ಬೆಳ್ತಂಗಡಿ: ರಾಜಕೀಯ ರಂಗದಲ್ಲಿ ವಸಂತ ಬಂಗೇರ ಅಪೂರ್ವ ವ್ಯಕ್ತಿ. ಕುವೆಂಪು ಅವರ ವಿಶ್ವಮಾನವ ಸಂದೇಶ ಅವರಿಗೆ ಒಪ್ಪುವಂತಹದು. ನಿಧನಹೊಂದುವವರೆಗೂ ಮಾನ ವೀಯ ವ್ಯಕ್ತಿಯಾಗಿಯೇ ಇದ್ದರು. ಅವರಿಲ್ಲದೆ ರಾಜ್ಯದ ರಾಜಕಾರಣಕ್ಕೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಜಿ ಶಾಸಕ ದಿ| ಕೆ. ವಸಂತ ಬಂಗೇರ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಗುರುವಾಯನಕೆರೆಯ ಮಂಜಿಬೆಟ್ಟು ಎಫ್.ಎಂ. ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.
ನಾನು ಮತ್ತು ವಸಂತ ಬಂಗೇರ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು. ಸುದೀರ್ಘ ಕಾಲದ ಸ್ನೇಹಿತರು. ಅವರು ಬಿಜೆಪಿ ಯಿಂದ ಗೆದ್ದಿದ್ದರೂ ನಾನು ವಿಶೇಷವಾಗಿ ಮೆಚ್ಚಿಕೊಂಡಿದ್ದೆ. ನೇರ ನಡೆ ನುಡಿಯವರು. ಬಡವರು ಹಾಗೂ ಸತ್ಯದ ಪರವಿದ್ದ ನಾಯಕ. ಯಾವುದೇ ಸನ್ನಿವೇಶದಲ್ಲೂ ಸತ್ಯವನ್ನು ನೇರವಾಗಿ ಹೇಳುವಂತಹ ವಿಶೇಷ ಗುಣ ಅವರದ್ದು. 2023ರಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಹೇಳಿದ್ದೆ, ಅವರು ಒಪ್ಪಿರಲಿಲ್ಲ, ಒಪ್ಪಿ ಗೆದ್ದಿದ್ದರೆ ನೂರಕ್ಕೆ ನೂರು ಮಂತ್ರಿಯಾಗುತ್ತಿದ್ದರು. ಅವರ ಕುಟುಂಬದ ನೋವಲ್ಲಿ ನಾನು ಪಾಲುದಾರನಾಗಿದ್ದೇನೆೆ ಎಂದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಜನಸಾಮಾ ನ್ಯರ ಧ್ವನಿಯಾಗಿದ್ದ ಬಂಗೇರರನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಅಧಿಕಾರ ಇದ್ದಾ ಗಲೂ ಇಲ್ಲದಾಗಲೂ ಒಂದೇ ವ್ಯಕ್ತಿತ್ವ ವನ್ನು ಹೊಂದಿದ್ದ ಅವರು ನಮ್ಮೆಲ್ಲರಿಗೂ ದಾರಿದೀಪ ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಸೋಲೂರು ಮಠದ ಪೀಠಾಧೀಶ ಬಲೊÂಟ್ಟು ಶ್ರೀ ವಿಖ್ಯಾತನಂದ ಸ್ವಾಮೀಜಿ, ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ, ಶಾಸಕ ಹರೀಶ್ ಪೂಂಜ, ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಸಚಿವರಾದ ಕೆ. ಗಂಗಾಧರ ಗೌಡ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಕೆ. ಪ್ರಭಾಕರ ಬಂಗೇರ, ಶಕುಂತಳಾ ಶೆಟ್ಟಿ, ರುಕ್ಮಯ ಪೂಜಾರಿ, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್., ಐವನ್ ಡಿ’ಸೋಜಾ, ಬಿಲ್ಲವ ಮಹಾಮಂಡಳದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ವಿ.ಪ. ಸದಸ್ಯ ಆಯನೂರು ಮಂಜುನಾಥ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಸವಣೂರು ಸೀತಾರಾಮ ರೈ, ಸಹೋದರ ರಮೇಶ್ ಬಂಗೇರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ, ಬಂಗೇರ ಕುಟುಂಬಿಕರ ಸಹಿತ ಗಣ್ಯರು ಉಪಸ್ಥಿತರಿದ್ದರು.
ಬಸ್ ನಿಲ್ದಾಣಕ್ಕೆ ವಸಂತ ಬಂಗೇರ ಹೆಸರು
ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕೆಎಸ್ಸಾರ್ಟಿಸಿ ಬಸ್ ತಂಗುದಾಣಕ್ಕೆ ಕೆ. ವಸಂತ ಬಂಗೇರ ಅವರ ಹೆಸರಿಡುವಂತೆ ಹಾಗೂ ಮುಖ್ಯವೃತ್ತದಲ್ಲಿ ಪುತ್ಥಳಿ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಮನವಿ ಸಲ್ಲಿಸಲಾಯಿತು. ಸರಕಾರದಿಂದ ಮಂಜೂರು ಮಾಡಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದರು.