ಕೊರಟಗೆರೆ: ಸಾರ್ವಜನಿಕರು ಮತ್ತು ಕಾಲೇಜ್ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯವಂತ ಜೀವನ ನಡೆಸುವಂತೆ ಸಿವಿಲ್ ನ್ಯಾಯಾಧೀಶರಾದ ಜೆ.ಎನ್. ಶ್ರೀನಾಥ್ ತಿಳಿಸಿದರು.
ಅವರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಂಬಾಕು ನಿಯಂತ್ರಣ ಕೋಶದ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ತಂಬಾಕು ಸೇವನೆಯು ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಹಾಗೂ ಮನುಷ್ಯನಿಗೆ ಎಷ್ಟೇ ಹಣವಿದ್ದರೂ ವಾಸಿಮಾಡಿಕೊಳ್ಳಲು ಸಾಧ್ಯವಾಗದೇ ಇರುವಂತಹ ಕಾಯಿಲೆಗಳು ಬರುವುದರಿಂದ ಯಾರೂ ಸಹ ತಂಬಾಕು ಸೇವನೆ ಮಾಡಬಾರದೆಂದು ಹಾಗೂ ತಮ್ಮ ಕುಟುಂಬದವರು ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಸಹ ತಂಬಾಕು ಸೇವನೆ ಮಾಡದ ರೀತಿಯಲ್ಲಿ ಅರಿವು ಮೂಡಿಸಿದ ಅವರು ತಂಬಾಕು ಸೇವನೆ ಅತ್ಯಂತ ಅಪಾಯಕಾರಿ ತಮ್ಮ ಪ್ರಾಣಕ್ಕೆ ಕುತ್ತು ಬರುವುದಲ್ಲದೇ, ನಮ್ಮನೆರೆ ಹೊರೆಯರೆಲ್ಲರಿಗೂ ಇದರಿಂದ ತೊಂದರೆ ಉಂಟಾಗುವುದಲ್ಲದೇ ಅಂಗಾಂಗ ವೈಫಲ್ಯದಿಂದ ಬಳಲ ಬೇಕಾಗುತ್ತದೆ. ತಂಬಾಕು ಸೇವನೆ ನಿಲ್ಲಿಸದೇ ಹೋದರೆ ಏನೆಲ್ಲಾ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಎಂಬುದರ ಬಗ್ಗೆ ತಿಳಿದು ತಂಬಾಕು ಸೇವನೆ ತ್ಯಜಿಸುವ ಮಾರ್ಗೊಪಾಯ ಕಂಡು ಕೊಂಡು ಇತರರಿಗೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಮಾತನಾಡಿ ತಂಬಾಕು ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದರಿಸಬೇಕಾಗಬಹುದು. ಪ್ರಮುಖವಾಗಿ ಹೃದಯ ರಕ್ತನಾಳದ ಕಾಯಿಲೆ , ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ದುರ್ಬಲ ಫಲವತ್ತತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಿನಿ.ಎಂ.ಎನ್. ಮಾತನಾಡಿ ತಂಬಾಕು ಮನುಷ್ಯನಿಗಷ್ಟೇ ಅಲ್ಲದೇ ಪರಿಸರಕ್ಕೂ ಮಾರಕವಾಗಿದ್ದು , ಬೀಡಿ, ಸೀಗರೇಟ್ ಉತ್ಪನ್ನಗಳಲ್ಲಿ ಸಾವಿರಕ್ಕೂ ಹೆಚ್ಚು ರಾಸಾಯನಿಕ ವಸ್ತಗಳು ಇದ್ದು, ಸೀಗರೇಟ್ ಸೇವಿಸಿ ಬಿಸಾಡುವ ತುಂಡುಗಳಲ್ಲಿರುವ,ನಿಕೊಟಿನ್ ಮತ್ತು ಪ್ಲಾಸ್ಟಿಕ್ ನಂತಹ ಪದಾರ್ಥಗಳು ನೀರಿನಲ್ಲಿ ಸೇರಿ ಜಲಚರಗಳು ನಾಶವಾಗುತ್ತವೆ. ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್ ಹೆಚ್ಚಾಗಿ ಹವಾಮಾನ ವೈಪರೀತ್ಯವಾಗಲು ಪ್ರಮುಖ ಕಾರಣವಾಗಿದ್ದು, ಹದಿಹರೆಯದವರು ಹೆಚ್ಚಾಗಿ ತಂಬಾಕು ವ್ಯಸನಕ್ಕೆ ತುತ್ತಾಗಿ ಬಾಯಿ ಕ್ಯಾನ್ಸರ್, ಗ್ಯಾಂಗ್ರಿನ್ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಂತಹ ಹಲವಾರು ರೀತಿಯ ಕಾಯಿಲೆಗಳು ಬರುತ್ತಿದ್ದು , ಇತ್ತೀಚಿನ ದಿನಗಳಲ್ಲಿ ಬಾಯಿಹುಣ್ಣಿನ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿರುವುದು ಕಂಡು ಬರುತ್ತಿದೆ. ವಿದ್ಯಾರ್ಥಿಗಳಿಗೆ ತಂಬಾಕು ತ್ಯಜಿಸುವ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ ಪಪಂ ಅದ್ಯಕ್ಷೆ ಕಾವ್ಯಶ್ರೀ, ಉಪಾಧ್ಯಕ್ಷೆ ಭಾರತಿ,ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಷ್ಪಲತಾ,ಡಾ. ಸಂಜಯ್, ಡಾ.ಸಾಯಿ ಕೌಸಲ್ಯೆ,ವಕೀಲರ ಸಂಘದ ಅದ್ಯಕ್ಷೆ ದೇವರಾಜು, ಪ್ರಾಂಶುಪಾಲ ಡಾ.ಪ್ರಸನ್ನ, ಯುವ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ವೆಂಕಟೇಶ್,ಆರೋಗ್ಯ ಇಲಾಖೆಯ ರಘು,ಶಾಂತಮ್ಮ, ರವಿ, ಉಮಾ,ಸಂಪನ್ಮೂಲ ವ್ಯಕ್ತಿಗಳಾಗಿ ರವಿಪ್ರಕಾಶ್, ಹರೀಶ್,ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.