ಬೆಂಗಳೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ರಾಜ್ಯದ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ರವಿವಾರ ಸದಾಶಿವ ನಗರದಲ್ಲಿರುವ ತನ್ನ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸ್ಫೋಟ ವಿಚಾರವಾಗಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಘನತೆಗೆ ಧಕ್ಕೆ ತರುತ್ತಿದ್ದಾರೆ. ಆ ಮೂಲಕ ತಮ್ಮ ಗೌರವವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ತನಿಖೆ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ. ಬೆಂಗಳೂರಿನ ಗೌರವ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಈ ಬಗ್ಗೆ ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳು ಸರಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅವರ ಕಾಲದಲ್ಲಿ (ಬಿಜೆಪಿ ಅಧಿಕಾರಾವಧಿ) ಏನೆಲ್ಲ ಆಗಿದೆ ಎಂಬುದನ್ನು ಮರೆತಿದ್ದಾರೆ. ಅವರು ತಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ. ಈ ವಿಚಾರವಾಗಿ ರಾಜಕೀಯ ಮಾಡಲು ನನಗೆ ಇಚ್ಛೆ ಇಲ್ಲ. ಈ ಸಮಯದಲ್ಲಿ ದೇಶದ ಏಕತೆ, ಸಮಗ್ರತೆ ಹಾಗೂ ಶಾಂತಿ ಬಗ್ಗೆ ಅರಿವಿರಬೇಕು ಎಂದರು.
ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ. ಸಮಯ ಪ್ರಜ್ಞೆ, ತಮ್ಮ ಜವಾಬ್ದಾರಿಯ ಅರಿವು ಇಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.