Advertisement

ಜಿಲ್ಲಾ ಕೇಂದ್ರಕ್ಕೆ ಸನಿಹದಲ್ಲಿದ್ದರೂ ಅನಾಥ ಸ್ಥಿತಿಯಲ್ಲಿ ಪಡುಕರೆ

01:00 AM Mar 14, 2019 | Team Udayavani |

ಕಟಪಾಡಿ: ದೇಶದ ಕುಗ್ರಾಮಗಳಿಗೂ ಸಂಪರ್ಕ ಏರ್ಪಡಿಸುವ ಕಾರ್ಯ ಇದೀಗ ಪ್ರಗತಿಯಲ್ಲಿದೆ. ಆದರೆ ಉಡುಪಿ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿದ್ದರೂ, ಪ್ರವಾಸಿ ತಾಣವಾಗಿದ್ದರೂ ಉದ್ಯಾವರದ ಪಡುಕರೆ ಮಾತ್ರ ಅನಾಥ ಸ್ಥಿತಿಯಲ್ಲಿದೆ.

Advertisement

ಉದ್ಯಾವರ ಪಂಚಾಯತ್‌ ವ್ಯಾಪ್ತಿಯ 13ನೇ ವಾರ್ಡ್‌ ಆಗಿರುವ ಪಡುಕರೆ ಸಮುದ್ರ ಮತ್ತು ಪಾಪನಾಶಿನಿ ಹೊಳೆ ನಡುವೆ ಇದ್ದು ಗ್ರಾ.ಪಂ. ಸಂಪರ್ಕಕ್ಕೆ ಹಲವು ಕಿ.ಮೀ. ಕ್ರಮಿಸಬೇಕು.  

ಸವಲತ್ತು ದೂರ
ಪಡುಕರೆ ಭಾಗದ ಗ್ರಾಮಸ್ಥರಿಗೆ ಯಾವುದೇ ಸರಕಾರಿ ಸವಲತ್ತುಗಳನ್ನು ಪಡೆಯಲು  ಉದ್ಯಾವರ ಗ್ರಾಮ ಪಂಚಾಯತ್‌, ಮೆಸ್ಕಾಂ ಕಚೇರಿ, ಪಶುವೈದ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಿಕ್ಷಣ, ಶಾಲೆಗಳು, ಬ್ಯಾಂಕ್‌, ಅಂಚೆ ಕಚೇರಿ, ಸಹಿತ ಇತರೇ ಸರಕಾರಿ ಕಚೇರಿಗಳಿಗೆ ಸೌಲಭ್ಯಕ್ಕಾಗಿ ಉದ್ಯಾವರವನ್ನು ತಲುಪಲು 10 ಕಿ.ಮೀ. ಸುತ್ತುಬಳಸಿ ಬರಬೇಕು. ಮಟ್ಟು ಕಡಲ ಕಿನಾರೆಗೆ ಬಂದು ಮಟ್ಟು ಸೇತುವೆಯ ಮೂಲಕ (ಲಘು ವಾಹನ ಬಳಕೆ ಮಾತ್ರ ಸಾಧ್ಯ) ಕಟಪಾಡಿ ಪೇಟೆಗೆ ತಲುಪಿ ಉದ್ಯಾವರಕ್ಕೆ ಬರಬೇಕಾಗಿದೆ. ಮತ್ತೂಂದೆಡೆ ದೂರದ ಮಲ್ಪೆ ಭಾಗಕ್ಕೆ ಸಂಚರಿಸಿ ಕಿದಿಯೂರು, ಕಡೆಕಾರು ಭಾಗವಾಗಿ ಕ್ರಮಿಸಿ ಸುತ್ತುವರಿದು ಮತ್ತಷ್ಟು ಬಲುದೂರದ ಹಾದಿಯನ್ನು ಬಳಸಬೇಕಾದ ಅನಿವಾರ್ಯತೆ ಇದೆ.

ಇದ್ದ ಶಾಲೆಯೂ ಸ್ಥಗಿತ  
ಇಲ್ಲಿದ್ದ ಸರಕಾರಿ ಪ್ರಾ. ಶಾಲೆ ದರ್ಬಾರ್‌ ಕಾರ್ಯಾಚರಿಸುತ್ತಿಲ್ಲ. 1 ಅಂಗನವಾಡಿ ಕೇಂದ್ರ ಹೊಂದಿದ್ದು, ಪಡಿತರಕ್ಕೂ ಜನ ಮಟ್ಟು ರೇಷನ್‌ ಅಂಗಡಿಗೆ ಬರಬೇಕಿದೆ.  

ಸಂಪರ್ಕ ಸೇತುವೆಯ ಆವಶ್ಯಕತೆ -ಪರಿಹಾರ
ಈ ಮೊದಲು ಕಣ್ಣಳತೆಯ ದೂರದಲ್ಲಿರುವ ಪಡುಕರೆ ಭಾಗದ ಸಂಪರ್ಕಕ್ಕೆ ದೋಣಿ ಬಳಸಲಾಗುತ್ತಿದ್ದು ಕಳೆದ ಸುಮಾರು 8 ವರ್ಷಗಳ ಮೊದಲೇ ಇದನ್ನು ನಿಲ್ಲಿಸಲಾಗಿದೆ. ಪ್ರದೇಶವನ್ನು  ಸುವ್ಯವಸ್ಥಿತಗೊಳಿಸಲು ಪಿತ್ರೋಡಿ-ಕಲಾೖಬೈಲು ಭಾಗದಿಂದ ಸುಮಾರು 400 ಮೀ.ನಷ್ಟು ಉದ್ದದ ಸುವ್ಯವಸ್ಥಿತ ಸಂಪರ್ಕ ಸೇತುವೆಯ ನಿರ್ಮಾಣವಾದಲ್ಲಿ ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಲು ಸಾಧ್ಯ ಎಂಬ ಜನಾಭಿಪ್ರಾಯವಿದೆ.  

Advertisement

ಪ್ರವಾಸೋದ್ಯಮಕ್ಕೂ ಅವಕಾಶ 
ಪಡುಕರೆ ಕಡಲ ಕಿನಾರೆಯು ಹೆಚ್ಚು ಆಕರ್ಷಿಕವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಮೂಲಭೂತ ಸೌಕರ್ಯದ ಕೊರತೆ ಇದೆ.  

ಸೇತುವೆ ನಿರ್ಮಾಣ ಅವಶ್ಯ
ತುರ್ತು ಸಂದರ್ಭ ನಿರ್ವಹಣೆಗೆ ಸಂಪರ್ಕ ಸೇತುವೆ ನಿರ್ಮಾಣ ತೀರಾ ಅವಶ್ಯ. ಗ್ರಾಮಸ್ಥರಿಗೆ ತೊಂದರೆಯಾಗಬಾರದೆಂದು ಸಿಬಂದಿಯೇ ಮನೆಗಳಿಗೆ ತೆರಳಿ ಮನೆ ತೆರಿಗೆ ಮತ್ತು ನೀರಿನ ತೆರಿಗೆ ಪಡೆಯುತ್ತಾರೆ. ನೇರ ಸಂಪರ್ಕ ಸೇತುವೆ ಆದಲ್ಲಿ ಗ್ರಾಮಸ್ಥರಿಗೂ, ಪ್ರವಾಸಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. 
-ರಮಾನಂದ ಪುರಾಣಿಕ್‌, ಪಿ.ಡಿ.ಒ. ಉದ್ಯಾವರ ಗ್ರಾ.ಪಂ.  

ಸುತ್ತು ಬಳಸಿ ಹೋಗಬೇಕು
ಹೊಳೆ ದಾಟಿಸುವ ದೋಣಿ ನಿಂತಿದೆ. ಸಂಪರ್ಕ ಸೇತುವೆ ನಿರ್ಮಾಣ ಆಗಿಲ್ಲ. ಊರೂರು ಸುತ್ತು ಬಳಸಿ ಹೋಗಬೇಕಾದ ಸ್ಥಿತಿ ಇದೆ.  
-ರವಿರಾಜ್‌ ತಿಂಗಳಾಯ, ಸ್ಥಳೀಯರು

600ಕ್ಕೂ ಅಧಿಕ ಜನಸಂಖ್ಯೆ 
ಸುಮಾರು 600ರಷ್ಟು ಜನಸಂಖ್ಯೆ ಹೊಂದಿದ್ದು, 114 ಮನೆಗಳು,  108 ಕುಟುಂಬ ಸಂಖ್ಯೆಯನ್ನು ಹೊಂದಿದೆ. ಸುಮಾರು 420ಕ್ಕೂ ಮಿಕ್ಕಿದ ಮತದಾರರು ಇದ್ದಾರೆ. ಕುಡಿಯುವ ನೀರಿನ ಮೂಲವನ್ನೇ ಹೊಂದಿರದ ಈ ಪ್ರದೇಶದ 97 ಮನೆಗಳಿಗೆ ಕುಡಿಯುವ ನಳ್ಳಿ ನೀರಿನ ಸಂಪರ್ಕವನ್ನು ಗ್ರಾಮ ಪಂಚಾಯ ತ್‌ಹೊಳೆಗೆ ಪೈಪ್‌ಲೈನ್‌ ಅಳವಡಿಸಿ ವರ್ಷವಿಡೀ ಪೂರೈಸಬೇಕಾಗಿದೆ. ಈ ವಾರ್ಡ್‌ ಇಬ್ಬರು ಸದಸ್ಯರನ್ನು ಹೊಂದಿದೆ.

– ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next