ಸಿರುಗುಪ್ಪ: ರಾಜ್ಯವನ್ನು ಕಾಂಗ್ರೆಸ್ ನಾಯಕರು ಎಟಿಎಂ ರೀತಿ ಬಳಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಕರ್ನಾಟಕವನ್ನು ಲೂಟಿ ಮಾಡಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ಟೀಕಿಸಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಭಯೋತ್ಪಾದಕರು ಕಾಣುತ್ತಿಲ್ಲ, ಭಾರತ ಬದಲಾಗುತ್ತಿದೆ. ಹೊಸ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಗ್ಗೆ ನಾವು ಯಾವುದೋ ಒಂದು ಕುಟುಂಬಕ್ಕೆ ವರದಿ ನೀಡಬೇಕಿಲ್ಲ. ಕೇವಲ ಸಾರ್ವಜನಿಕರಿಗೆ ವರದಿ ನೀಡುತ್ತೇವೆ ಎಂದರು.
ದೇಶ ಮತ್ತು ರಾಜ್ಯದಲ್ಲಿನ ಡಬಲ್ ಎಂಜಿನ್ ಸರಕಾರದಿಂದ ಕರ್ನಾಟಕ ಅಭಿವೃದ್ಧಿಯ ಹಾದಿ ಹಿಡಿದಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಬಡವರು ದುಡ್ಡಿಲ್ಲದೇ ಉತ್ತಮ ಚಿಕಿತ್ಸೆ ಪಡೆಯಲು ಅನುಕೂಲವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಹೆಚ್ಚಳ ಮಾಡಲು ಮುಂದಾಗಿರುವುದು ಉತ್ತಮ ನಿರ್ಧಾರ ಎಂದರು.