Advertisement
ಮುಂಗಾರು ಮಾರುತಗಳ ತೀವ್ರತೆ ಹೆಚ್ಚಾಗಿದ್ದರೆ ಒಂದೇ ದಿನಕ್ಕೆ ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸುತ್ತದೆ. ಮಾರುತಗಳ ತೀವ್ರತೆ ಕಡಿಮೆಯಿದ್ದರೆ ಹೆಚ್ಚಿನ ಅವಧಿ ಕೇರಳದಲ್ಲಿಯೇ ಉಳಿಯುತ್ತದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಖಾಸಗಿ ಹವಾಮಾನ ಮಾಪನ ಸಂಸ್ಥೆ ಸ್ಕೈಮೆಟ್ ಪ್ರಕಾರ ಜೂ. 4ಕ್ಕೆ ಮುಂಗಾರು ಕೇರಳ ಪ್ರವೇಶಿಸಲಿದೆ. ಆದರೆ ಭಾರತೀಯ ಹವಾಮಾನ ಸಂಸ್ಥೆ ಬುಧವಾರ ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಜೂ.6ರಂದು ಕೇರಳಕ್ಕೆ ಪ್ರವೇಶಿಸಲಿದೆ ಎಂದಿದೆ. ಆದರೂ ಮುಂಗಾರು ಪ್ರವೇಶದ ಅವಧಿ ನಾಲ್ಕು ದಿನ ಆಚೀಚೆ ಆಗಲೂಬಹುದು ಎಂದೂ ಹವಾಮಾನ ಇಲಾಖೆ ಹೇಳಿದೆ. ಮೇ 18-19ರ ವೇಳೆಗೆ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಬಂಗಾಲ ಕೊಲ್ಲಿ ಭಾಗಗಳಲ್ಲಿ ಮಾನ್ಸೂನ್ ಮೂಡುವ ಚಿಹ್ನೆಗಳು ಕಾಣಿಸಿಕೊಳ್ಳಲಿದ್ದು, ಕೇರಳ ಕರಾವಳಿಗೆ ಜೂನ್ 6ರ ಹೊತ್ತಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್1ಕ್ಕೆ ಕೇರಳಕ್ಕೆ ಮುಂಗಾರು ಆಗಮಿಸುತ್ತಿತ್ತು. ಈಗ ಐದರಿಂದ ಆರು ದಿನ ತಡವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. 2014, 2015 ಹಾಗೂ 2016ರಲ್ಲೂ ಮಾನ್ಸೂನ್ ಪ್ರವೇಶ ನಾಲ್ಕೈದು ದಿನ ವಿಳಂಬವಾಗಿತ್ತು. ಸಾಮಾನ್ಯವಾಗಿ ಮಾನ್ಸೂನ್ ಆಗಮನದ ಸಮಯವೂ ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ ಸರಕಾರಿ ಹವಾಮಾನ ಇಲಾಖೆಯ ಪ್ರಕಾರ ಶೇ. 96ರಷ್ಟು ಅಂದರೆ, ಸಾಮಾನ್ಯಕ್ಕಿಂತ ಸ್ವಲ್ಪವೇ ಕಡಿಮೆ ಮಳೆಯಾಗಲಿದೆ ಎಂದು ಅಂದಾಜು ಮಾಡಿದ್ದರೆ, ಖಾಸಗಿ ಸಂಸ್ಥೆ ಸ್ಕೈಮೆಟ್ ಶೇ. 93ರಷ್ಟು ಮಳೆಯಾಗಲಿದೆ ಎಂದಿದೆ.
Related Articles
ಬೆಂಗಳೂರು: ಈ ಬಾರಿಯೂ ಮಳೆ ಕೊರತೆಯ ಮುನ್ಸೂಚನೆ ಅರಿತಿರುವ ರಾಜ್ಯ ಸರಕಾರ ಮುಂದಿನ ಎರಡು ವರ್ಷಗಳಿಗೆ ಅನ್ವಯವಾಗುವಂತೆ ಮೋಡ ಬಿತ್ತನೆ ಕಾರ್ಯ ನಡೆಸಲು ತೀರ್ಮಾನಿಸಿದ್ದು, ಜೂನ್ ಕೊನೆಯ ವಾರದಲ್ಲಿ ಮೋಡ ಬಿತ್ತನೆ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
Advertisement
ರಾಜ್ಯದ ಬರ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಿನಲ್ಲಿ ಮಳೆಯ ಅಭಾವ ನೋಡಿಕೊಂಡು ಮೋಡ ಬಿತ್ತನೆ ಕಾರ್ಯ ಆರಂಭಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಮೋಡಗಳ ಕೊರತೆಯಿಂದ ಬಿತ್ತನೆ ಕಾರ್ಯಕ್ಕೆ ಸೂಕ್ತ ಸ್ಪಂದನೆ ದೊರೆಯುತ್ತಿರಲಿಲ್ಲ. ಈ ಬಾರಿ ಮುಂಗಾರು ದುರ್ಬಲವಾಗಿದೆ ಎಂಬ ವರದಿ ಆಧರಿಸಿ, ರಾಜ್ಯ ಸರಕಾರ ಈಗಾಗಲೇ ಮೋಡ ಬಿತ್ತನೆಗೆ ತೀರ್ಮಾನ ಮಾಡಿದ್ದು, ಎರಡು ವರ್ಷಗಳ ಅವಧಿಗೆ 88 ಕೋಟಿ ರೂಪಾಯಿ ವೆಚ್ಚದ ಮೋಡ ಬಿತ್ತನೆ ಯೋಜನೆಗೆ ತೀರ್ಮಾನಿಸಲಾಗಿದ್ದು, ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
2017ರಲ್ಲಿ ವರ್ಷಧಾರೆ ಹೆಸರಿನಲ್ಲಿ ಕೈಗೊಂಡ ಮೋಡ ಬಿತ್ತನೆ ಕಾರ್ಯ ಯಶಸ್ವಿಯಾಗಿದ್ದು, ಇದನ್ನು ಶಾಶ್ವತ ಕಾರ್ಯಕ್ರಮವನ್ನಾಗಿ ಮಾಡುವಂತೆ ತಜ್ಞರು ವರದಿ ನೀಡಿದ್ದಾರೆ. ಮೋಡ ಬಿತ್ತನೆಗೆ ಬೆಂಗಳೂರು, ಗದಗ ಹಾಗೂ ಸುರಪುರದಲ್ಲಿ ರಾಡಾರ್‌ಗಳನ್ನು ಅಳವಡಿಸಲಾಗಿದ್ದು, ಐಐಎಸ್‌ಸಿ, ಚೆನ್ನೆ „ ಹಾಗೂ ಪುಣೆಯ ಐಐಟಿಎಂ ತಜ್ಞರು, ಎನ್‌ಎಎಲ್ ಮುಖ್ಯಸ್ಥರು, ಐಎಂಡಿ ಮುಖ್ಯಸ್ಥರು, ಬೆಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣ ಅಧಿಕಾರಿಗಳ ಸಹಕಾರದೊಂದಿಗೆ ಯೋಜನೆ ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.