುತ್ತವೆ. ಕೆಲವರದು ಕಳಪೆ ಕಾಮಗಾರಿಗೆ ಒಳಗಾಗುತ್ತದೆ. ಅಸಹಜತೆ ಬದುಕನ್ನು ಕಸಿಯುತ್ತದೆ. ಸಹಜತೆಯಲ್ಲಿ ಸತ್ಯಸಂಧತೆ ಇರುತ್ತದೆ. ಸತ್ಯ ಸಂಧತೆಯ ಪ್ರಾಣ ಮಾನವೀಯತೆ. ಇದು ನಮ್ಮನ್ನು ನಿಜ ಮಾನವರನ್ನಾಗಿ ಮಾಡುತ್ತದೆ. ಮಾನವೀಯತೆ ಇರುವಲ್ಲಿ ಸಮಾನತೆ ಇರುತ್ತದೆ. ವಾಸ್ತವಿಕತೆ ತಪಸ್ಸು, ಅವಾಸ್ತವಿಕತೆ ತಮಸ್ಸು. ವಾಸ್ತವಿಕತೆ ಬೇಗ ಸಿದ್ಧಿಸುವುದಿಲ್ಲ. ವಾಸ್ತವ, ಅವಾಸ್ತವದ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ ಎಂದು ವಿಶ್ಲೇಷಿಸಿದರು.
ಮಾನವನ ಒಳಗೆ ಮರುಳನಿದ್ದಾನೆ. ಸಾಧನೆಯ ಮುಖಾಂತರ ಅಂತರಂಗದಲ್ಲಿ ಅವಿತಿರುವ ಹುಚ್ಚನನ್ನು ಹೊರಗೆ ಹಾಕಬೇಕು. ಇದಕ್ಕೆ ಒಂದು ಸಾಧನೆ, ಸಿದ್ಧಿ ಬೇಕು. ಅವಾಸ್ತವ ಬದುಕಿಗೆ ಕಾರಣ ಅಜ್ಞಾನ. ಯಾರಿಗೆ ವಾಸ್ತವಿಕತೆ – ಅವಾಸ್ತವಿಕತೆಯ ನಡುವಿನ ಪ್ರಜ್ಞೆ ಗೊತ್ತಿರುವುದಿಲ್ಲವೋ ಅವರು ಅವಾಸ್ತವಿಕತೆ ಜೊತೆ ಸಾಗುತ್ತಾರೆ. ಯಾರಿಗೆ ಜ್ಞಾನದ ಕೊರತೆ ಇಲ್ಲವೋ ಅವರು ಸಹಜತೆಗೆ ಸಾಗುತ್ತಾರೆ ಎಂದು ಮುರುಘಾ ಶರಣರು ಅಭಿಪ್ರಾಯ ಪಟ್ಟರು.