ಬೆಂಗಳೂರು: ಸೆಪ್ಟೆಂಬರ್ 28 ರಂದು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸುವುದಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಮುಂದುವರಿಸಿದೆ.
545 ಹುದ್ದೆಗಳಿಗೆ ಅಕ್ಟೋಬರ್ 3, 2021 ರಂದು ನಡೆಸಲಾಗಿದ್ದ ಪರೀಕ್ಷೆಯನ್ನು ಹಗರಣ ಹೊರ ಬಿದ್ದ ನಂತರ ಸರಕಾರವು ರದ್ದುಗೊಳಿಸಿದೆ.
ಸೆಪ್ಟೆಂಬರ್ 28 ರಂದು ನಡೆಯಬೇಕಿದ್ದ ಮರು ಪರೀಕ್ಷೆ ನಡೆಸುವುದರ ವಿರುದ್ಧ ಹಗರಣದಲ್ಲಿ ಆರೋಪಿಗಳಲ್ಲದ ಪಾಸಾಗಿದ್ದ 100 ಮಂದಿ ಅಭ್ಯರ್ಥಿಗಳು ತಕರಾರು ಅರ್ಜಿ ಹಾಕಿದ್ದಾರೆ.
545 ಪಿಎಸ್‌ಐಗಳ ಹುದ್ದೆಗಳನ್ನು ಭರ್ತಿ ಮಾಡಲು ನಡೆದ ನೇಮಕಾತಿ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ OMR ಉತ್ತರ ಪತ್ರಿಕೆಗಳನ್ನು ತಿರುಚಿರುವುದು ಬಹಿರಂಗವಾಗಿತ್ತು. ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 52 ಅಭ್ಯರ್ಥಿಗಳನ್ನು ಅಧಿಕಾರಿಗಳು ಡಿಬಾರ್ ಮಾಡಿದ್ದಾರೆ. 2021 ರಲ್ಲಿ ನಡೆದ ಪರೀಕ್ಷೆಯನ್ನು 54,289 ಅಭ್ಯರ್ಥಿಗಳು ಬರೆದಿದ್ದರು.
ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿ, ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಭ್ಯರ್ಥಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 30 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.