Advertisement

ಹಾಸ್ಟೆಲ್‌ನಲ್ಲಿ ಗುಳೆ ಹೋದವರ ವಾಸ್ತವ್ಯ

06:13 PM Mar 30, 2020 | Suhan S |

ಕೊಪ್ಪಳ: ದುಡಿಮೆ ಅರಸಿ ಗುಳೆ ಹೋಗಿರುವ ಜನರು, ವಲಸಿಗರು, ಭಿಕ್ಷುಕರು, ನಿರ್ಗತಿಕರ ಬಗ್ಗೆ ಕಾಳಜಿ ವಹಿಸಿದ ಜಿಲ್ಲಾಡಳಿತ ಅವರಿಗೆ ಊಟ, ಉಪಚಾರ, ಶೌಚಾಲಯ ಸೇರಿ ಅಗತ್ಯ ಸೌಲಭ್ಯಕ್ಕಾಗಿ ಜಿಲ್ಲೆಯಲ್ಲಿನ ವಿವಿಧ ವಸತಿ ನಿಲಯಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟಿರುವುದಲ್ಲದೇ, ಅಧಿಕಾರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಿದೆ.

Advertisement

ಹೌದು. ಜಿಲ್ಲೆ ಮೊದಲೇ ಹಿಂದುಳಿದ ಪ್ರದೇಶ. ಇಲ್ಲಿನ ಜನ ದೂರದ ಊರುಗಳಿಗೆ ಗುಳೆ ಹೋಗಿ ಪುನಃ ಊರಿಗೆ ವಾಪಾಸ್ಸಾಗುತ್ತಿದ್ದಾರೆ. ಅವರನ್ನು ಊರಿಗೆ ಕಳುಹಿಸುವ ಬದಲಾಗಿ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿನ ವಸತಿ ನಿಲಯಗಳಲ್ಲೇ ತಂಗುವ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ.

ಇನ್ನೂ ಜಿಲ್ಲೆಯಲ್ಲಿ ಹಲವು ಬೃಹತ್‌, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿವೆ. ಆ ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ದೇಶವೇ ಲಾಕ್‌ಡೌನ್‌ ಆಗಿದ್ದರಿಂದ ಅನ್ಯ ರಾಜ್ಯದ ಲಾರಿ ಚಾಲಕರು, ಕ್ಲೀನರ್‌ಗಳು, ಕೂಲಿಕಾರ್ಮಿಕರು, ಅನ್ಯ ರಾಜ್ಯಗಳಿಂದ ಬಂದಿರುವ ಕಾರ್ಮಿಕ ವರ್ಗಕ್ಕೆ ಹಾಗೂ ಭಿಕ್ಷುಕ, ನಿರ್ಗತಿಕರು ಅಲೆದಾಡುವುದನ್ನು ತಪ್ಪಿಸಲು ಜಿಲ್ಲಾಡಳಿತ ವಸತಿ ನಿಲಯಗಳಲ್ಲಿ ತಂಗಲು ವ್ಯವಸ್ಥೆ ಮಾಡಿದೆ.

9 ವಸತಿ ನಿಲಯದಲ್ಲಿ ವ್ಯವಸ್ಥೆ: ಕೊಪ್ಪಳದಲ್ಲಿನ ಬಾಲಕರ ವಸತಿ ನಿಲಯ, ಟಣಕನಕಲ್‌ನ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ನಿಲಯ, ಕೊಪ್ಪಳದ ಎಸ್‌ಸಿ ಬಾಲಕರ ವಸತಿ ನಿಲಯ, ಗಂಗಾವತಿಯ ಅಲ್ಪಸಂಖ್ಯಾತರ ವಸತಿ ನಿಲಯ, ಕನಕಗಿರಿಯ ಹಿಂದೂಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯ, ಕುಷ್ಟಗಿಯ ಎಸ್‌ಸಿ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ, ಕಾರಟಗಿಯ ಸರ್ಕಾರಿ ಬಾಲಕರ ವಸತಿ ನಿಲಯ, ಕುಕನೂರಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ನಿಲಯ, ಯಲಬುರ್ಗಾದ ಎಸ್‌ಸಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ವಲಸೆ ಕಾರ್ಮಿಕರು,ವಸತಿಹೀನರು, ನಿರ್ಗತಿಕರು ಹಾಗೂ ಇತರೆ ವರ್ಗದ ಜನರಿಗೆ ಪುನರ್‌ವಸತಿ ಕಲ್ಪಿಸಲು ವ್ಯವಸ್ಥೆ ಮಾಡಿದೆ.

ಅಧಿಕಾರಿಗಳ ನಿಯೋಜನೆ: ಪ್ರತಿ ವಸತಿ ನಿಲಯದಲ್ಲೂ 100ರಿಂದ 250 ಜನರ ವಾಸ್ತವ್ಯಕ್ಕೆ ವ್ಯವಸ್ಥೆಯಿದ್ದು, ಊಟೋಪಚಾರ, ನೀರು, ಶೌಚಾಲಯ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೇ ಪ್ರತಿ ವಸತಿ ನಿಲಯಕ್ಕೂ ಓರ್ವ ನೋಡಲ್‌ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿದೆ. ಇವರ ಮೇಲ ಓರ್ವ ಜಿಲ್ಲಾಮಟ್ಟದ ಅಧಿಕಾರಿಯನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಒಟ್ಟು ಮೂವರು ಉಸ್ತುವಾರಿಗಳು 9 ವಸತಿ ನಿಲಯದ ಜವಾಬ್ದಾರಿ ನೋಡಿಕೊಳ್ಳಬೇಕಿದೆ. ಅವರ ಆರೋಗ್ಯ ತಪಾಸಣೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ.

Advertisement

ಸ್ವಯಂ ಸೇವಕರಾಗಲು ನೋಂದಾಯಿಸಿ: ಕೂಲಿ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು ಸೇರಿ ನಿರಾಶ್ರಿತರಿಗೆ ನೆರವಾಗಬೇಕಿದೆ. ಅವರಿಗೆ ಅಗತ್ಯ ದಿನಸಿ ಸಾಮಗ್ರಿ ಪೂರೈಕೆ ಮಾಡಬೇಕಿದೆ. ಇವೆಲ್ಲವುಗಳನ್ನು ಜನರಿಗೆ ತಲುಪಿಸುವುದು ಅಗತ್ಯವಾಗಿದ್ದು, ಹಾಗಾಗಿ ಸ್ವಯಂ ಸೇವಕರು ಬೇಕಾಗುತ್ತದೆ. ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೇರಿ ಸ್ವಯಂ ಸೇವಕರು ಸರ್ಕಾರಿ ಕೊಪ್ಪಳ ವೆಬ್‌ಸೈಟ್‌ನಲ್ಲಿ ರವಿವಾರದಿಂದ ಪ್ರಚುರ ಪ್ರಡಿಸಲಾಗುತ್ತಿದ್ದು, ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next