ಮಣಿಪಾಲ/ಮಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವಿನಲ್ಲಿ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಆಯೋಜಿಸಿದೆ.
ಯುವಕರು ಸೃಜನಶೀಲತೆ, ಕೌಶಲ, ಕ್ರಿಯಾಶೀಲತೆ ವ್ಯಕ್ತಪಡಿಸಲು ಹಾಗೂ ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ವೇದಿಕೆಯಾಗಿದೆ. ವಿಜ್ಞಾನದ ತತ್ವಗಳನ್ನು ಬೆಳೆಸಿಕೊಂಡು ಜನಸಾಮಾನ್ಯರಿಗೆ ಉಪಯುಕ್ತ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಈ ಸ್ಪರ್ಧೆ ರಾಜ್ಯಾದ್ಯಂತ ಆಯೋಜಿಸಲಾಗುತ್ತದೆ.
ಮೊದಲ ಹಂತದಲ್ಲಿ ಆಯ್ದ 6 ಶೈಕ್ಷಣಿಕ ವಿಭಾಗಗಳಲ್ಲಿ ವಿಭಾಗ ಮಟ್ಟದ ಸ್ಪರ್ಧೆಯನ್ನು ಮತ್ತು ಎರಡನೆಯ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.
ಈ ಸ್ಪರ್ಧೆಯ ಅಂಗವಾಗಿ ಮನುಕುಲಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಕೇಂದ್ರ ವಿಷಯದಡಿ 5 ಉಪ ಶೀರ್ಷಿಕೆಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳು ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಿದ್ದಾರೆ. ವಿಭಾಗ ಮಟ್ಟದ ಸ್ಪರ್ಧೆಯನ್ನು ಮಾರ್ಚ್ ತಿಂಗಳಿನಲ್ಲಿ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯನ್ನು ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಯೋಜಿಸಲಾಗುವುದು.
ಉಪ ಶೀರ್ಷಿಕೆಗಳು: ಶುದ್ಧ ಮತ್ತು ಹಸಿರು ಶಕ್ತಿ, ಆಹಾರ ಆರೋಗ್ಯ ಮತ್ತು ನೈರ್ಮಲ್ಯ, ಬಾಹ್ಯಾಕಾಶ ಹುಡುಕಾಟ, ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ, ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ.ವಿಭಾಗ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಪ್ರತಿ ಉಪ ಶೀರ್ಷಿಕೆಗೆ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನಗಳನ್ನೂ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸ ಲಾಗುವುದು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮಾತ್ರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕರಾವಿಪ ಕಚೇರಿಯಿಂದ ಅಥವಾ ಕರಾವಿಪ ವೆಬ್‌ಸೈಟ್
www.krvp.org ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಮಾ. 2ರ ಒಳಗೆ ಕರಾವಿಪ ಕೇಂದ್ರ ಕಚೇರಿ, ವಿಜ್ಞಾನ ಭವನ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ದೂರವಾಣಿ:
080-2671839 ಸಂಪರ್ಕಿಸುವಂತೆ ಕರಾವಿಪ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೆàವಾಡ್ ತಿಳಿಸಿದ್ದಾರೆ.