ಬೆಂಗಳೂರು: ಹುಬ್ಬಳ್ಳಿಯ ಬಿಜೆಪಿ ಪ್ರಮುಖರ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಪ್ರಕರಣ ವಿಚಾರಣೆಗೆ ನ್ಯಾಯಾಲಯ ಒಪ್ಪಿದ್ದೇ ಆದರೆ ರಾಜ್ಯ ರಾಜಕಾರಣ ಮತ್ತೊಂದು ಸ್ವರೂಪ ಪಡೆಯಲಿದೆ. ಸಮ್ಮಿಶ್ರ ಸರ್ಕಾರ ಪತನದ ಪ್ರಯತ್ನ, ಶಾಸಕರು ತಂಡೋಪತಂಡವಾಗಿ ರಾಜೀನಾಮೆ ಕೊಟ್ಟ ದಿನದಿಂದ ಕೇಂದ್ರ ಬಿಜೆಪಿ ನಾಯಕರು ಎಚ್ಚರಿಕೆ ಕೊಡುತ್ತಲೇ ಇದ್ದರೂ ಅನರ್ಹ ಶಾಸಕರಿಂದ ಅಂತರ ಕಾಯ್ದುಕೊಂಡೇ ಇದ್ದರೂ ಈ ಪ್ರಕರಣದ ಕಾರಣಕ್ಕೆ “ಸಂಕಷ್ಟ’ಕ್ಕೆ ಸಿಲುಕಿ ಹಾಕಿಕೊಳ್ಳುವಂತಾಗಿದೆ.
ನ.11ರೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಉಪ ಚುನಾವಣೆಯೇ ಮುಂದೂಡಿಕೆಯಾಗಬಹುದು. ಆಪರೇಷನ್ ಕಮಲ ವಿಚಾರದಲ್ಲಿ ಬಿಜೆಪಿಗೆ ಅಪವಾದ ಅಂಟಿಕೊಂಡು ಕೇಂದ್ರ ನಾಯಕರು ಮುಜುಗರಕ್ಕೊಳಗಾಗಬೇಕಾಗುತ್ತದೆ ಎಂಬುದು ಬಿಜೆಪಿ ನಾಯಕರ ಆತಂಕ. ಜತೆಗೆ ಪ್ರವಾಹ ಪೀಡಿತರಿಗೆ ಸ್ಪಂದನೆ ಸೇರಿ ನೂರು ದಿನದ ಸರ್ಕಾರದ ಸಾಧನೆ ವಿಡಿಯೋ ಬಾಂಬ್ ನುಂಗಿಹಾಕುವಂತಾಗಿ ಪ್ರತಿಪಕ್ಷಗಳ ಕೈಗೆ ಅಸ್ತ್ರ ಸಿಕ್ಕಿದೆ. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ಹುಬ್ಬಳ್ಳಿಯ ಸಭೆಯ ವಿವರ ತರಿಸಿಕೊಂಡಿದ್ದಾರೆ.
ರಾಜ್ಯ ನಾಯಕರಿಂದ ಸ್ಪಷ್ಟನೆ ಸಹ ಕೇಳಿದ್ದಾರೆಂದು ಹೇಳಲಾಗಿದೆ. ಕಾಂಗ್ರೆಸ್ ವತಿಯಿಂದ ಸುಪ್ರೀಂಕೋರ್ಟ್‌ಗೆ ಯಡಿಯೂರಪ್ಪ ಮಾತನಾಡಿರುವ ವಿಡಿಯೋ ಹಾಗೂ ಆಡಿಯೋ ಸಲ್ಲಿಸಲಾಗಿದೆ. ಜೆಡಿಎಸ್ ವತಿಯಿಂದಲೂ ಕಲಬುರಗಿಯಲ್ಲಿ ಶಾಸಕ ನಾಗನಗೌಡ ಕುಂದಕೂರ ಅವರ ಪುತ್ರನ ಜತೆ ಯಡಿಯೂರಪ್ಪ ಅವರು ಆಪರೇಷನ್ ಕಮಲ ವಿಚಾರದಲ್ಲಿ ನಡೆಸಿದ್ದ ಮಾತುಕತೆಯ ಆಡಿಯೋ ಸಹ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಈ ಎರಡೂ ವಿಚಾರಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಲು ಒಪ್ಪಿದರೆ ಸಮಸ್ಯೆಯಂತೂ ಖಚಿತ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ವಿಡಿಯೋದಲ್ಲಿ ಪ್ರಸ್ತಾಪಿಸಿರುವುದು ತಲೆನೋವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಇದೀಗ ಪದೇಪದೆ ಅಮಿತ್ ಶಾ ಉತ್ತರಿಸಲಿ ಎಂದು ಒತ್ತಾಯಿಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಂತೂ ಪ್ರಧಾನಿ ನರೇಂದ್ರಮೋದಿ ಅವರಿಗೂ ಇದು ಗೊತ್ತಿತ್ತು ಎಂದು ದೂರಿದ್ದಾರೆ. ಹೀಗಾಗಿ, ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುವಂತಾಗಿದೆ.
ಅನರ್ಹರಿಗೂ ಆತಂಕ: ವಿಡಿಯೋ ವಿದ್ಯಮಾನ ಪ್ರಮುಖವಾಗಿ ಅನರ್ಹತೆಗೊಂಡ ಶಾಸಕರಲ್ಲೂ ಆತಂಕ ಮೂಡಿಸಿದೆ. ತಮ್ಮ ಪ್ರಕರಣದ ವಿಚಾರಣೆ ಮುಗಿದಿದ್ದು ಇನ್ನೇನು ತೀರ್ಪು ಮಾತ್ರಬಾಕಿ. ತಮ್ಮ ಪರವಾಗಿಯೇ ತೀರ್ಪು ಬರಬಹುದೆಂಬ ಆಶಾ ಭಾವನೆಯಲ್ಲಿ ಉಪ ಚುನಾವಣೆ ಸಿದ್ಧತೆಯಲ್ಲಿದ್ದರು. ಇದೀಗ ನ್ಯಾಯಾಲಯ ವಿಡಿಯೋ-ಆಡಿಯೋ ಬಗ್ಗೆ ವಿಚಾರಣೆಗೆ ಒಪ್ಪಿದರೆ ಮತ್ತೆ ಉಪ ಚುನಾವಣೆ ಮುಂದೂಡಬಹುದು. ಆ ನಂತರ ಮುಂದೇ ನಾಗುವುದೋ ಎಂಬ ಆತಂಕ ಪಡುವಂತಾಗಿದೆ. ನ್ಯಾಯಾಲಯದ ತೀರ್ಪು ಪ್ರಕಟವಾಗುವ ಮುನ್ನವೇ ಬಿಜೆಪಿ ನಾಯಕರ ಭೇಟಿ, ಬಿಜೆಪಿ ಕಚೇರಿಗೆ ಭೇಟಿ, ಬಿಜೆಪಿ ನಾಯಕರು ಸಹ ಅನರ್ಹರ ಪರ ಅನುಕಂಪದ ಹೇಳಿಕೆಗಳೇ ಇದೀಗ ಮುಳುವಾದಂತಾಗಿದೆ. ಹೀಗಾಗಿ, ಇದೀಗ ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ ನೆಟ್ಟಿದೆ.
ಅಸ್ತ್ರವಾಗಿಸಿಕೊಂಡ ಪ್ರತಿಪಕ್ಷಗಳು: ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿರುವ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಲರ್ಟ್ ಆಗಿದ್ದು, ಬಿಜೆಪಿ ವಿರುದ್ಧ ಮುಗಿಬೀಳಲು ಅಸ್ತ್ರವಾಗಿಸಿಕೊಂಡಿದ್ದಾರೆ. ಮೊದಲಿನಿಂದಲೂ ಬಿಜೆಪಿ ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಪತನಗೊಳಿಸಿತು. ನಾವು ಹೇಳಿದ್ದು ಸತ್ಯ ಎಂಬುದು ಈಗ ವಿಡಿಯೋ ಹಾಗೂ ಹಿಂದೆ ಯಡಿಯೂರಪ್ಪ ಅವರ ಆಡಿಯೋದಿಂದಲೇ ಸಾಬೀತಾಗಿದೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಮತ್ತೊಂದೆಡೆ ಸಮ್ಮಿಶ್ರ ಸರ್ಕಾರ ಪತನಕ್ಕೆ ತಾವೇ ಕಾರಣ ಎಂಬ ಅಪವಾದ ತೊಡೆದುಹಾಕಿಕೊಳ್ಳಲು ಕಾಂಗ್ರೆಸ್ ನಾಯಕರೂ ಉತ್ಸಾಹದಿಂದಲೇ ಟೀಕಾಸ್ತ್ರಗಳನ್ನು ಬಿಡುತ್ತಿದ್ದಾರೆ.
* ಎಸ್.ಲಕ್ಷ್ಮಿನಾರಾಯಣ