Advertisement

ಟಿಪ್ಪು ಪೂಜಿಸುವ ಕಾಂಗ್ರೆಸ್‌ನ್ನು ಮನೆಗೆ ಕಳುಹಿಸಿ

06:00 AM Dec 22, 2017 | Team Udayavani |

ಹುಬ್ಬಳ್ಳಿ: ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್‌ನನ್ನು ಪೂಜೆ ಮಾಡುವ, ಗೋಮಾಂಸ ಭಕ್ಷಣೆಗೆ ಸರ್ವ ರೀತಿಯಿಂದ ಬೆಂಬಲ ನೀಡುವ ಕಾಂಗ್ರೆಸ್‌ ಪಕ್ಷವನ್ನು ಮನೆಗೆ ಕಳುಹಿಸುವ ಸಂಕಲ್ಪ ಮಾಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗುರುವಾರ ಇಲ್ಲಿನ ನೆಹರು ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ “ನವ ಕರ್ನಾಟಕಕ್ಕಾಗಿ ಪರಿವರ್ತನಾ ಯಾತ್ರೆ’ ಸಮಾವೇಶದಲ್ಲಿ ಮಾತನಾಡಿದ ಅವರು, ವೀರ ಹನುಮಾನ್‌, ಸದ್ಗುರು ಸಿದ್ಧಾರೂಢಸ್ವಾಮಿ, ವೀರರಾಣಿ ಚನ್ನಮ್ಮನ ನಾಡಿದು. ಸಂತರು, ವೀರಯೋಧರನ್ನು ಸ್ಮರಿಸುವ, ಪೂಜಿಸುವ ಬದಲು ಟಿಪ್ಪು ಸುಲ್ತಾನ್‌ ಪೂಜೆ ಮಾಡುವುದನ್ನು ದೇಶಪ್ರೇಮಿಯಾಗಿರುವ ಯಾರೊಬ್ಬರೂ ಸಹಿಸಲ್ಲ ಎಂದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಪೂಜೆ ಮಾಡುತ್ತಿದೆ. ಸ್ವತಃ ಮುಖ್ಯಮಂತ್ರಿಯವರೇ ಗೋಮಾಂಸ ಭಕ್ಷಕರಿಗೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ವೈಯಕ್ತಿಕ ನಿಲುವುಗಳು ಏನೇ ಇದ್ದರೂ ಸಾರ್ವಜನಿಕ ಸ್ಥಾನದಲ್ಲಿರುವ ವ್ಯಕ್ತಿ ಜನರ ಭಾವನೆಗಳನ್ನು ಗೌರವಿಸುವ ಕೆಲಸ ಮಾಡಬೇಕು. ಅದನ್ನು ಮಾಡುವಲ್ಲಿ ಸಿದ್ದರಾಮಯ್ಯ ಸಂಪೂರ್ಣವಾಗಿ ವಿಫ‌ಲರಾಗಿದ್ದಾರೆ. 

ಕರ್ನಾಟಕದ ಹೆಸರು ಬಂದರೆ ಇಡೀ ದೇಶಕ್ಕೆ ಹನುಮಾನ್‌ ಪ್ರೇರಣೆ ಆಗುತ್ತದೆ. ದುರಂತವೆಂದರೆ ಈ ನೆಲದಲ್ಲೇ ಟಿಪ್ಪುವಿನಂತಹವರ ಪೂಜೆ ನಡೆಯುತ್ತದೆ ಎಂದರೆ ಹೇಗೆ? ಇಂತದ್ದಕ್ಕೆ ಅವಕಾಶ ನೀಡಿದವರನ್ನು ಅಧಿಕಾರದಿಂದ ಖಾಲಿ ಮಾಡಿಸಿ. ರಕ್ಷಕರೇ ಭಕ್ಷಕರಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದ ಸದ್ಯದ ಸ್ಥಿತಿ ಸಾಕ್ಷಿ. ಇಲ್ಲಿ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ರೈತರ ಆತ್ಮಹತ್ಯೆ, ಮಹಿಳೆಯರಿಗೆ ಸುರಕ್ಷತೆ ಇಲ್ಲದ ಸ್ಥಿತಿಯಿದೆ. ತಪ್ಪು ವ್ಯಕ್ತಿಗಳ ಕೈಗೆ ಅಧಿಕಾರ ನೀಡಿದರೆ ಏನೆಲ್ಲ ಆಗಬಹುದು ಎಂಬುದನ್ನು ಇಲ್ಲಿ ನೋಡಬಹುದಾಗಿದೆ ಎಂದು ಕಿಡಿ ಕಾರಿದರು.

ಜಾತಿ ಒಡೆಯುವುದು ದೇಶದ್ರೋಹಕ್ಕೆ ಸಮ:
ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ವರ್ಚಸ್ಸು ಹೆಚ್ಚಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದ್ದರೆ, ಕಾಂಗ್ರೆಸ್‌ ಕರ್ನಾಟಕ, ಗುಜರಾತ್‌ ಇನ್ನಿತರ ಕಡೆಗಳಲ್ಲಿ ಜಾತಿ ಒಡೆಯುವ ಕಾರ್ಯದಲ್ಲಿ ತೊಡಗಿದೆ. ಗುಜರಾತ್‌ನಲ್ಲಿ ಜಾತಿ ಒಡೆಯುವ ಯತ್ನಕ್ಕೆ ಅಲ್ಲಿನ ಜನತೆ ಮನ್ನಣೆ ನೀಡಲಿಲ್ಲ. ಕರ್ನಾಟಕದಲ್ಲೂ ಅದು ಮುಂದುವರಿಯುವ ವಿಶ್ವಾಸವಿದೆ. ಜಾತಿ ಒಡೆಯುವ ಕಾರ್ಯ ದೇಶದ್ರೋಹಕ್ಕೆ ಸಮ. ಜನ ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ಕೆ ಅವಕಾಶ ನೀಡಬಾರದು. ಜಾತಿ ಒಡೆಯುವ ಕಾರ್ಯವನ್ನು ಗುಜರಾತ್‌ ಜನತೆ ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲೂ ಇಂತಹ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸುವ ಅವಶ್ಯಕತೆ ಇದೆ ಎಂದು ಆದಿತ್ಯನಾಥ ಹೇಳಿದರು.

Advertisement

ರೈತರ ಎಲ್ಲ ಸಾಲ ಮನ್ನಾ ಮಾಡಲಿ:
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಸುಮಾರು 86 ಲಕ್ಷ ರೈತರ ಅಂದಾಜು 36 ಸಾವಿರ ಕೋಟಿ ರೂ. ಬೆಳೆ ಸಾಲ ಮನ್ನಾ ಮಾಡಿದೆ. ಸಹಕಾರಿ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿ ಎಲ್ಲ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿದೆ. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ತಡೆಗೆ ಇಲ್ಲಿನ ಕಾಂಗ್ರೆಸ್‌ ಸರ್ಕಾರವೂ ಎಲ್ಲ ಸಾಲ ಮನ್ನಾ ಮಾಡಬೇಕು. ಆದರೆ, ಕಾಂಗ್ರೆಸ್‌ ಪಕ್ಷ ಜನರ ಹಣ ಲೂಟಿ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎಂಬುದನ್ನು ಚಿಂತಿಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲಾಗದು:
2018ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲಾಗದು. ಕರ್ನಾಟಕದಲ್ಲಿ ಮುಂದಿನ ಸರ್ಕಾರ ಬಿಜೆಪಿ ಸರ್ಕಾರವಾಗುವುದು ಖಚಿತ . ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ತನ್ನ ಸರ್ಕಾರ ಎಂದು ಹೇಳಿಕೊಳ್ಳುವುದಕ್ಕೆ ಉಳಿದಿರುವುದು ಉತ್ತರದಲ್ಲಿ ಪಂಜಾಬ್‌, ದಕ್ಷಿಣದಲ್ಲಿ ಕರ್ನಾಟಕ. 2018ರಲ್ಲಿ ಕಾಂಗ್ರೆಸ್‌ ಕರ್ನಾಟಕವನ್ನೂ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ಮುರಳಿಧರರಾವ್‌, ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ಜಿ.ಎಂ.ಸಿದ್ದೇಶ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಆರ್‌.ಅಶೋಕ ಹಾಗೂ ಇತರ ಮುಖಂಡರು ಹಾಜರಿದ್ದರು.

ಸಿದ್ದರಾಮಯ್ಯ ಪಟ್ಟ ಖಾಲಿ ಮಾಡಿ ಸಲು ಜನರ ಧ್ವನಿ ಎದ್ದಿದೆ. ರಾಹುಲ್‌ ಹೋದ ಕಡೆಯಲ್ಲೆಲ್ಲ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಕರ್ನಾಟಕಕ್ಕೂ ಅವರು ಬರಲಿದ್ದು, ಇಲ್ಲಿಯೂ ಕಾಂಗ್ರೆಸ್‌ ಮನೆ ಸೇರಲಿದೆ. ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುತ್ತೇವೆ.
– ಮುರಳೀಧರ ರಾವ್‌
ಬಿಜೆಪಿ ರಾಜ್ಯ ಉಸ್ತುವಾರಿ

ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ,ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜಪ ಮಾಡದಿದ್ದರೆ ನಿದ್ದೆ ಬರುವುದಿಲ್ಲ.
– ಈಶ್ವರಪ್ಪ, ವಿ.ಪ. ಪ್ರತಿಪಕ್ಷ ನಾಯಕ

ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ಹಾಗೂ ಕೋಮು ಗಲಭೆಗಳಲ್ಲಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಇನ್ನೂ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ ಹಂತಕರ ಬಂಧನವಾಗಿಲ್ಲ.
– ಜಗದೀಶ ಶೆಟ್ಟರ್‌
ವಿಧಾನಸಭೆ ಪ್ರತಿಪಕ್ಷದ ನಾಯಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪಗಿಂತ ಸಚಿವ ಎಂ.ಬಿ.ಪಾಟೀಲ ದೊಡ್ಡ ನಾಯಕರು ಎಂದಿದ್ದಾರೆ. ಹೋರಾಟ ಹಿನ್ನೆಲೆಯಿಂದ ಬಂದ ಯಡಿಯೂರಪ್ಪ, ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬಂದು ರಾಜಕೀಯಕ್ಕಿಳಿದ ಪಾಟೀಲರಿಗೆ
ಎಲ್ಲಿಂದೆಲ್ಲಿಗೆ ಹೋಲಿಕೆ?

– ಪ್ರಹ್ಲಾದ ಜೋಶಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next