Advertisement

ಒಟ್ಟು 201 ಸಾಕ್ಷಿಗಳಿಂದ ಹೇಳಿಕೆ ಸಲ್ಲಿಕೆ: ಜಗದೀಶ್‌

01:20 AM Feb 07, 2020 | mahesh |

ಮಂಗಳೂರು: ನಗರದಲ್ಲಿ ಡಿಸೆಂಬರ್‌ 19ರಂದು ನಡೆದ ಅಹಿತಕರ ಘಟನೆ ಮತ್ತು ಪೊಲೀಸ್‌ ಗೋಲಿಬಾರ್‌ ಕುರಿತು ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್‌ ತನಿಖೆಯ ಭಾಗವಾಗಿ ಗುರುವಾರ ಮಂಗಳೂರು ಸಹಾಯಕ ಅಯುಕ್ತರ ಕೋರ್ಟ್‌ ಹಾಲ್‌ನಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಲಾಯಿತು.

Advertisement

ಗುರುವಾರ 75 ಮಂದಿ ಪ್ರಮಾಣಪತ್ರ ಸಮೇತ ಅಹವಾಲು ಸಲ್ಲಿಸಿದರು. ಗೋಲಿಬಾರ್‌ನಿಂದ ಸಾವನ್ನಪ್ಪಿದ ಜಲೀಲ್‌ನ ಸಂಬಂಧಿಕರು (ಮಹಿಳೆಯರು) ಕೂಡ ಸಾಕ್ಷಿ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಿದರು. ಮ್ಯಾಜಿಸ್ಟೀರಿಯಲ್‌ ತನಿಖೆಗೆ ನೇಮಕಗೊಂಡಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರು ಅಹವಾಲುಗಳನ್ನು ಸ್ವೀಕರಿಸಿ ದಾಖಲಿಸಿಕೊಂಡರು.

201 ಸಾಕ್ಷಿಗಳ ಹೇಳಿಕೆ
ಇದು ಮ್ಯಾಜಿಸ್ಟೀರಿಯಲ್‌ ತನಿಖೆಯ ಭಾಗವಾಗಿ ನಡೆದ 5ನೇ ಬೈಠಕ್‌ ಆಗಿದ್ದು, ಇಂದು 75 ಜನರ ಸಾಕ್ಷಿ ಸೇರಿದಂತೆ ಈವರೆಗೆ ಒಟ್ಟು 201 ಸಾಕ್ಷಿಗಳು ಹೇಳಿಕೆಗಳನ್ನು ನೀಡಿದಂತಾಗಿದೆ ಎಂದು ಜಗದೀಶ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಫೆ. 13ರಂದು ಪೊಲೀಸರ ಸಾಕ್ಷ್ಯ ಸಲ್ಲಿಸಲು ಸೂಚನೆ
ಇಂದು ಅಂತಿಮ ಅಹವಾಲು ಸಲ್ಲಿಕೆ ಎಂದು ಈ ಹಿಂದೆ ತಿಳಿಸಿದ್ದರೂ ಇದೀಗ ಹೈಕೋರ್ಟ್‌ನ ಸೂಚನೆಯಂತೆ ಫೆ. 13ರಂದು ಇನ್ನೊಂದು ಬೈಠಕ್‌ ನಡೆಸಲಾಗುವುದು. ಇಂದು ಮೌಖೀಕವಾಗಿ ಸಾಕ್ಷಿ ಹೇಳಿಕೆ ನೀಡಲು ಬಂದಿದ್ದ 8 ಮಂದಿಗೆ ಫೆ. 13ರಂದು ಅಫಿದವಿತ್‌ ಸಮೇತ ಬಂದು ಸಾಕ್ಷಿ ಹೇಳಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ.

ಪೊಲೀಸರು ತಮ್ಮ ಬಳಿ ಇರುವ ವೀಡಿಯೋ ಮತ್ತು ಸಿಸಿ ಕೆಮರಾದ ಸಾಕ್ಷಿಗಳನ್ನು ಅಂದು ಹಾಜರು ಪಡಿಸುವಂತೆ ಸೂಚಿಸಲಾಗಿದೆ. ಮಾಧ್ಯಮದವರು ಮತ್ತು ಇತರ ಸಾರ್ವಜನಿಕರು ಕೂಡ ವೀಡಿಯೋ ಸಾಕ್ಷ್ಯಗಳಿದ್ದರೆ ಸಲ್ಲಿಸಬಹುದು ಎಂದು ಜಗದೀಶ್‌ ವಿವರಿಸಿದರು. ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ಉಪಸ್ಥಿತರಿದ್ದರು.

Advertisement

ನಿರಪರಾಧಿಗಳಿಗೆ ಅನ್ಯಾಯ ಆಗದಿರಲಿ
ಗಲಭೆ ಪ್ರಕರಣದಲ್ಲಿ ನಿರಪರಾಧಿಗಳಿಗೆ ಅನ್ಯಾಯ ಆಗಬಾರದು. ಆದರೆ ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಘಟನೆ ಏಕೆ ನಡೆಯಿತು ಎನ್ನುವ ವಿಷಯ ಬೆಳಕಿಗೆ ಬರಬೇಕು ಎಂದು ಮುಸ್ಲಿಂ ಮುಖಂಡ ಡಿ.ಎಂ. ಅಸ್ಲಾಂ ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next