ಮೈಸೂರು: ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್) ಕನ್ನಡ ಭಾಷೆ ಅಭಿವೃದ್ಧಿ ಶ್ರಮಿಸುತ್ತಿಲ್ಲ. ಈ ವರೆಗೆ ಕನ್ನಡದ ಕುರಿತು ಮಾಡಿರುವ ಕೆಲಸವನ್ನು ಜನರ ಮುಂದೆ ಇಡಬೇಕು ಎಂದು ಸಾಹಿತಿ ಡಾ.ರಾಜಶೇಖರ ಜಮದಂಡಿ ಆಗ್ರಹಿಸಿದರು.
ಅಖೀಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸದ್ದ ಪ್ರೊ.ಚಂದ್ರಶೇಖರ ಪಾಟೀಲರ ಬದುಕು ಮತ್ತು ಬರಹ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪರಭಾಷಿಕರು ಷಡ್ಯಂತ್ರ: ಸಿಐಐಎಲ್‌ನಲ್ಲಿ ಸಿಲುಕಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ತತ್ತರಿಸಿ ಹೋಗಿದೆ. ಶಾಸ್ತ್ರೀಯ ಕನ್ನಡ ಭಾಷೆಗೆ ಸ್ವಾಯತ್ತತೆ ದೊರೆಯದಂತೆ ಸಿಐಐಎಲ್‌ನಲ್ಲಿರುವ ಪರಭಾಷಿಕರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದೂರಿದರು.
ಸ್ಥಾನಮಾನ ಸಿಕ್ಕರೂ ಸ್ವಾಯತ್ತತೆ ಸಿಕ್ಕಿಲ್ಲ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಚಂಪಾ ಸಹ ಹೋರಾಟ ಮಾಡಿದ್ದರು. ಆದರೀಗ ಸ್ಥಾನಮಾನ ಸಿಕ್ಕರೂ ಸ್ವಾಯತ್ತತೆ ಸಿಕ್ಕಿಲ್ಲ. ಇದಕ್ಕೆ ಅನೇಕರು ತೊಡರುಗಾಲು ಹಾಕುತ್ತಿದ್ದಾರೆ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು 18 ಪುಸ್ತಕಗಳನ್ನು ಸಿದ್ಧ ಪಡಿಸಿದೆ. ಆದರೆ, ಅದನ್ನು ಸಿಐಐಎಲ್ ಅಧಿಕಾರಿಗಳು ಮುದ್ರಿಸುತ್ತಿಲ್ಲ. ಪುಸ್ತಕಗಳು ಪ್ರಕಟಗೊಂಡರೆ ಕನ್ನಡ ಭಾಷೆಗೆ ಸ್ವಾಯತ್ತತೆ ದೊರೆತು ತಲೆಎತ್ತಿ ನಿಲ್ಲುತ್ತದೆ ಎಂಬ ಕಾರಣದಿಂದ ಸಿಐಐಎಲ್ ನಲ್ಲಿರುವ ಕೆಲವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮಾತನಾಡಿ, ಚಂಪಾ ಕನ್ನಡದ ವಿಚಾರದಲ್ಲಿ ಗಟ್ಟಿ ನಿಲುವು ಹೊಂದಿದ್ದರು. ಕನ್ನಡಕ್ಕೆ ಧಕ್ಕೆ ಬಂದಾಗ, ವರ್ತಮಾನದ ವಿದ್ಯಮಾನಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದರು ಎಂದರು. ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಚಂಪಾ ಸಮಗ್ರ ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಬೇಕು. ಯುವ ಬರಹಗಾರರು ಚಂಪಾ ಕೃತಿಗಳನ್ನು ಓದಬೇಕು ಎಂದರು.
ಚಂಪಾ ಬದುಕು ಬರಹ ಕುರಿತು ಮಹಾರಾಜ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ಷಹಸೀನಾ ಬೇಗಂ ವಿಚಾರ ಮಂಡಿಸಿದರು. ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು, ವೇದಿಕೆ ಅಧ್ಯಕ್ಷ ಸುರೇಶ್ ಜೀವನ್ಮುಖೀ ಇತರರು ಇದ್ದರು.