Advertisement

5 ಟ್ರಿಲಿಯನ್‌ ಆರ್ಥಿಕತೆಯಲ್ಲಿ ರಾಜ್ಯದ ಪಾಲು ಗಣನೀಯ: ಕಪಿಲ್‌ ಮೋಹನ್‌

11:07 PM Oct 20, 2022 | Team Udayavani |

ಮಂಗಳೂರು: ಕಳೆದ ವರ್ಷ ಜಾರಿಗೆ ಬಂದಿರುವ ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆ ಮಹಾತ್ವಾಕಾಂಕ್ಷೆಯದಾಗಿದ್ದು, ಭಾರತವನ್ನು 5 ಟ್ರಿಲಿಯನ್‌ ಆರ್ಥಿಕತೆಯಾಗಿ ರೂಪಿಸುವ ಉದ್ದೇಶ ಹೊಂದಿದೆ. ಅದರಲ್ಲಿ ಕನಿಷ್ಠ 1 ಟ್ರಿಲಿಯನ್‌ ಆರ್ಥಿಕತೆಯ ಕೊಡುಗೆ ನಮ್ಮದಾಗಬೇಕೆಂದು ಈಗಾಗಲೇ ನಮ್ಮ ಮುಖ್ಯಮಂತ್ರಿಯವರು ಹೇಳಿದ್ದು, ಆ ನಿಟ್ಟಿನಲ್ಲಿ ಎಲ್ಲ ಯತ್ನ ಮಾಡಲಾಗುವುದು ಎಂದು ಕರ್ನಾಟಕ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಹೇಳಿದ್ದಾರೆ.

Advertisement

ನವಮಂಗಳೂರು ಬಂದರು ಪ್ರಾಧಿಕಾರ, ಮರ್ಮಗೋವಾ ಹಾಗೂ ಕೊಚ್ಚಿ ಬಂದರು ಪ್ರಾಧಿಕಾರಗಳ ಸಹಯೋಗದಲ್ಲಿ ಅ. 20, 21ರಂದು ಹಮ್ಮಿಕೊಂಡ ಪಿಎಂ ಗತಿ ಶಕ್ತಿ ಮಲ್ಟಿಮೋಡಲ್‌ ಮೆರಿಟೈಂ ರೀಜನಲ್‌ ಸಮ್ಮಿಟ್‌-2022 ಉದ್ಘಾಟನ ಸಮಾರಂಭದಲ್ಲಿ ಗುರುವಾರ ಅವರು ಅತಿಥಿಯಾಗಿ ವರ್ಚುವಲ್‌ ಮೂಲಕ ಪಾಲ್ಗೊಂಡು ಮಾತನಾಡಿದರು.

ಗತಿ ಶಕ್ತಿ ಯೋಜನೆಯು ಕರಾವಳಿಯ ಭವಿಷ್ಯದ ಅಭಿವೃದ್ಧಿಗೊಂದು ನೀಲ ನಕ್ಷೆಯಂತಿದೆ. ಸಾಗರೋತ್ತರ ವಲಯದಲ್ಲಿ ಆಗಬಹುದಾದ ಬೆಳವಣಿಗೆಗಳಿಗೆ ನಿರ್ಧಾರಕ ಆಂಶವಾಗಲಿದೆ ಎನ್ನುವುದನ್ನು ನಿರ್ಧರಿಸಲಿದೆ ಎಂದು ಅವರು ವಿವರಿಸಿದರು.

ಇಸ್ರೋ ನೆರವು :

ಮುಖ್ಯ ಅತಿಥಿಯಾಗಿದ್ದ ಕೇಂದ್ರ ಬಂದರು, ನೌಕಾಯಾನ ಸಚಿವಾಲಯದ ಮಲ್ಟಿಮೋಡಲ್‌ ಕನೆಕ್ಟಿವಿಟಿ ಕಮಿಟಿ ಚೇರ್‌ಮನ್‌ ವಿನೀತ್‌ ಕುಮಾರ್‌ ಮಾತನಾಡಿ, ಹಲವು ಇಲಾಖೆಗಳ ಸಮನ್ವಯದ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇಸ್ರೋ ನೆರವು ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

Advertisement

ಒಂದು ವರ್ಷದ ಹಿಂದೆ ಯೋಜನೆ ಜಾರಿಗೊಂಡಿದೆ. ಇನ್ನೂ ಎಲ್ಲ ಇಲಾಖೆಗಳು ಅದರಲ್ಲಿ ಪೂರ್ಣವಾಗಿ ತಯಾರಾಗಿಲ್ಲ, ಹಾಗಿರುವಾಗ ಎಲ್ಲವನ್ನೂ ಒಟ್ಟು ಸೇರಿಸಿಕೊಂಡು ಸಮನ್ವಯದಿಂದ ಕೆಲಸ ಮಾಡಲು ಬೇಕಾದ ಸವಾಲು ನಮ್ಮ ಮುಂದಿದೆ. ಮುಂದೆ ಗತಿಶಕ್ತಿ ಪೋರ್ಟಲ್‌ ಬಳಸಿಕೊಂಡು ಬಂದರುಗಳ ವಿವಿಧ ಯೋಜನೆಗಳ ಅನುಮೋದನೆಗಳನ್ನು ಸುಲಭವಾಗಿ ಪಡೆಯುವ ಸಾಧ್ಯತೆಯೂ ಇದೆ ಎಂದರು.

ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ಎ.ವಿ. ರಮಣ ಮಾತನಾಡಿ, ಪಿಎಂ ಗತಿಶಕ್ತಿ ಯೋಜನೆಯಡಿ ನೌಕಾಯಾನ ಮತ್ತು ಬಂದರು ಸಚಿವಾಲಯದಡಿ 101 ಯೋಜನೆಗಳನ್ನು 2024ರೊಳಗೆ ಪೂರ್ಣಗೊಳಿಸಬೇಕಾಗಿದೆ. ಇದರಲ್ಲಿ ನವಮಂಗಳೂರು ಬಂದರು ವ್ಯಾಪ್ತಿಯ ಬರ್ತ್‌ ನಂ. 14, ಬರ್ತ್‌ ನಂ. 17 ಮತ್ತು ಕುಳಾç ಮೀನುಗಾರಿಕ ಜೆಟ್ಟಿ ಕೂಡ ಸೇರಿಕೊಂಡಿದೆ. ಗತಿ ಶಕ್ತಿ ಯೋಜನೆಯ ಮೂಲಕ ನಮ್ಮ ಕೈಗಾರಿಕಾ ಸುಧಾರಣೆಯಾಗಿ ಚೀನ, ತೈವಾನ್‌ಗಳಿಗೆ ಸ್ಪರ್ಧೆಯೊಡ್ಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು.

ಕೊಚ್ಚಿ ಪೋರ್ಟ್‌ ಉಪಾಧ್ಯಕ್ಷ ವಿಕಾಸ್‌ ನಲ್ವಾರ್‌, ಮರ್ಮಗೊವಾ ಪೋರ್ಟ್‌ ಉಪಾಧ್ಯಕ್ಷ ಜಿ.ಪಿ. ರೈ, ಎನ್‌ಎಂಪಿಎ ಉಪಾಧ್ಯಕ್ಷ ಕೆ.ಜಿ. ನಾಥ್‌ ಹಾಜರಿದ್ದರು.

ಗೇಮ್‌ ಚೇಂಜರ್‌’ :

ರಾಜ್ಯದಲ್ಲಿರುವ ಕಿರು ಬಂದರುಗಳ ಸುಧಾರಣೆ, ಒಳನಾಡಿನೊಂದಿಗೆ ಸಂಪರ್ಕ ಉತ್ತಮಗೊಳಿಸುವ ಕೆಲಸ ಆಗಬೇಕಿದೆ. 14 ಪ್ರಮುಖ ರಸ್ತೆಗಳ ಸಂಪರ್ಕ ಆಗಬೇಕಿದೆ. ಅದರಲ್ಲಿ 9 ಇನ್ನೂ ಡಿಪಿಆರ್‌ ಹಂತದಲ್ಲಿವೆ. 8 ರೈಲು ಯೋಜನೆಗಳು ಪ್ರಕಟಗೊಂಡಿದ್ದು, 6 ಇನ್ನೂ ಪ್ರಿ ಡಿಪಿಆರ್‌ ಹಂತದಲ್ಲೇ ಇವೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ವಿಚಾರದಲ್ಲಿ ಆಶಾಭಾವ ಇದ್ದು, ಅದು ಜಾರಿಯಾದರೆ “ಗೇಮ್‌ ಚೇಂಜರ್‌’ ಎನ್ನಿಸಿಕೊಳ್ಳಲಿದೆ, ಕರಾವಳಿಯನ್ನು ಖನಿಜ ಸಂಪದ್ಭರಿತವಾದ ಉತ್ತರ ಕರ್ನಾಟಕದೊಂದಿಗೆ ಬೆಸೆಯಲಿದೆ ಎಂದು ಕಪಿಲ್‌ ಮೋಹನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next