Advertisement

ಅವ್ವನ ಉಂಡಿ, ಹೆಂಡ್ತಿ ಹೋಳಗಿ ಯಾಡೂ ಬಿಡಂಗಿಲ್ಲ!

09:33 AM Aug 29, 2021 | Team Udayavani |

ಹಬ್ಬದ ದಿನಾ ತವರು ಮನಿಗಿ ಹೋಗು ಖುಷ್ಯಾಗ ಯಜಮಾನ್ತಿ ಇದ್ಲು. ಅದರ ನಡಕ ಅವ್ವಾ ಹೊಲಕ್ಕ ಹೋಗಿ ಪೂಜಿ ಮಾಡಿ ಹಬ್ಬದ ಚರಗಾ ಚೆಲ್ಲಿ ಬರೋಗ ಅಂದ್ಲು. ಅವ್ವನ ಮಾತಿಗಿ ಒಪ್ಪಕೊಂಡು ಹೆಂಗೂ ಯಜಮಾನ್ತಿ ತವರು ಮನಿಗಿ ಹೋಗಾಕ ಭರ್ಜರಿ ಸೀರಿ ಉಟ್ಕೊಂಡು ರೆಡಿಯಾಗಿದ್ಲು ಹೊಲಕ್ಕ ಹೋಗಿ ಬರೂನು ಬಾ ಗಾಡ್ಯಾಗ ಹತ್ತಿಸಿಕೊಂಡು ಹೊಕ್ಕೇನಿ ಅಂತೇಳಿ ಪುಟ್ನಂಜನಂಗ ಗಾಡ್ಯಾಗ ಕುಂದ್ರಸ್ಕೊಂಡು ಹೊಲಕ ಹೋಗಿ ಚರಗಾ ಚೆಲ್ಲಿ ಮನಿಗಿ ಬಂದೆ.

Advertisement

ಹಬ್ಬದ ಊಟಾ ತವರು ಮನ್ಯಾಗ ಮಾಡ್ಸೂ ಪ್ಲಾನ ಯಜಮಾನ್ತಿದು, ಮನ್ಯಾಗ ಹಬ್ಟಾ ಮಾಡಿದ್ದು ಉಂಡು ಹೋಗು ಅಂತ ಅವ್ವನ ಹುಕುಂ. ನಮ್ಮದು ಒಂದು ರೀತಿ ಬೊಮ್ಮಾಯಿ ಸಾಹೇಬ್ರಂಗ ಯಡಿಯೂರಪ್ಪ ಹೈಕಮಾಂಡ್‌ ನಡಕ ಸಿಕ್ಕೊಂಡಂಗಾತು.

ಯಜಮಾನ್ತಿ ಯಡಿಯೂರಪ್ಪ ಸಾಹೇಬ್ರಂಗ ಅಧಿಕೃತ ಆದೇಶ ಮಾಡದಿದ್ರೂ ರಿಮೋಟ್‌ ಕಂಟ್ರೋಲ್‌ ಕೈಯಾಗ ಇರತೈತಿ. ಸ್ವಲ್ಪ ಹೆಚ್ಚು ಕಡಿಮಿ ಮಾಡಿದ್ರ ಇರೂ ಅಧಿಕಾರಾನೂ ಢಂ ಅಂತೇತಿ. ಹಂಗಂತ ಸಿಕ್ಕಿರೋ ಅಧಿಕಾರ ಕಳಕೊಳ್ಳಾಕ ಬೊಮ್ಮಾಯಿ ಸಾಹೇಬ್ರೇನ್‌ ದಡ್ಡರನ? ಅಕ್ಕಡೆ ಸಂಘ ದಕ್ಷ ಅನಕೋಂತನ ಇಕ್ಕಡೆ ಯಡಿಯೂರಪ್ಪ ಸಾಹೇಬ್ರಿಗೂ ಬೇಜಾರ ಆಗದಂಗ ಅವರ ಕಡಿಂದ ಬರೋ ಒಂದೊಂದ ಬಾಣಾನ ಆಕಾಶದಾಗ ಠುಸ್‌ ಅನಿಸಿ ಏನೂ ನಡದ ಇಲ್ಲಾ ಅನ್ನಾರಂಗ ಟಿವಿ ಕಾರ್ಯಕ್ರಮಕ್ಕ ಹೋಗಿ ಸಣ್ಣ ಹುಡುಗೂರು ಕೂಡ ಹಾಡು ಹೇಳಕೊಂತ, ನಾ ಕಾಮನ್‌ ಮ್ಯಾನ ಅಂತೇಳಿ ಒಂದ ತಿಂಗಳದಾಗ ಸೀದಾ ಎಲ್ಲಾರ ಅಡಗಿ ಮನಿಗೇ ರೀಚ್‌ ಆಗಿ ಬಿಟ್ರಾ.

ಸಿಎಂ ಸಾಹೇಬ್ರ ನಡವಳಿಕೆ ಮೂಲ ಬಿಜೆಪ್ಯಾರಿಗಿಂತ ಜೆಡಿಎಸ್‌ ಮಂದಿಗಿ ಭಾಳ ಖುಷಿ ಕೊಡಾಕತ್ತೇತಂತ. ಎಷ್ಟ ಆದ್ರೂ ತಮ್ಮ ಮಕ್ಕಳು ಬೆಳದಾಗ ತವರು ಮನ್ಯಾರಿಗೆ ಖುಷಿನ ಅಲ್ಲ. ಆನಂದ್‌ ಸಿಂಗ್‌ ಶಟಗೊಂಡು ಅಡ್ಯಾಡುದು ನೋಡಿ ಕಾಂಗ್ರೆಸ್ನಾರು ಇನ್ನೇನ ಮುಗದ ಹೋತ ಈ ಸರ್ಕಾರದ ಕತಿ ಅಂದ್ಕೊಂಡು ಈಗ ಇಲೆಕ್ಷನ್ನಿಗೆ ರೆಡಿ ಆಗಕತ್ತಿದ್ರಂತ. ಸಿದ್ದರಾಮಯ್ಯ ಸಾಹೇಬ್ರು ಓಲಿಂಪಿಕ್ಸ್‌ ಗೆ ಹೋಗಾಕ ಪೈಲ್ವಾನ್ರು ತಯಾರಿ ಮಾಡ್ಕೊಂಡಂಗ ಪ್ರಕೃತಿ ಚಿಕಿತ್ಸೆಗೆ ಹೋಗಿ ಫ‌ುಲ್‌ ಮೈ ಕೈಗೆ ಎಣ್ಣಿ ಹಚ್ಕೊಂಡು ಎಲೆಕ್ಷನ್ನಿಗೆ ರೆಡಿ ಆಗಾಕತ್ತಾರಂತ. ಇಕ್ಕಡೆ ಡಿಕೆ ಸಾಹೇಬ್ರು ಜೆಡಿಎಸ್‌ನ್ಯಾರ ಜೋಡಿ ದೋಸ್ತಿ ಐತಿ ಅನಕೋಂತನ ಅವರ ಪಾರ್ಟ್ಯಾಗಿನ ಅರ್ಧಾ ಡಜನ್‌ ಲೀಡರ್‌ ಗೋಳ್ನ ಆಫ‌ರೇಷನ್‌ ಮಾಡಾಕ ಪಟ್ಟಿ ಮಾಡ್ಕೊಂಡು ಕುಂತಾರಂತ. ಕಾಂಗ್ರೆಸ್ಸಿನ್ಯಾರು ಈಗ ಇಲೆಕ್ಷನ್‌ ಆದ್ರ ನಮ್ಮದ ಸರ್ಕಾರ ಬರತೇತಿ ಅಂತ ಫ‌ುಲ್‌ ಓವರ್‌ ಕಾನ್ಫಿಡೆನ್ಸ್‌ನ್ಯಾಗ ಇದ್ದಂಗ ಕಾಣತೈತಿ.

ಇದನ್ನೂ ಓದಿ:ಹಬ್ಬಗಳ ಮೇಲೆ ನಿಯಂತ್ರಣ ವಿಧಿಸಿ : ಕೇಂದ್ರ ಸರಕಾರದಿಂದ ರಾಜ್ಯಗಳಿಗೆ ಸೂಚನೆ

Advertisement

ಆದ್ರ ದೊಡ್ಡ ಗೌಡ್ರು ಅಷ್ಟು ಸುಲಭವಾಗಿ ಬಿಟ್ಟು ಕೊಡ್ತಾರ, ಶಿಷ್ಯನ ಸರ್ಕಾರಕ್ಕ ಏನೂ ಆಗೂದಿಲ್ಲ ಅಂತ ಈಗಾಗಲೇ ಅಭಯ ನೀಡ್ಯಾರು. ಇನ್ನ ಕುಮಾರಸ್ವಾಮಿ ಸಾಹೇಬ್ರು ಹೆಂಗರ ಮಾಡಿ ಇನ್ನೊಮ್ಮೆ ಸಿಎಂ ಆಗಬೇಕು ಅಂತೇಳಿ ಮಗನ ಕರಕೊಂಡು ಈಗ ಬಿಡದಿ ತೋಟದಾಗ ನರ್ಸರಿ ಹಾಕ್ಯಾರಂತ. ಆದ್ರ ಅವರಿಗೆ ಈ ಆಕಾಶವಾಣಿ ಯೊಳಗ ಕೃಷಿ ರಂಗ ಕಾರ್ಯಕ್ರಮದಾಗ ಹೇಳ್ತಾರಲ್ಲಾ. ಭತ್ತದ ಬೆಳೆಗೆ ಕಾಂಡ ಕೊರೆತದ ಹುಳುವಿನ ಕಾಟ ಅನ್ನಾರಂಗ ಪಕ್ಷಾ ಬಿಡಾರ ಕಾಟ ಜಾಸ್ತಿ ಇರೋದ್ರಿಂದ ಅವರು ಫ‌ಲಸು ಮತ್ತೂ ನಲವತ್ತು ಪರ್ಸೆಂಟ ಅಂತ ಅನಸ್ತೈತಿ. ಕಾಂಗ್ರೆಸ್‌ನ್ಯಾರ್ನ ಅಧಿಕಾರದಿಂದ ದೂರ ಇಡಾಕ ಅವರಿಗೆ ಅಷ್ಟ ಸಾಕು ಅಂತ ಅನಸ್ತೈತಿ ಅವರಿಗೆ. ತಮ್ಮ ಮುಂದಿನ ದೋಸ್ತಿ ಯಾರು ಅಂತ ಹೇಳಿ ಜೆಡಿಎಸ್‌ ನ್ಯಾರು ಈಗಾಗಲೇ ಮೈಸೂರು ಮೇಯರ್‌ ಆಯ್ಕೆ ವಿಚಾರದಾಗ ತೋರಿಸಿದಂಗ ಕಾಣತೈತಿ.

ಜೆಡಿಎಸ್ನಾವರು ಭವಿಷ್ಯಕ್ಕ ಅನುಕೂಲ ಅಕ್ಕಾರು ಅಂತೇಳಿ ಡಿ.ಕೆ. ಸಾಹೇಬ್ರು ದೋಸ್ತಿ ಕಂಟಿನ್ಯೂ ಮಾಡಾಕ ಟ್ರಾಯ್‌ ಮಾಡಾಕತ್ತಾರು ಅಂತ ಅನಸ್ತೈತಿ. ಆದ್ರ, ಪಕ್ಷದಾಗ ಸಿದ್ರಾಮಯ್ಯನ ಹಿಡಿತ ತಪ್ಪಸಿ ತಮ್ಮ ಕಂಟ್ರೋಲಿಗೆ ತೊಗೊಳ್ಳಾಕ ಹಳೆ ಮೈಸೂರು ಭಾಗದಾಗ ಜೆಡಿಎಸ್ನಾರ್ನ ಆಪರೇಷನ್‌ ಮಾಡಾಕ ಹೊಂಟಾರು ಹಿಂಗಾಗೇ ಅವರ ದೋಸ್ತಿಗೆ ಹೊಡತ ಕುಂದ್ರಾಕತ್ತೇತಿ ಅಂತ ಕಾಣತೈತಿ.

ಇದರ ನಡಕ ಯಡಿಯೂರಪ್ಪ ಸಾಹೇಬ್ರು ಮಗನ ಕರಕೊಂಡು ಮಾಲ್ಡೀವ್ಸ್‌ಗೆ ಹೋಗಿ ಬಂದಾರು. ಒಂದು ವಾರ ಸುಮ್ನ ಶೋಕಿಗಂತೂ ಹೋಗಿರುದಿಲ್ಲ. ಜೀವನದಾಗ ಫ‌ಸ್ಟ್‌ ಟೈಮ್‌ ಕೋಟಿ ರೂಪಾಯಿ ಕೊಟ್ಟು ಹೊಸ ಕಾರು ತೊಗೊಂಡಾರು ಅಂದ್ರ ಅದನ್ನೇನು ಗೋಡಾನ್ಯಾಗ ನಿಲ್ಸಾ ಕಂತೂ ತಂದಿರುದಿಲ್ಲ.

ಗಣಪತಿ ಹಬ್ಟಾ ಆದ ಮ್ಯಾಲ ರಾಜ್ಯ ಪ್ರವಾಸ ಮಾಡ್ತೇನಿ ಅಂತ ಮ್ಯಾಲಿಂದ ಮ್ಯಾಲ ಹೇಳಾ ಕತ್ತಾರು. ಆದ್ರ, ಅವರ ಜೋಡಿ ಕಟೀಲ್‌ ಸಾಹೇಬ್ರು ನಾನೂ ಬರ್ತೇನಿ ಅನ್ನಾಕತ್ತಾರಂತ. ಅದ ಏನೋ ಸಮಸ್ಯೆ ಆಗಾತಂಗ ಕಾಣತೈತಿ. ಕೋಟಿ ರೂಪಾಯಿ ಕೊಟ್ಟು ಕಾರ್‌ ಖರೀದಿ ಮಾಡಿ, ಮಗನ ಬಿಟ್ಟು ಕಟೀಲರ್ನ ಕರಕೊಂಡು ತಿರಗ್ಯಾಡಾಕ ಯಡಿಯೂರಪ್ಪ ಸಾಹೇಬ್ರಿಗೆ ಮನಸ್ಸಿದ್ದಂಗಿಲ್ಲ ಅನಸ್ತೈತಿ.

ಬೊಮ್ಮಾಯಿ ಸಾಹೇಬ್ರು ನೋಡಿದ್ರ ಕಟೀಲ್‌ ಲೀಡರ್‌ ಶಿಪ್‌ ನ್ಯಾಗ ಎಲ್ಲಾ ಇಲೆಕ್ಷನ್‌ ನಡಿತಾವು, ಜನಾ ಅವರ ನಾಯಕತ್ವಕ್ಕ ಕಾಯಾಕತ್ತಾರು ಅಂತ ಹೇಳಿದ್ದು ನೋಡಿದ್ರ ಅಮಿತ್‌ ಶಾ ಸಾಹೇಬ್ರು ಬೊಮ್ಮಾಯಿ ಸಾಹೇಬ್ರಿಗೆ ಬ್ಯಾರೇನ ಸಂದೇಶಕೊಟ್ಟು ಕಳಿಸಿದಂಗ ಐತಿ. ಹಂಗಂತ ಬೊಮ್ಮಾಯಿ ಸಾಹೇಬ್ರು ಯಡಿಯೂರಪ್ಪ ಸಾಹೇಬ್ರನ ನೆಗ್ಲೆಕ್ಟ್ ಮಾಡಿ ಏನರ ಮಾಡಾಕ್‌ ಹೋದ್ರೂನು ಕಷ್ಟಾನ. ಹಿಂಗಾಗೇ ನಾನೂ, ಅವ್ವನ ಮಾತಿಗೆ ಮರ್ಯಾದಿ ಕೊಟ್ಟು ಅರ್ಧಾ ಊಟಾ ನಮ್ಮನ್ಯಾಗ ಮಾಡಿ, ಯಜಮಾನ್ತಿಗೂ ಬೇಜಾರ ಮಾಡಬಾರದು ಅಂತೇಳಿ ಅಕಿ ತವರು ಮನಿಗೂ ಹೋಗಿ ಹೋಳಗಿ ಊಟಾ ಹೊಡದ್ನಿ.

ಶಂಕರ ಪಾಗೋಜಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next