ಬೆಂಗಳೂರು: ಪ್ರತಿಷ್ಠಿತ ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ “ಬೆನಿಫಿಷಿಯರಿ ಕ್ಯಾಪಿಟಲ್ ಕಾಂಟ್ರಿಬ್ಯೂಷನ್’ (ಬಿಸಿಸಿ) ಶುಲ್ಕ ಹಾಗೂ “ಗ್ರೇಟರ್ ಬೆಂಗಳೂರು ಶುಲ್ಕ’ ವಾಪಸ್ ನೀಡುವ ವಿಚಾರದಲ್ಲಿ ಬೆಂಗಳೂರು ಜಲಮಂಡಳಿಗೆ ಹೈಕೋರ್ಟ್‌ನಲ್ಲಿ ರಿಲೀಫ್ ಸಿಕ್ಕಿದೆ.
ಶೋಭಾ ಡೆವಲಪರ್ ಸೇರಿದಂತೆ ಹಲವು ಪ್ರತಿಷ್ಠಿತ ಬಿಲ್ಡರ್‌ಗಳಿಂದ ಸಂಗ್ರಹಿಸಲಾಗಿದ್ದ ಬೆನಿಫಿಷಿಯರಿ ಕ್ಯಾಪಿಟಲ್ ಕಾಂಟ್ರಿಬ್ಯುಷನ್ (ಬಿಸಿಸಿ) ಶುಲ್ಕ ಮತ್ತು ಗ್ರೇಟರ್ ಬೆಂಗಳೂರು ಶುಲ್ಕವನ್ನು ವಾಪಸ್ ನೀಡುವಂತೆ ಬೆಂಗಳೂರು ಜಲಮಂಡಳಿಗೆ ನಿರ್ದೇಶನ ನೀಡಿ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ.
ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಬೆಂಗಳೂರು ಜಲಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ.ಬಿ.ಎಂ.ಶ್ಯಾಮ್ ಪ್ರಸಾದ್ ಮತ್ತು ನ್ಯಾ.ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠವು, ಏಕಸದಸ್ಯಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಅಲ್ಲದೆ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ವಿಭಾಗೀಯ ನ್ಯಾಯಪೀಠದ ಈ ಆದೇಶದಿಂದ ಸದ್ಯ ಜಲಮಂಡಳಿ ಲಕ್ಷಾಂತರ ರೂಪಾಯಿ ಶುಲ್ಕ ಮರುಪಾವತಿ ಮಾಡಬೇಕಾಗಿಲ್ಲ, ಇದರಿಂದ ಜಲಮಂಡಳಿಗೆ ದೊಡ್ಡ ರಿಲೀಫ್ ಸಿಕ್ಕಿದಂತಾಗಿದೆ. ಇಲ್ಲದಿದ್ದರೆ ಮಂಡಳಿ ಕೋಟ್ಯಂತರ ರೂ. ಹಣವನ್ನು ಮರುಪಾವತಿ ಮಾಡಬೇಕಾದ ಸ್ಥಿತಿ ಎದುರಾಗಿತ್ತು.
ಏಪ್ರಿಲ್‌ನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಶೋಭಾ ಲಿಮಿಟೆಡ್ ಮತ್ತು ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಬೆಂಗಳೂರು ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಕೆಲವು ವರ್ಷಗಳಿಂದ ವಸತಿ ಕಟ್ಟಡಗಳಿಂದ ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂಗ್ರಹಿಸುತ್ತಿರುವ “ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕ ಮತ್ತು ಬೆನಿಫಿಶಿಯರಿ ಕ್ಯಾಪಿಟಲ್ ಕಾಂಟ್ರಿಬ್ಯೂಷನ್ ಶುಲ್ಕ ಕಾನೂನುಬಾಹಿರ ಎಂದು ಮಹತ್ವದ ಆದೇಶ ನೀಡಿತ್ತು.
ಆದರೆ, ಜಲಮಂಡಳಿ ಹಾಲಿ ಬಹುಮಹಡಿಗಳಿಂದ ಸಂಗ್ರಹ ಮಾಡುತ್ತಿರುವ ಮುಂಗಡ ಪ್ರೊರೇಟಾ ಶುಲ್ಕ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸ್ಕರಿತ ನೀರು ಶುಲ್ಕ ಸಂಗ್ರಹ ಕ್ರ ಮ ವನ್ನು ನ್ಯಾಯಾಲಯ ಎತ್ತಿಹಿಡಿದಿತ್ತು. ಆದರೆ, ಅರ್ಜಿದಾರರಿಂದ ಸಂಗ್ರಹಿಸಿರುವ ಬಿಸಿಸಿ ಹಾಗೂ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕವನ್ನು 12 ವಾರಗಳಲ್ಲಿ ವಾಪಸ್ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಜತೆಗೆ ರಾಜ್ಯ ಸರ್ಕಾರ ಅಥವಾ ಬೆಂಗಳೂರು ಜಲಮಂಡಳಿ, ಈ ಎರಡೂ ಶುಲ್ಕಗಳನ್ನು ವಿಧಿಸಲು ಬೆಂಗಳೂರು ನೀರು ಮತ್ತು ಒಳಚರಂಡಿ ಕಾಯ್ದೆ-1964 ಮತ್ತು ಬೆಂಗಳೂರು ನೀರು ಪೂರೈಕೆ ರೆಗ್ಯುಲೇಷನ್ಸ್-1965ರಡಿ ಸೂಕ್ತ ತಿದ್ದುಪಡಿ ಮಾಡಿ ಆನಂತರ ಮುಂದಿನ ಕ್ರಮ ಜರುಗಿಸಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿತ್ತು.