ಬೆಂಗಳೂರು: ತಳಮಟ್ಟದ ಆರ್ಥಿಕತೆಗೆ ಶಕ್ತಿ ತುಂಬುವ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಅಕ್ಟೋಬರ್ 2ರಂದು ಚಾಲನೆ ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಹಾಗೂ ಸುಮಂಗಲಿ ಸೇವಾಶ್ರಮ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಬುಧವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ವಯಂಸೇವಾ ಸಂಸ್ಥೆಗಳ ಸಮಾವೇಶವನ್ನು ಉದ್ಘಾಟಿಸಿದ ಸಿಎಂ ಮಾತನಾಡಿದರು.
ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಪ್ರಥಮ ಬಾರಿ ಆಯವ್ಯಯದಲ್ಲಿ 1.5 ಲಕ್ಷ ರೂ.ಗಳ ಆರ್ಥಿಕ ನೆರವು, ಆ್ಯಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಮೆಜಾನ್‌ನಂತಹ ಆನ್‌ಲೈನ್ ವೇದಿಕೆಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮ ಪ್ರಾರಂಭಿಸಿದ್ದು, ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ರೂ. ವಹಿವಾಟನ್ನು ಮಾಡುತ್ತಿದೆ. ಇದು ಸಂಘಟಿತವಾದ ಶ್ರಮದ ಶಕ್ತಿ ಎಂದರು.
ಸ್ತ್ರೀಶಕ್ತಿಯ ಸಬಲೀಕರಣ
ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀಶಕ್ತಿಯ ಸಬಲೀಕರಣ ಆಗಬೇಕು. ನಮ್ಮ ಸ್ಥಳೀಯಮಟ್ಟದ ಸಂಘಸಂಸ್ಥೆಗಳ ಉತ್ಪನ್ನಗಳು ವಿದೇಶದಲ್ಲಿ ಮಾರಾಟವಾಗಬೇಕು ಎನ್ನುವ ಆಸೆ ಸರಕಾರದ್ದು. ಆಗ ನಮ್ಮ ಆರ್ಥಿಕತೆಗೆ ಬಹಳ ಶಕ್ತಿ ಬರುತ್ತಿದೆ ಎಂದರು.
Related Articles
ಸಚಿವ ಮುರಗೇಶ್ ನಿರಾಣಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ್, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ ಮತ್ತಿತರರಿದ್ದರು.
ಆದಾಯ-ರಾಜ್ಯ 3ನೇ ಸ್ಥಾನ
ದೇಶದ ತಲಾವಾರು ಆದಾಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಇದಕ್ಕೆ ಕೇವಲ ರಾಜ್ಯದ ಶೇ. 30 ಜನತೆ ಮಾತ್ರ ಕೊಡುಗೆ ನೀಡುತ್ತಿದ್ದು, ಶೇ. 70 ಜನತೆ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ಈ ಶೇ. 70 ಜನರಿಗೆ ಆರ್ಥಿಕ ನೆರವು, ಮಾರುಕಟ್ಟೆ ವ್ಯವಸ್ಥೆಗಳನ್ನು ನೀಡುವ ಮೂಲಕ ಶ್ರಮಿಕ ವರ್ಗದ ಜನರು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡುವಂತಾಗುತ್ತದೆ ಎಂದರು.
ರಫ್ತು-9ನೇ ಸ್ಥಾನ: ಶೋಭಾ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ಪ್ರಗತಿಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಕೋವಿಡ್ ಅನಂತರ ಹಲವರು ಕೃಷಿಯತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮವಾಗಿ ಕೃಷಿ ಉತ್ಪಾದನೆಯನ್ನು ದೇಶವು ಗುರಿ ಮೀರಿ ಸಾಧನೆ ಮಾಡಿದೆ. ಶೇ. 70ರಷ್ಟು ಖಾದ್ಯ ತೆಲವನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ದೇಶ 9ನೇ ಸ್ಥಾನದಲ್ಲಿದೆ ಎಂದರು.