ಅಮರಾವತಿ: ಕರ್ನಾಟಕ ಸೇರಿದಂತೆ ಕೃಷ್ಣಾ ನದಿ ದಂಡೆಯಲ್ಲಿ ಇರುವ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ನೀರಿನ ಶೇ.65ರಷ್ಟನ್ನು ಮಾತ್ರವೇ ಬಳಕೆ ಮಾಡುತ್ತಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ಯ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಂದು ಜಲ ವರ್ಷ (ಅ.1ರಿಂದ ಸೆ.30)ದಲ್ಲಿ 3,144.41 ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ. ಆದರೆ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಕೇವಲ 2,060 ಟಿಎಂಸಿ ಅಡಿ ನೀರನ್ನು ಮಾತ್ರವೇ ಬಳಕೆ ಮಾಡುತ್ತಿವೆ ಎಂದು ಆಯೋಗದ ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ನಾಲ್ಕು ರಾಜ್ಯಗಳು ಕೃಷ್ಣಾ ನದಿ ವಿಚಾರಕ್ಕೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತಿರುವಂತೆಯೇ ಬಹಿರಂಗವಾಗಿರುವ ಸಿಡಬ್ಲ್ಯೂಸಿ ವರದಿ ಪ್ರಾಮುಖ್ಯತೆ ಪಡೆದಿದೆ.
ಆಂಧ್ರಪ್ರದೇಶದ ಮೂಲಕ ತಮಿಳುನಾಡು ಅಲ್ಪ ಪ್ರಮಾಣದಲ್ಲಿ ನದಿ ನೀರನ್ನು ಚೆನ್ನೈನ ಕೆಲವು ಭಾಗಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ನದಿ ನೀರಿನ ಮೇಲೆ ಅವಲಂಬಿತವಾಗಿದೆ.
Related Articles
ಪೂರ್ಣ ಪ್ರಮಾಣದಲ್ಲಿ ನದಿಯ ನೀರನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಅದನ್ನು ಸಂಗ್ರಹ ಮಾಡುವ ವ್ಯವಸ್ಥೆ ಇಲ್ಲದೇ ಇರುವುದರಿಂದ ಶೇ.40ರಷ್ಟು ವ್ಯರ್ಥವಾಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ ಎಂಬ ಅಂಶವನ್ನೂ ಪ್ರಸ್ತಾಪಿಸಿ, ಆ ಪ್ರಮಾಣ ಸಂಗ್ರಹಿಸಲಾಗುತ್ತಿಲ್ಲ ಎಂದು ಹೇಳಿದೆ. ಆದರೆ, ತಜ್ಞರು ಅಭಿಪ್ರಾಯಪಡುವಂತೆ ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮದ ಅಂಶವನ್ನು ಆಯೋಗ ಸೇರಿಸಿಕೊಂಡಿಲ್ಲ.
ಕಷ್ಟವಾದೀತು:
ಮುಂದಿನ ವರ್ಷಗಳಲ್ಲಿ ಅಲ್ಪಾವಧಿಯಲ್ಲಿ ಪದೇ ಪದೆ ಮಳೆಯಾದರೆ ನದಿ ಪಾತ್ರದ ರಾಜ್ಯಗಳಿಗೆ ಪೂರ್ಣ ಪ್ರಮಾಣದ ನೀರು ಬಳಕೆ ಮಾಡುವಲ್ಲಿ ಕಷ್ಟವಾದೀತು. ನೀರು ಲಭ್ಯತೆಯ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದ್ದರೂ, ಅವುಗಳನ್ನು ಸಂಗ್ರಹಿಸಿ ಮುಂದಿನ ಬಳಕೆಗಾಗಿ ಇರಿಸುವ ವ್ಯವಸ್ಥೆಯ ಕೊರತೆ ಇದೆ. ಹಠಾತ್ ನೆರೆಯಿಂದ ಉಂಟಾಗುವ ಸಮಸ್ಯೆಯೂ ಇದಕ್ಕೆ ಕಾರಣ ಎಂದು ಜಲಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ.
2,048 ಅಡಿ ಮಾತ್ರ:
ಕರ್ನಾಟಕವನ್ನೂ ಸೇರಿದಂತೆ ಕೃಷ್ಣಾ ನದಿ ನೀರಿನ ವ್ಯಾಪ್ತಿಯಲ್ಲಿ ಇರುವ ರಾಜ್ಯಗಳು 2,048 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಮಾತ್ರ ಹೊಂದಿವೆ. ಪ್ರಸಕ್ತ ವರ್ಷವೇ ಶ್ರೀಶೈಲಂನಲ್ಲಿ ಇರುವ ಅಣೆಕಟ್ಟು ಐದು ಬಾರಿ ಭರ್ತಿಯಾಗಿದೆ. ಆದರೆ, ಅಲ್ಲಿಂದ ವಿದ್ಯುತ್ ಉತ್ಪಾದನೆಗಾಗಿ ನೀರನ್ನು ಬಳಕೆ ಮಾಡುತ್ತಿರುವುದರಿಂದ ಸಂಗ್ರಹ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂದು ಆಯೋಗ ಹೇಳಿದೆ.
144 ಟಿಎಂಸಿ ಅಡಿ- ಒಂದು ಜಲ ವರ್ಷದಲ್ಲಿ ಬಳಕೆಗೆ ಸಿಗುವ ನೀರಿನ ಪ್ರಮಾಣ
2,048 ಟಿಎಂಸಿ ಅಡಿ- ನಾಲ್ಕು ರಾಜ್ಯಗಳಲ್ಲಿನ ಸಂಗ್ರಹ ಪ್ರಮಾಣ
3, 144.41 ಟಿಎಂಸಿ ಅಡಿ- ಕೃಷ್ಣಾ ನದಿ ನೀರಿನ ಒಟ್ಟು ಪ್ರಮಾಣ
ಅ.1ರಿಂದ ಸೆ.30- ಒಂದು ಜಲ ವರ್ಷದ ಅವಧಿ.