Advertisement

ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳ

02:53 PM Jan 15, 2020 | Suhan S |

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕು ಕೇಂದ್ರದಲ್ಲಿ ಫೆ. 14ರಿಂದ 16ರ ವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ಯುವಜನ ಮೇಳ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧ್ಯಕ್ಷತೆ ಹಾಗೂ ರೋಣ ಶಾಸಕ ಕಳಕಪ್ಪ ಬಂಡಿ ಅವರ ಉಪಸ್ಥಿತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

2008- 09ರಲ್ಲಿ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳ ಯಶಸ್ವಿಯಾಗಿ ಜರುಗಿತ್ತು. ಇದೀಗ ಎರಡನೇ ಬಾರಿಗೆ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳ ಸಂಘಟಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ದಕ್ಷತೆಯಿಂದ ಕಾರ್ಯ ನಿರ್ವಹಿಸುವಂತೆ ನಿರ್ದೇಶಿಸಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ರಾಜ್ಯ ಸರ್ಕಾರ ಈ ಬಾರಿಯ ರಾಜ್ಯಮಟ್ಟದ ಯುವ ಜನ ಮೇಳ ಜರುಗಿಸುವ ಅವಕಾಶವನ್ನು ಜಿಲ್ಲೆಯ ಗಜೇಂದ್ರಗಡ ಪಟ್ಟಣಕ್ಕೆ ನೀಡಿದೆ. ಗಜೇಂದ್ರಗಡ ಎಪಿಎಂಸಿ ಆವರಣದ ಮುಂಭಾಗದ ಬಯಲಲ್ಲಿ 3 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಯುವಜನ ಮೇಳಕ್ಕೆ ನಾಲ್ಕು ವಿಭಾಗಗಳಿಂದ ಆಗಮಿಸುವ ಸ್ಪರ್ಧಾಳುಗಳಿಗೆ ಸಾರಿಗೆ, ವಸತಿ, ಊಟೋಪಹಾರ, ಸ್ಪರ್ಧಾ ಕಾರ್ಯಕ್ರಮಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಜವಾಬ್ದಾರಿಯುತವಾಗಿ ಸಂಬಂಧಿತ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ವೇದಿಕೆ, ಉದ್ಘಾಟನಾ ಸಮಾರಂಭ, ಆಹ್ವಾನ ಮುಂತಾದ ವಿಷಯಗಳಿಗೆ ಹೆಚ್ಚಿನ ಗಮನ ಹರಿಸಬೇಕು. ವಸತಿ ಕುರಿತಂತೆ ಸ್ಪರ್ಧಾಳುಗಳಿಗೆ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಲು ಶಾಸಕರು ಸೂಚಿಸಿದರು.

ಸಾರಿಗೆಗಾಗಿ ಜಿಲ್ಲಾಡಳಿತ ಶಾಲಾ ಬಸ್‌ಗಳನ್ನು ಒದಗಿಸಲು, ನೋಂದಣಿ ಸಂದರ್ಭದಲ್ಲಿ ಸ್ಪರ್ಧಾಳುಗಳಿಗೆ ಗುರುತಿನ ಚೀಟಿ, ಕಾರ್ಯಕ್ರಮ ಮಾಹಿತಿ, ವಸತಿ, ಸಾರಿಗೆ ವ್ಯವಸ್ಥೆ ಕುರಿತು ಮಾಹಿತಿ ನೀಡಬೇಕು ಎಂದು ಶಾಸಕ ಕಳಕಪ್ಪ ಬಂಡಿ ತಿಳಿಸಿದರು.

Advertisement

ರಾಜ್ಯಮಟ್ಟದ ಯುವಜನ ಮೇಳದ ಸ್ವಾಗತ, ಸಂಘಟನಾ, ಹಣಕಾಸು, ವೈದ್ಯಕೀಯ, ಸ್ಮರಣ ಸಂಚಿಕೆ, ಸಾರಿಗೆ, ಪ್ರಚಾರ, ನೋಂದಣಿ, ನ್ಯಾಯ ನಿರ್ಣಯ, ಸ್ವತ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ, ಪೆಂಡಾಲ್‌, ಲೈಟಿಂಗ್‌, ಊಟೋಪಚಾರ,

ವಸತಿ, ಆಹ್ವಾನ ಪತ್ರಿಕೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ವಿಜೇತರಿಗೆ ನಗದು ಬಹುಮಾನ ಸೇರಿದಂತೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್‌, ಜಿಪಂ ಉಪ ಕಾರ್ಯದರ್ಶಿ ಬಿ.ಕಲ್ಲೇಶ್‌ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಯುವಕ-ಯುವತಿಯರಿಗೆ ಸ್ಪರ್ಧೆ :  ರಾಜ್ಯಮಟ್ಟದ ಯುವಜನ ಮೇಳದಲ್ಲಿ ಯುವಕರಿಗಾಗಿ 15 ಸ್ಪರ್ಧೆಗಳು ಹಾಗೂ ಯುವತಿಯರಿಗಾಗಿ 11 ಸ್ಪರ್ಧೆಗಳು ಜರುಗಲಿದ್ದು, ಒಟ್ಟು 260 ಯುವತಿಯರು ಹಾಗೂ 524 ಯುವಕರು, 15 ಜನ ನಿರ್ಣಾಯಕರು, 30 ಜನ ತಂಡದ ವ್ಯವಸ್ಥಾಪಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ್‌ ಸಭೆಗೆ ಮಾಹಿತಿ ನೀಡಿದರು. ಯುವಕ ಯುವತಿಯರಿಗಾಗಿ ಭಾವಗೀತೆ, ಲಾವಣಿ ಪದ, ರಂಗಗೀತೆ ಮತ್ತು ಏಕಪಾತ್ರಾಭಿನಯ ಜರುಗಲಿವೆ. ಗುಂಪು ಸ್ಪರ್ಧೆಗಳಾದ ಗೀಗಿ ಪದ, ಕೋಲಾಟ, ಜಾನಪದ ನೃತ್ಯ, ಭಜನೆ, ಜಾನಪದ ಗೀತೆಗಳು ಏರ್ಪಡಲಿವೆ. ಯುವತಿಯರಿಗಾಗಿ ರಾಗಿ ಜೋಳ ಬೀಸುವ ಒನಕೆ ಪದ ಹಾಗೂ ಸೋಬಾನ ಪದಗಳ ಗುಂಪು ಸ್ಪರ್ಧೆ ನಡೆಯಲಿವೆ. ಯುವಕರಿಗಾಗಿ ವೀರಗಾಸೆ, ಡೊಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಚರ್ಮವಾದ್ಯ ಸ್ಪರ್ಧೆಗಳು ನಡೆಯಲಿದ್ದು, ವಿಭಾಗವಾರು ಆಯ್ಕೆಗೊಂಡ ಯುವ ಸ್ಪರ್ಧಾಳುಗಳು ಇವುಗಳಲ್ಲಿ ಭಾಗವಹಿಸುವರು.

Advertisement

Udayavani is now on Telegram. Click here to join our channel and stay updated with the latest news.

Next