Advertisement
ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೂ ಮೊದಲು ಮಾ.27 ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಮತ್ತಿತರರು ನಂದಿಗಿರಿಧಾಮದ ತಪ್ಪಲಿನಲ್ಲಿ ರೋಪ್ ವೇ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಈ ಹಿಂದಿನ ಸರ್ಕಾರ ಮಂಜೂರಾತಿ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದ ಹಲವು ಕಾಮಗಾರಿಗಳಿಗೆ ತಡೆಯೊಡ್ಡಿದ್ದು ಸದ್ದಿಲ್ಲದೇ ಕಾಮಗಾರಿ ಸ್ಥಗಿತಗೊಂಡಿದೆ.
Related Articles
Advertisement
ಶಂಕುಸ್ಥಾಪನೆಗೆ ಸೀಮಿತ : ರೋಪ್ ವೇ ನಿರ್ಮಾಣ ಸುಗಮ ಸಂಪರ್ಕದ ಜತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿ ಆಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್‌ನಲ್ಲಿ 480 ಬೈಕ್, 410 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್, ಫುಡ್ ಕೋರ್ಟ್, ಕುಡಿವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್, ವಿಶ್ರಾಂತಿ ಕೊಠಡಿ, ರೆಸ್ಟೋರೆಂಟ್, ಮಳಿಗೆಗಳು ಈ ಯೋಜನೆಯಡಿ ಬರುತ್ತವೆ. ಆದರೆ ಕಾಮಗಾರಿ ಕೇವಲ ಶಂಕುಸ್ಥಾಪನೆಗೆ ಸೀಮಿತವಾಗಿರುವುದು ಎದ್ದು ಕಾಣುತ್ತಿದೆ.
ನೀಲನಕ್ಷೆ ಸಿದ್ಧವಾಗಿತ್ತು : ರೋಪ್ ವೇ ಕಾಮಗಾರಿ ಜತೆಗೆ ಬೆಟ್ಟದ ಮೇಲಿನ ಟರ್ಮಿನಲ್ ನಲ್ಲಿ ಫುಡ್ ಕೋರ್ಟ್, ಕುಡಿವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ , ಟಿಕೆಟ್ ಕೌಂಟರ್, ವಿಶ್ರಾಂತಿ ಕೊಠಡಿ ನಿರ್ಮಾಣ ಆಗಲಿವೆ. ನಿರ್ಮಿತ ರೋಪ್ ವೇಗೆ ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣ ತಲುಪಲು ಅಂದಾಜು 14-15 ನಿಮಿಷ ಆಗಲಿದೆ. ಪ್ರತಿ ಗಂಟೆಗೆ ಅಂದಾಜು 1,000 ಜನರನ್ನು ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣಕ್ಕೆ ಕರೆದೊಯ್ಯಬಹುದು. 50 ಕ್ಯಾಬಿನ್ ಅಳವಡಿಸಲಾಗುತ್ತಿದ್ದು, ಪ್ರತಿ ಕ್ಯಾಬಿನ್‌ನಲ್ಲಿ 10 ಪ್ರಯಾಣಿಕರನ್ನು ಕರೆದೊಯ್ಯಬಹುದು. ಈ ಯೋಜನೆಯಿಂದಾಗಿ ನೇರವಾಗಿ 500 ಜನರಿಗೆ, ಪರೋಕ್ಷವಾಗಿ 5000 ಜನರಿಗೆ ಉದ್ಯೋಗಾವಕಾಶ ದೊರೆಯಲಿವೆ ಎಂದು ಯೋಜನೆ ನೀಲನಕ್ಷೆಯಲ್ಲಿ ತಿಳಿಸಲಾಗಿತ್ತು. ಆದರೆ, ಕಾಮಗಾರಿ ಶಂಕುಸ್ಥಾಪನೆ ಬಳಿಕ ಶರವೇಗದಿಂದ ನಡೆಯಬೇಕಿತ್ತಾದರೂ ಇದೀಗ ಸ್ಥಗಿತಗೊಂಡಿರುವುದು ಸಹಜವಾಗಿಯೇ ಪ್ರವಾಸಿಗರಲ್ಲಿ ಅಸಮಾಧಾನ ಮೂಡಿಸಿದೆ.
-ಕಾಗತಿ ನಾಗರಾಜಪ್ಪ