Advertisement
ಸಾಫ್ಟ್‌ವೇರ್‌ನಲ್ಲಿ ಟಿಸಿಎಸ್ ಮೂಲಕ ತನ್ನದೇ ಖ್ಯಾತಿ ಹೊಂದಿರುವ ಟಾಟಾ ಕಂಪೆನಿ ಹಾರ್ಡ್‌ವೇರ್ ಉತ್ಪನ್ನಗಳತ್ತ ಆಸಕ್ತಿ ತೋರಿದ್ದು, ಇದರ ಭಾಗವಾಗಿ ಸೆಮಿಕಂಡಕ್ಟರ್ ಘಟಕ ಆರಂಭಕ್ಕೆ ಮುಂದಾಗಿದೆ. ಇದಕ್ಕಾಗಿ ದಕ್ಷಿಣದ ಮೂರು ರಾಜ್ಯಗಳಲ್ಲಿ ಯಾವುದಾದರು ಒಂದು ರಾಜ್ಯದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಂಪೆನಿ ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ಸರಕಾರಗಳೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದೆ.
Related Articles
Advertisement
ಆಕರ್ಷಣೆ ಇಚ್ಛಾಶಕ್ತಿ ಅವಶ್ಯ: ಟಾಟಾ ಕಂಪೆನಿಯವರು ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷೆ ಯುನಿಟ್ ಸ್ಥಾಪನೆ ನಿಟ್ಟಿನಲ್ಲಿ ಕರ್ನಾಟಕ, ತೆಲಂಗಾಣ, ತಮಿಳುನಾಡು ರಾಜ್ಯ ಸರಕಾರಗಳೊಂದಿಗೆ ಮಾತುಕತೆ ನಡೆಸಿದ್ದು, ಯಾವ ರಾಜ್ಯದಲ್ಲಿ ನೆಲೆಗೊಳ್ಳುವುದು ಎಂಬುದನ್ನು ಇನ್ನು ಖಚಿತ ಪಡಿಸಿಲ್ಲ ಎನ್ನಲಾಗುತ್ತಿದೆ.
ಘಟಕ ಆರಂಭಕ್ಕೆ ಭೂಮಿ, ಮೂಲಭೂತ ಸೌಕರ್ಯ, ರಿಯಾಯಿತಿ, ಸಬ್ಸಿಡಿ, ಉದ್ಯಮಸ್ನೇಹಿ ಹಾಗೂ ಶಾಂತಿಯುತ ವಾತಾವರಣದ ಸ್ಪಷ್ಟ ಭರವಸೆ ಎಲ್ಲಿ ದೊರೆಯುತ್ತದೆಯೋ ಅಲ್ಲಿ ಸಾಮಾನ್ಯವಾಗಿ ಉದ್ಯಮ ವಲಯ ನೆಲೆಗೊಳ್ಳಲು ಇಚ್ಛಿಸುತ್ತವೆ. ಇದೀಗ ಟಾಟಾ ಕಂಪೆನಿಯೂ ಮೂರು ರಾಜ್ಯಗಳೊಂದಿಗೆ ಚರ್ಚಿಸಿದ್ದು, ಎಲ್ಲಿ ತನಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆಯೋ ಅಲ್ಲಿ ಉದ್ಯಮ ಆರಂಭಿಸಲು ಮುಂದಾಗಲಿದೆ.
ಉದ್ಯಮಗಳನ್ನು ಸೆಳೆಯುವ ನಿಟ್ಟಿನಲ್ಲಿ ಈ ಹಿಂದೆ ಅವಿಭಜಿತ ಆಂಧ್ರಪ್ರದೇಶ ಆಕ್ರಮಣಕಾರಿ ನೀತಿ ಅನುಸರಿಸುವ ಮೂಲಕ ಉದ್ಯಮಗಳನ್ನು ತನ್ನತ್ತ ಸೆಳೆಯುತ್ತಿತ್ತು. ಆಂಧ್ರದಿಂದ ಪ್ರತ್ಯೇಕಗೊಂಡ ತೆಲಂಗಾಣ ರಾಜ್ಯ ಇದೀಗ ಅದೇ ಆಕ್ರಮಕಾರಿ ನೀತಿಗೆ ಮುಂದಾಗಿದ್ದು, ಉದ್ಯಮಗಳನ್ನು ಆಷರ್ಕಿಸುವ ನಿಟ್ಟಿನಲ್ಲಿ ವಿವಿಧ ಸೌಲಭ್ಯ, ರಿಯಾಯ್ತಿಗಳನ್ನು ನೀಡತೊಡಗಿದೆ. ತಮಿಳುನಾಡು ಸಹ ತನ್ನದೇ ನಿಟ್ಟಿನಲ್ಲಿ ಉದ್ಯಮಗಳ ಆಕರ್ಷಣೆಗೆ ಮುಂದಾಗಿದ್ದು, ಇತ್ತೀಚೆಗೆ ಹೊಸೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಉದ್ಯಮ ಹೂಡಿಕೆ ಆಕರ್ಷಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸುವ ಮೂಲಕ ಗಮನ ಸೆಳೆಯುತ್ತಿದೆ.
ಉದ್ಯಮಸ್ನೇಹಿ, ಉದ್ಯಮಿಗಳ ನೆಚ್ಚಿನ ತಾಣ ಕರ್ನಾಟಕ, ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೇವೆ. ಆದರೆ, ನಿರೀಕ್ಷಿತ ಪ್ರಮಾಣ ಉದ್ಯಮಗಳ ಆಗಮನ ಆಗುತ್ತಿಲ್ಲ. ಇನ್ವೆಸ್ಟ್ ಕರ್ನಾಟಕ, ಜಾಗತಿಕ ಹೂಡಿಕೆದಾರರ ಸಮಾವೇಶಗಳನ್ನು ಮಾಡಿದರೂ ಒಪ್ಪಂದಕ್ಕೆ ಸಹಿ ಹಾಕಿದ ಅದೆಷ್ಟೋ ಕಂಪೆನಿಗಳು ಇನ್ನು ರಾಜ್ಯ ಕಡೆ ಮುಖ ಮಾಡಿಲ್ಲ. ನೂತನ ಕೈಗಾರಿಕಾ ನೀತಿ(2020-25)ಬೆಂಗಳೂರು ಹೊರತಾದ ಪ್ರದೇಶದಲ್ಲಿ ಉದ್ಯಮಕ್ಕೆ ಉತ್ತೇಜನ ಎಂದಿದ್ದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. 2009-10ರ ಸುಮಾರಿಗೆ ಬಿಜೆಪಿ ಸರಕಾರದ ಹೊಸತನದಲ್ಲಿ ನ್ಯಾನೋ ಕಾರು ತಯಾರಿಕಾ ಘಟಕ ಹುಬ್ಬಳ್ಳಿ-ಧಾರವಾಡಕ್ಕೆ ಇನ್ನೇನು ಬಂದೇ ಬಿಟ್ಟಿತು ಎಂಬ ಅಬ್ಬರ ತೋರಿ ಬಂದಿತ್ತು. ಉದ್ಯಮದಲ್ಲಿ ದೊಡ್ಡ ನೆಗೆತ ಕಂಡಿದೆ ಎಂದೇ ಬಿಂಬಿಸಲಾಗಿತ್ತು. ಆದರೆ, ಭೂಮಿ ಲಭ್ಯತೆ ಇನ್ನಿತರ ಕಾರಣದಿಂದ ಅದು ಬರಲೇ ಇಲ್ಲ. ಇದಾದ ನಂತರ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಿರೋ ಮೋಟಾರ್ ಹುಬ್ಬಳ್ಳಿ-ಧಾರವಾಡಕ್ಕೆ ಬರಲಿದೆ ಈ ನಿಟ್ಟಿನಲ್ಲಿ ಮಹತ್ವದ ಮಾತುಕತೆಗಳು ಆಗಿವೆ ಎಂದು ಹೇಳಲಾಗಿತ್ತಾದರೂ, ಅದು ಕೂಡ ಬರಲೇ ಇಲ್ಲ. ಇದೀಗ ರಾಜ್ಯಕ್ಕೆ ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ ಯುನಿಟ್ ಆರಂಭದ ಚರ್ಚೆ ನಡೆದಿದ್ದು, ರಾಜ್ಯ ಸರಕಾರ ಪೈಪೋಟಿಯಲ್ಲಿರುವ ಎರಡು ರಾಜ್ಯಗಳಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಕಂಪೆನಿಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಇತ್ಛಶಕ್ತಿ ಪ್ರದರ್ಶಿಸಬೇಕಿದೆ. ಇದರಿಂದ ರಾಜ್ಯದಲ್ಲಿ ಉದ್ಯಮದ ನೆಗೆತ ಜತೆಗೆ ಉದ್ಯೋವಕಾಶ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ದೊರೆಯಲಿದೆ.
ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷೆ ಯುನಿಟ್ ಸ್ಥಾಪನೆಗೆ ಕಂಪೆನಿ ರಾಜ್ಯ ಸರಕಾರದೊಂದಿಗೆ ಚರ್ಚಿಸಿದೆ. ನಮ್ಮ ರಾಜ್ಯವಲ್ಲದೆ ನೆರೆಯ ತೆಲಂಗಾಣ, ತಮಿಳುನಾಡು ಜತೆಗೂ ಚರ್ಚಿಸಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದ್ದು, ಟಾಟಾ ಸೆಮಿಕಂಡಕ್ಟರ್ ರಾಜ್ಯದಲ್ಲಿ ನೆಲೆಗೊಳ್ಳುವ ಕುರಿತು ಆಶಾಭಾವನೆ ಹೊಂದಿದ್ದೇವೆ. –ಮುರುಗೇಶ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ
–ಅಮರೇಗೌಡ ಗೋನವಾರ