Advertisement

ರಾಜ್ಯಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ‘ಕಸರತ್ತು’

04:24 AM Aug 01, 2020 | Hari Prasad |

ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಮೂವತ್ಮೂರು ತಿಂಗಳು ಇರುವಂತೆಯೇ ಕೋವಿಡ್ 19 ನಡುವೆಯೂ ಇದ್ದಕ್ಕಿ ದ್ದಂತೆ ಅಡ್ಜೆಸ್ಟ್‌ಮೆಂಟ್‌ ರಾಜಕಾರಣ ಆರೋಪ- ಪ್ರತ್ಯಾರೋಪಗಳು, ಕೈ ಕಾಲು ಹಿಡಿದಿದ್ದ ಪ್ರಸಂಗಗಳು ಬಹಿರಂಗಗೊಳ್ಳುತ್ತಿವೆ. ರಾಜ್ಯ ರಾಜಕಾರಣದ ‘ಪಲ್ಸ್‌’ ಗೊತ್ತಿರುವವರಿಗೆ ಪ್ರಸ್ತುತ ವಿದ್ಯಮಾನಗಳು ಅಚ್ಚರಿ ತರುವುದಿಲ್ಲ. ಆದರೆ, ರಾಜಕೀಯ ವಲಯ ಹಾಗೂ ಸಾರ್ವಜನಿಕರಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ನಿಜ.

Advertisement

ಇಂತಹ ವಿದ್ಯಮಾನ ತತ್‌ಕ್ಷಣದ ಅಗತ್ಯ ಅಲ್ಲವಾದರೂ, ಸಮಯ-ಸಂದರ್ಭಕ್ಕೆ ತಕ್ಕಂತೆ ಅಥವಾ ರಾಜಕಾರಣದ ಭಾಷೆಯಲ್ಲಿ ಹೇಳುವುದಾದರೆ ಕೆಲವೊಮ್ಮೆ ನಾವೂ ಇದ್ದೇವೆ, ನಮ್ಮ ಪ್ರಸ್ತುತತೆಯೂ ಇದೆ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಅವಶ್ಯಕ. ರಾಜ್ಯ ರಾಜಕೀಯದಲ್ಲಿ ಈಗ ಆಗುತ್ತಿರುವುದು ಅದೇ. ಇದೆಲ್ಲದರ ಹಿಂದಿನ ಅಜೆಂಡಾ ಒಂದೇ, ಅದು ಅಸ್ತಿತ್ವ ಕಾಪಾಡಿಕೊಳ್ಳುವ ಅನಿವಾರ್ಯತೆ.

ಕೋವಿಡ್ 19 ಸಂಕಷ್ಟ ಹಾಗೂ ಸವಾಲು ಎದುರಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಪ್ರತಿ ಪಕ್ಷಗಳು ಮುಳುಗಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಅಧಿಕಾರ ವಹಿಸಿಕೊಂಡಿದ್ದು, ಅಲ್ಲಿ ಕೇಳಿಬಂದ ಮಾತುಗಳು, ಆ ನಂತರದ ವಿದ್ಯಮಾನಗಳು ರಾಜ್ಯ ರಾಜಕೀಯದಲ್ಲಿ ಎಲ್ಲ ಪಕ್ಷಗಳ ನಾಯಕರು ಮೈ ಕೊಡವಿ ಎದ್ದೇಳಲು ಕಾರಣವಾಗಿದೆ.

ಏಕೆಂದರೆ, ಮೂರೂ ಪಕ್ಷಗಳು ಹಾಗೂ ಆ ಪಕ್ಷಗಳ ನಾಯಕರಿಗೆ ವೈಯಕ್ತಿಕವಾಗಿ ಹಾಗೂ ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇತ್ತೀಚೆಗಿನ ವಿದ್ಯಮಾನಗಳು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವಿನ ನೇರ ಹೋರಾಟದಂತೆ ಕಂಡುಬಂದರೂ ಆಡಳಿತಾರೂಢ ಬಿಜೆಪಿಗೂ ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಾಭ ಅಥವಾ ಪರಿಣಾಮ ಬೀರುತ್ತದೆ. ಹೀಗಾಗಿಯೇ, ರಾಜ್ಯಸಭೆ ಹಾಗೂ ವಿಧಾನಪರಿಷತ್‌ ಚುನಾವಣೆ, ವಿಧಾನಪರಿಷತ್‌ಗೆ ನಾಮಕರಣ ವಿಚಾರದಲ್ಲಿ ಅಳೆದು ತೂಗಿ ನಿರ್ಧಾರ ತೆಗೆದುಕೊಂಡಿದೆ.

ಪವರ್‌ ಸೆಂಟರ್‌
ಕಾಂಗ್ರೆಸ್‌ನಲ್ಲಿ ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮತ್ತೂಂದು ಕಡೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ‘ಪವರ್‌ ಸೆಂಟರ್‌’ಗಳು. ಜತೆಗೆ ಹೈಕಮಾಂಡ್‌ ಜತೆ ಉತ್ತಮ ಸಂಬಂಧ ಇರುವ ಮಲ್ಲಿಕಾರ್ಜುನ ಖರ್ಗೆ ಅವರೂ ಎನಿಟೈಂ ಎಮರ್ಜಿಂಗ್‌ ಲೀಡರ್‌. ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಪಕ್ಷ ಸಂಘಟನೆ ಹಾಗೂ ರಾಜ್ಯ ಸರಕಾರದ ವೈಫ‌ಲ್ಯಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಇತ್ತ ವಿಪಕ್ಷ  ನಾಯಕರೂ ಆಗಿರುವ ಸಿದ್ದರಾಮಯ್ಯ ಸಹ ತಮ್ಮದೇ ಶೈಲಿಯಲ್ಲಿ ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರು ಜತೆಗೂಡಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ನಾಯಕತ್ವಕ್ಕಾಗಿ ಪೈಪೋಟಿ ಇದ್ದಿದ್ದೇ. ಕೆಪಿಸಿಸಿ ಅಧ್ಯಕ್ಷರಾದವರು ಮುಂದಿನ ವಿಧಾನಸಭೆ ಚುನಾವಣೆ ನಂತರ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಸಹಜವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗುವುದರಿಂದ ಡಿ.ಕೆ.ಶಿವಕುಮಾರ್‌ ಅವರ ಹೋರಾಟದ ಹಿಂದೆ ಒಂದು ಗುರಿ ಇದೆ.

1994ರಲ್ಲಿ ಎಚ್‌.ಡಿ.ದೇವೇಗೌಡರು ಜನತಾದಳದಿಂದ ಮುಖ್ಯಮಂತ್ರಿಯಾಗಿದ್ದು, ಆ ನಂತರ 1999ರಲ್ಲಿ ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಲು ಒಕ್ಕಲಿಗ ಸಮುದಾಯ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತಿದ್ದು ಕಾರಣ. ಇದನ್ನು ಅರಿತೇ ಡಿ.ಕೆ.ಶಿವಕುಮಾರ್‌ ಅವರು ಸಮುದಾಯದ ಪೂರ್ಣ ಬೆಂಬಲದ ಜತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಕ್ರೊಢೀಕರಣದ ದೂರಾಲೋಚನೆ ಹೊಂದಿದ್ದಾರೆ.

ಸಿದ್ದರಾಮಯ್ಯ ಅವರು ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟ ಒಲಿದು ಬರುತ್ತದೆ ಎಂದರೆ ಬೇಡ ಎಂದು ಮತ್ತೂಬ್ಬರಿಗೆ ತ್ಯಾಗ ಮಾಡಿ ಸುಮ್ಮನಾಗುವುದಿಲ್ಲ, ರಾಜಕಾರಣದಲ್ಲಿ ಅಂತಹ ನಿರೀಕ್ಷೆಯೂ ಸಲ್ಲ. ಹೈಕಮಾಂಡ್‌ ಕೃಪಾಕಟಾಕ್ಷ ಇರುವ ಮಲ್ಲಿ ಕಾರ್ಜುನ ಖರ್ಗೆ ಅವರೂ ಮುಖ್ಯಮಂತ್ರಿ ಆಕಾಂಕ್ಷಿಯೇ. ಇದರ ಜತೆಗೆ ಇನ್ನೂ ಹಲವಾರು ಆಕಾಂಕ್ಷಿಗಳು ಇದ್ದಾರೆ.

ಅಸ್ತಿತ್ವದ ಪ್ರಶ್ನೆ
ಇನ್ನು, ಜೆಡಿಎಸ್‌ನಲ್ಲಿ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಒಕ್ಕಲಿಗ ಸಮುದಾಯದ ಮತಬ್ಯಾಂಕ್‌ ಕಾಂಗ್ರೆಸ್‌ನತ್ತ ಶಿಫ್ಟ್ ಆಗಬಹುದು ಎಂಬ ಸ್ವಲ್ಪ ಮಟ್ಟಿನ ಆತಂಕವೂ ಇದ್ದೇ ಇದೆ. ಈ ಕಾರಣಕ್ಕೆ ಎಚ್‌.ಡಿ.ಕುಮಾರಸ್ವಾಮಿ ಯವರು ಬಿಜೆಪಿ ಬಗ್ಗೆ ಸಾಫ್ಟ್ ಆಗಿ, ಕಾಂಗ್ರೆಸ್‌ ವಿರುದ್ಧ ಮುಗಿಬೀಳುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದ ನಮಗೆ ನಷ್ಟವಾಯಿತು ಎಂಬ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಹೇಳಿಕೆ ಮುಂದಿಟ್ಟುಕೊಂಡು ಕುಟುಕಲು ಶುರುವಿಟ್ಟುಕೊಂಡರು.

ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಲು ರಾಜ್ಯ ಕಾಂಗ್ರೆಸ್‌ ನಾಯಕರ ಪಾತ್ರ ಇಲ್ಲ, ಹಿಂದೆ ಮೈತ್ರಿ ಸರಕಾರ ಇದ್ದಾಗಲೂ ಇವರಿಂದ ಸಹಕಾರ ಸಿಕ್ಕಿರಲಿಲ್ಲ ಆದರೂ ದೇವೇಗೌಡರ ಭಾವನೆಗಳಿಗೆ ಕಟ್ಟುಬಿದ್ದು ಕಾಂಗ್ರೆಸ್‌ ಜತೆ ಸರಕಾರ ಮಾಡಲು ಒಪ್ಪಿದೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸಲು ನನ್ನ ತಲೆಗೆ ಕಟ್ಟಿ ನನ್ನನ್ನು ಎರಡನೇ ದರ್ಜೆ ಗುಮಾಸ್ತನ ರೀತಿಯಲ್ಲಿ ನಡೆಸಿಕೊಂಡರು, ಬಿಜೆಪಿಯಿಂದಲೂ ನನಗೆ ಆಫ‌ರ್‌ ಇತ್ತು, ಅಲ್ಲಿ ಹೋಗಿದ್ದರೆ ಭರ್ತಿ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದೆ. ನನ್ನ ಹೋರಾಟ ಇರುವುದೇ ಕಾಂಗ್ರೆಸ್‌ ವಿರುದ್ಧ, ಜೆಡಿಎಸ್‌ ಮುಗಿಸುವುದೇ ಕಾಂಗ್ರೆಸ್‌ನ ಉದ್ದೇಶ ಎಂಬ ಮಾತುಗಳನ್ನು ಆಡಿದ್ದಾರೆ.

ಇದಕ್ಕೆ ಸಾಥ್‌ ಎಂಬಂತೆ ದೇವೇಗೌಡರು, ನಾನು ರಾಜ್ಯಸಭೆಗೆ ಆಯ್ಕೆಯಾದಾಗ ರಾಜ್ಯ ಕಾಂಗ್ರೆಸ್‌ ನಾಯಕರು ನನಗೆ ವಿಷ್‌ ಸಹ ಮಾಡಲಿಲ್ಲ. ಮೈತ್ರಿ ಮಾಡಿಕೊಂಡಿದ್ದೆವು ಎಂಬ ಕಾರಣಕ್ಕೆ ಕಾಂಗ್ರೆಸ್‌ ಬಗ್ಗೆ ಸಾಫ್ಟ್ ಅಗತ್ಯವಿಲ್ಲ. ನಮ್ಮ ಪಾಡಿಗೆ ನಾವು ನಮ್ಮ ಪಕ್ಷ ಕಟ್ಟುತ್ತೇವೆ, ಅವರು ಅವರ ಪಕ್ಷ ಕಟ್ಟಿಕೊಳ್ಳಲಿ ಎಂದೂ ಹಳೇ ಸಂಬಂಧ ಕಡಿದುಕೊಂಡಂತೆ ಮಾತನಾಡಿದ್ದಾರೆ.

ಏಕಕಾಲದಲ್ಲಿ ಈ ಇಬ್ಬರ ಹೇಳಿಕೆಗಳಿಂದ ಮೇಲ್ನೋಟಕ್ಕೆ ಕಾಂಗ್ರೆಸ್‌ವಿರುದ್ಧ, ಬಿಜೆಪಿ ಪರ ಎಂಬಂತಾಗುವುದರ ಜತೆಗೆ ಬೇರೆ ರೀತಿಯ ಸಂದೇಶ ರವಾನೆಯಾಗಿದೆ. ಒಂದೊಮ್ಮೆ ಬಿಜೆಪಿ ಸರಕಾರಕ್ಕೆ ತೊಂದರೆಯಾದರೆ ಜೆಡಿಎಸ್‌ ಬೆನ್ನಿಗೆ ನಿಲ್ಲಬಹುದು ಎಂಬುದು ಹಾಗೂ ಮುಂದಿನ ವಿಧಾನಸಭೆ ಚುನಾವಣೆ ನಂತರ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಮತ್ತೆ ಕಿಂಗ್‌ ಮೇಕರ್‌ ಆಗಬಹುದು ಎಂಬ ಭಾವನೆ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಬಂದು ಅವರು ಬೇರೆ ಕಡೆ ಮುಖ ಮಾಡದಿರಲಿ, ಪಕ್ಷದ ಕಾರ್ಯಕರ್ತರು ಚದುರದಿರಲಿ ಎಂಬ ಆಶಯ. ಇದು ಅಸ್ತಿತ್ವ ಉಳಿಸಿ ಕೊಳ್ಳುವ ಜಾಣ್ಮೆ ನಡೆಯೂ ಹೌದು.

ಲಾಭದ ಲೆಕ್ಕಾಚಾರ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಜಂಗೀಕುಸ್ತಿಯಲ್ಲಿ ಬಿಜೆಪಿಯದ್ದು ಲಾಭದ ಲೆಕ್ಕಾಚಾರ. ಇಲ್ಲಿ ನಷ್ಟದ ಪ್ರಶ್ನೆಯೇ ಬರದು. ಏಕೆಂದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಟ್ಟುಗೂಡಿ ಲೋಕಸಭೆ ಚುನಾವಣೆ ಎದುರಿಸಿದಾಗಲೂ ನಷ್ಟವಾಗಲಿಲ್ಲ. ಇನ್ನು ಇಬ್ಬರೂ ಪರಸ್ಪರ ಗುದ್ದಾಡಿದರೆ ಬಿಜೆಪಿಗಂತೂ ಡಬಲ್‌ ಲಾಭ. ಹೀಗಾಗಿ, ಕಾಂಗ್ರೆಸ್‌ನ ಒಳಜಗಳ ಪ್ರಸ್ತಾಪಿಸಿ ಜೆಡಿಎಸ್‌ ಪರೋಕ್ಷ ಬೆಂಬಲಕ್ಕೆ ಅಭಿನಂದನೆ ಸಲ್ಲಿಸುತ್ತಲೇ ಬಿಜೆಪಿ ತಾನು ಮತ್ತಷ್ಟು ಗಟ್ಟಿಯಾಗಲು ಪ್ರಯತ್ನಿಸುತ್ತಿದೆ.

ವಿಧಾನಸಭೆ ಚುನಾವಣೆ ನಂತರ ರಚನೆಯಾದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಆಪರೇಷನ್‌ ಕಮಲ ಕಾರ್ಯಾಚರಣೆಯಡಿ 17 ಶಾಸಕರು ರಾಜೀನಾಮೆ ನೀಡಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆದು 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಸರಕಾರ ಭದ್ರಪಡಿಸಿಕೊಂಡಿದ್ದು ಒಂದು ಅಧ್ಯಾಯ.

ಆ ನಂತರ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡದ ಹಾಗೂ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ ಎಂ.ಟಿ.ಬಿ.ನಾಗರಾಜ್‌, ಎಚ್‌.ವಿಶ್ವನಾಥ್‌, ಆರ್‌.ಶಂಕರ್‌ಗೆ ವಿಧಾನಪರಿಷತ್‌ನಲ್ಲಿ ಅವಕಾಶ ಕಲ್ಪಿಸಿದ್ದು , ಬಿಜೆಪಿ ಸರಕಾರ ರಚನೆಗೆ ಕಾರಣರಾದ ಸಿ.ಪಿ.ಯೋಗೇಶ್ವರ್‌ಗೂ ವಿಧಾನಪರಿಷತ್‌ ಸದಸ್ಯತ್ವ ಕೊಡುಗೆಯಾಗಿ ಕೊಟ್ಟು ಸರಕಾರ ರಚನೆಗೆ ಕಾರಣಕರ್ತರಾದವರಿಗೆ ಋಣ ಸಂದಾಯ ಮಾಡಿ, ಯಡಿಯೂರಪ್ಪ ನಂಬಿದವರನ್ನು ಕೈ ಬಿಡುವುದಿಲ್ಲ ಬಿಜೆಪಿಯಲ್ಲಿ ಕೊಟ್ಟ ಮಾತು ತಪ್ಪುವುದಿಲ್ಲ ಎಂಬುದು ಸಂದೇಶ ರವಾನಿಸಿದರು. ಬಿಜೆಪಿಯಲ್ಲಿನ ಇತ್ತೀಚಿನ ನಡೆ ಹಾಗೂ ಕಾರ್ಯತಂತ್ರಗಳು ಹಳೇ ಮೈಸೂರು ಭಾಗದಲ್ಲಿ ಪಕ್ಷ ಗಟ್ಟಿಗೊಳಿಸುವುದೇ ಆಗಿದೆ.

ಕಾಂಗ್ರೆಸ್‌ನಲ್ಲಿದ್ದು ಡಿ.ಕೆ.ಶಿವಕುಮಾರ್‌ ಅವರಿಗೆ ಹತ್ತಿರವಾಗಿದ್ದು ಸಚಿವಗಿರಿ ಸಿಗದ ಕಾರಣ ಬಿಜೆಪಿಗೆ ಹೋಗಿ ವಿಧಾನಸಭೆ ಚುನಾವಣೆ ನಂತರ ತೆರೆಗೆ ಸರಿದಿದ್ದ ಸಿ.ಪಿ.ಯೋಗೇಶ್ವರ್‌ಗೆ ಪರಿಷತ್‌ ಸ್ಥಾನ ಸಿಗುತ್ತಿದ್ದಂತೆ ರಾಜಕೀಯವಾಗಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ರಾಮನಗರ ಜಿಲ್ಲಾ ರಾಜಕಾರಣ ದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವ ಕುಮಾರ್‌ ಅವರನ್ನು ವಿರೋಧಿಸಿಕೊಂಡೇ ರಾಜಕಾರಣ ಮಾಡುತ್ತಿರುವ ಸಿ.ಪಿ.ಯೋಗೇಶ್ವರ್‌ ನನಗೆ ಶಕ್ತಿ ತುಂಬಿದರೆ ಇಬ್ಬರನ್ನೂ ಎದುರು ಹಾಕಿಕೊಂಡು ಬಿಜೆಪಿಗೆ “ಅಸೆಟ್‌’ ಆಗಬಲ್ಲೆ ಎಂಬ ಸಂದೇಶ ಬಿಜೆಪಿ ರವಾನಿಸಿದ್ದಾರೆ. ಆದರೆ, ಬಿಜೆಪಿ ಇದನ್ನು ಹೇಗೆ ಸ್ವೀಕಾರ ಮಾಡುತ್ತದೆ, ಎಷ್ಟರ ಮಟ್ಟಿಗೆ ಅವಕಾಶ ಕೊಡುತ್ತದೆ ಎಂಬುದು ಈಗಲೇ ಗ್ರಹಿಸುವುದು ಕಷ್ಟ.

ತತ್‌ಕ್ಷಣಕ್ಕೆ ವಿಪಕ್ಷಗಳ ಮೇಲೆ ಒಮ್ಮೆಲೆ ಮುಗಿಬಿದ್ದು ಅಸ್ತ್ರ ಖಾಲಿ ಮಾಡಿಕೊಳ್ಳಲು ಬಿಜೆಪಿ ಹೋಗುವುದಿಲ್ಲ. ಏಕೆಂದರೆ, ಪ್ರವಾಹ, ಕೊರೊನಾ ಹಿನ್ನೆಲೆಯಲ್ಲಿ ವಿಪಕ್ಷಗಳೂ ಸರಕಾರದ ವಿರುದ್ಧ ದೊಡ್ಡಮಟ್ಟದಲ್ಲಿ ತಿರುಗಿಬಿದ್ದಿಲ್ಲ. ಮುಂದೆಯೂ ಹೀಗೇ ಎಂದು ಹೇಳಲಾಗದು. ಹೀಗಾಗಿ, ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡುತ್ತದೆ ಎಂಬ ವಿಶ್ಲೇಷಣೆಗಳೂ ಇವೆ.

ಸದ್ಯಕ್ಕೆ ಸರಕಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸುಸೂತ್ರವಾಗಿ ಮುಗಿಸಿ ನಂತರದಲ್ಲಿ ಎದುರಾಗಬಹುದಾದ ಅಸಮಾಧಾನ ಹೋಗಲಾಡಿಸಿ ಕೋವಿಡ್ 19 ಆರ್ಥಿಕ ಸಂಕಷ್ಟದಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದೇ ಬಿಜೆಪಿ ಮಟ್ಟಿಗೆ ಸವಾಲಾಗಿದೆ.

ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ
ರಾಜಕಾರಣ ಬೇರೆ, ವೈಯಕ್ತಿಕ ಸಂಬಂಧ ಬೇರೆ ಎಂಬ ಮಾತಿನ ಜತೆಗೆ ರಾಜಕಾರಣದಲ್ಲಿ ಯಾರೂ ಶಾಶ್ವತವಾಗಿ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದು ಅಂತಿಮ ಸತ್ಯ. ಬಿ.ಎಸ್‌.ಯಡಿಯೂರಪ್ಪ ಅವರ 78ನೇ ವರ್ಷದ ಅಭಿನಂದನಾ ಸಮಾರಂಭದಲ್ಲಿ  ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಪಾಲ್ಗೊಂಡು ಖುದ್ದು ಬಿಜೆಪಿ ನಾಯಕರಿಗೆ ಅಚ್ಚರಿ ಮೂಡಿಸಿದ್ದರು. ಯಡಿಯೂರಪ್ಪ ಹಾಗೂ ಸಿದ್ದ ರಾಮಯ್ಯ ಅವರು ಅಂದಿನ ವೇದಿಕೆಯಲ್ಲಿ ಆಡಿದ ಮಾತುಗಳು ನಾನಾ ವಿಶ್ಲೇಷಣೆಗಳಿಗೂ ಕಾರಣವಾಗಿತ್ತು. ಆ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯವರಿಗೂ ಆಹ್ವಾನ ಇತ್ತಾದರೂ ಪಾಲ್ಗೊಂಡಿರಲಿಲ್ಲ.

ಆದರೆ, ಕೋವಿಡ್ 19 ನಿರ್ವಹಣೆ ಹಾಗೂ ಪರಿಕರ ಖರೀದಿ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾ ಮಯ್ಯ ಅವರು ಸರಕಾರದ ಮೇಲೆ ಮುಗಿಬಿದ್ದಾಗ ಕುಮಾರ ಸ್ವಾಮಿ ಸರಕಾರದ ಪರ ಬ್ಯಾಟಿಂಗ್‌ ಮಾಡಿದರು. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಆಗಿನ ಸಂದರ್ಭಕ್ಕೆ ಮೈತ್ರಿ ಸರಕಾರ ಇದ್ದ ಕಾರಣ ಜೋಡೆತ್ತುಗಳಾಗಿದ್ದ ಎಚ್‌. ಡಿ. ಕುಮಾರ ಸ್ವಾಮಿ- ಡಿ.ಕೆ.ಶಿವಕುಮಾರ್‌ ಇದೀಗ ರಾಜಕೀಯವಾಗಿ ತಮ್ಮ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಏಕಾಂಗಿಯಾಗಿಯೇ ಹೋರಾಟಕ್ಕೆ ಇಳಿದಿದ್ದಾರೆ. ಇದರ ನಡುವೆ ಸಿ.ಪಿ. ಯೋಗೇಶ್ವರ್‌ ದಿಢೀರ್‌ “ರಂಗಪ್ರವೇಶ’ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದ ಒಂದು ಸ್ಯಾಂಪಲ್‌ ಅಷ್ಟೇ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next