ದಾವಣಗೆರೆ: ರಾಜ್ಯ, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಹಿರಿಯರ ಮತ್ತು ಕಿರಿಯರು, ಪುರುಷರ ಮತ್ತು ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆ ಅ. 31 ಮತ್ತು ನ. 1 ರಂದು ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಖಜಾಂಚಿ, ನಗರಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಗೆದ್ದವರನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ರಾಜ್ಯ ಮಟ್ಟದ ಹಿರಿಯರ ಮತ್ತು ಕಿರಿಯರು, ಪುರುಷರ ಮತ್ತು ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಡಾ| ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಡಾ|ಎ.ಎಚ್. ಶಿವಯೋಗಿಸ್ವಾಮಿ, ಮೇಯರ್ ಎಸ್.ಟಿ. ವೀರೇಶ್, ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್ ಇತರರು ಭಾಗವಹಿಸುವರು ಎಂದರು.
ರಾಷ್ಟ್ರೀಯ ವೇಟ್ ಲಿಫ್ಟರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಸ್.ಎಚ್. ಆನಂದೇಗೌಡ್ರು ಮಾತನಾಡಿ ವೇಟ್ ಲಿಫ್ಟಿಂಗ್ ನ ಪುನರುಜ್ಜೀವನದ ಉದ್ದೇಶದಿಂದ ಐರನ್ ಗೇಮ್‌ಗಳ ತವರೂರು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. 10 ವಿಭಾಗದಲ್ಲಿ ನಡೆಯುವ ಸ್ಪರ್ಧೆಯ ವಿಜೇತರನ್ನು ಡಿಸೆಂಬರ್‌ನಲ್ಲಿ ತಮಿಳುನಾಡಿನ ನಾಗರಕೋಯಿಲ್‌ನಲ್ಲಿ ನಡೆಯುವ ರಾಷ್ಟ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಒಲಂಪಿಕ್ಸ್ ಕ್ರೀಡೆಯಾಗಿರು ವೇಟ್ ಲಿಫ್ಟಿಂಗ್ ನತ್ತ ಯುವ ಸಮೂಹವನ್ನು ಹೆಚ್ಚು ಸೆಳೆಯಬೇಕು. ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಸಜ್ಜುಗೊಳಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ 13 ರಿಂದ 17 ವರ್ಷದವರಿಗಾಗಿ ಯೂತ್ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಾವಣಗೆರೆಯಲ್ಲಿ ಎರಡನೇ ಬಾರಿ ಯೂತ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.
ಜಿಲ್ಲಾ ವೇಟ್ ಲಿಫ್ಟರ್ ಅಸೋಸಿಯೇಷನ್ ಅಧ್ಯಕ್ಷ ಎಚ್. ಮಹೇಶ್, ಕಾರ್ಯಾಧ್ಯಕ್ಷ ಎಸ್.ಕೆ. ಪಾಂಡುರಾಜ್, ಎಚ್. ಬಸವರಾಜ್, ಕೆ.ಎನ್. ಹನುಮಂತಪ್ಪ, ರಾಘವೇಂದ್ರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಉತ್ತಮ ಸಾಧನೆ ತೋರಿದವರನ್ನು ಗುರುತಿಸಿ ಹೆಚ್ಚಿನ ತರಬೇತಿಗೆ ಸಾಯ್ ಗೆ ಕಳಿಸಿಕೊಡಲಾಗುವುದು. ತರಬೇತಿಗೆ ಆಯ್ಕೆಯಾಗುವಂತಹ ಪ್ರತಿಯೊಬ್ಬರಿಗೆ ಸರ್ಕಾರ 5 ಲಕ್ಷ ರೂ. ನೀಡಲಿದೆ. ದಾವಣಗೆರೆಯಲ್ಲಿ 49, 49-55, 55-61, 67-73 ಕೆಜಿ ಹೀಗೆ 10 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಎಸ್.ಎಚ್. ಆನಂದೇಗೌಡ್ರು, ರಾಷ್ಟ್ರೀಯ ವೇಟ್ ಲಿಫ್ಟರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ