ಬೆಂಗಳೂರು: ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರದ ಸಚಿವರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಗುರುವಾರ ದಿಲ್ಲಿಯಲ್ಲಿ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, 26 ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ.
ಜತೆಗೆ ಪಶ್ಚಿಮ ಘಟ್ಟಗಳ ಜನರ ರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ದಿಲ್ಲಿಯಲ್ಲಿ ಸಿದ್ದರಾಮಯ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿ ತಿರಸ್ಕರಿಸುವಂತೆ ಆ ಭಾಗದ ಶಾಸಕರು ಪಕ್ಷಾತೀತವಾಗಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ವರದಿ ಜಾರಿಗೊಳಿಸದೆ ಇರಲು ನಿರ್ಧರಿಸಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ರಾಜಕೀಯ ಉದ್ದೇಶವಿಲ್ಲದ, ಅದಕ್ಕೂ ಮೀರಿ ನಮ್ಮ ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳುವ ಸಭೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರು ಸದನದ ಒಳಗೆ ಹಾಗೂ ಹೊರಗೆ ಒಕ್ಕೊರಲಿನಿಂದ ಸೌಹಾರ್ದಯುತವಾಗಿ ದನಿ ಎತ್ತುವ ಅಗತ್ಯವನ್ನು ಹೇಳಿದ್ದೇವೆ. ನಾವು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರಬಹುದು. ಆದರೆ ಕರ್ನಾಟಕದ ಹಿತಾಸಕ್ತಿಯ ವಿಷಯ ಬಂದಾಗ ನಾವೆಲ್ಲರೂ ಒಂದೇ. ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು, ಕೇಂದ್ರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡುವುದು ಹಾಗೂ ಕೆಲವು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.
ಶಿರಾಡಿ ಘಾಟ್ ಕಾಮಗಾರಿ
ಶಿರಾಡಿ ಘಾಟ್‌ನಲ್ಲಿ 30 ಕಿ.ಮೀ.ನ ಎರಡು ಲೇನ್ ರಸ್ತೆಯನ್ನಾಗಿ ಪರಿವರ್ತಿಸಲು 2,580 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು ಇದನ್ನು ತ್ವರಿತಗೊಳಿಸಲು ಅನುಮೋದನೆ ನೀಡಿದಲ್ಲಿ ರಾಜ್ಯದ ವಾಣಿಜ್ಯ ಚಟುವಟಿಕೆಗಳನ್ನು ಮಂಗಳೂರು ಬಂದರಿಗೆ ರಫ್ತು ಮಾಡಲು ಉಪಯೋಗವಾಗುತ್ತದೆ. ಒಟ್ಟು 4,807 ಕಿ.ಮೀ. ರಸ್ತೆ ಅಭಿವೃದ್ಧಿ ಪ್ರಸ್ತಾವ ಕೇಂದ್ರ ಸರಕಾರದ ಮುಂದೆ ಇವೆ. ಇವುಗಳನ್ನು ಶೀಘ್ರವಾಗಿ ಬಗೆಹರಿಸಿಕೊಡುವುದು. ಮೀನುಗಾರಿಕೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿÇÉೆಯ ಮಾಜಳಿಯಲ್ಲಿ ಹೊಸದಾಗಿ ಮೀನುಗಾರಿಕೆ ಬಂದರನ್ನು ನಿರ್ಮಿಸುವುದು ಸೇರಿದಂತೆ 26 ಪ್ರಸ್ತಾವನೆ ಸಲ್ಲಿಸಲಾಯಿತು.